Fact Check: ಪಾನ್ ಮಸಾಲಾ ಬಿಸಿಸಿಐನ ಹೊಸ ಪ್ರಾಯೋಜಕತ್ವ?, ವೈರಲ್ ಸುದ್ದಿಯ ಸತ್ಯ ಇಲ್ಲಿದೆ ನೋಡಿ
BCCI New Sponsorship: 2025 ರ ಏಷ್ಯಾಕಪ್‌ಗೆ ಕೆಲವೇ ವಾರಗಳ ಮೊದಲು, ಟೀಮ್ ಇಂಡಿಯಾದ ಪ್ರಮುಖ ಪ್ರಾಯೋಜಕತ್ವದಿಂದ ಡ್ರೀಮ್11 ನಿರ್ಗಮಿಸಿರುವುದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ. ಇದರಲ್ಲಿ ಪಾನ್ ಮಸಾಲಾ ಬಿಸಿಸಿಐನ ಹೊಸ ಪ್ರಾಯೋಜಕತ್ವ ಎನ್ನಲಾಗುತ್ತಿದೆ.

ಬೆಂಗಳೂರು (ಆ. 27): 2025 ರ ಏಷ್ಯಾ ಕಪ್ ಟೂರ್ನಿಗೆ ಇನ್ನೇನು ಕೆಲವೇ ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಪ್ರಾಯೋಜಕತ್ವದ ಸಮಸ್ಯೆಯನ್ನು ಎದುರಿಸುತ್ತಿದೆ. ಆನ್‌ಲೈನ್ ಹಣದ ಆಟಗಳನ್ನು ನಿಷೇಧಿಸುವ ಕಾನೂನು ಜಾರಿಗೆ ಬಂದ ಕಾರಣ ಟೀಮ್ ಇಂಡಿಯಾದ ಪ್ರಸ್ತುತ ಶೀರ್ಷಿಕೆ ಪ್ರಾಯೋಜಕ ಡ್ರೀಮ್ -11 ಹಿಂದೆ ಸರಿದಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಮಂಡಳಿ ಮತ್ತು ಡ್ರೀಮ್ -11 ಒಪ್ಪಂದವನ್ನು ಅರ್ಧದಲ್ಲೇ ಕೊನೆಗೊಳಿಸಿವೆ ಮತ್ತು ಅಂತಹ ಕಂಪನಿಗಳೊಂದಿಗೆ ಇನ್ನು ಮುಂದೆ ಯಾವುದೇ ಪ್ರಾಯೋಜಕತ್ವ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈಗ ಏಷ್ಯಾ ಕಪ್‌ಗೆ ಮೊದಲು ಹೊಸ ಪ್ರಾಯೋಜಕರನ್ನು ಆಯ್ಕೆ ಮಾಡುವ ಸವಾಲನ್ನು ಬಿಸಿಸಿಐ ಎದುರಿಸುತ್ತಿದೆ.
ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಹೊಸ ಪ್ರಾಯೋಜಕರನ್ನು ನೇಮಿಸಿಕೊಳ್ಳಲು ಮತ್ತು ಪುರುಷರ ರಾಷ್ಟ್ರೀಯ ತಂಡದ ಜೆರ್ಸಿಗಳನ್ನು ಮರುಮುದ್ರಿಸಲು ಮಂಡಳಿಯು ಈಗ ತರಾತುರಿಯಲ್ಲಿ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ. ಬಿಸಿಸಿಐ ಪ್ರಾಯೋಜಿಕತ್ವಕ್ಕೆ ವಿಮಲ್ ಪಾನ್ ಪ್ರಮುಖ ಸ್ಪರ್ಧಿ ಎಂದು ಘೋಷಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ನಟ ಅಜಯ್ ದೇವಗನ್ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ವಿಮಲ್ ಲೋಗೋ ಇರುವ ಟೀಮ್ ಇಂಡಿಯಾ ಜೆರ್ಸಿಯನ್ನು ಹಿಡಿದಿರುವ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಜೊತೆಗೆ ‘‘ಬಿಸಿ ಬಿಸಿ ಸುದ್ದಿ- ಬಿಸಿಸಿಐ ಒಪ್ಪಂದಕ್ಕೆ ವಿಮಲ್ ಪಾನ್ ಮಸಾಲ ಸಂಭಾವ್ಯ ಪ್ರಾಯೋಜಕರಾಗುವ ನಿರೀಕ್ಷೆಯಿದ್ದು, ಒಪ್ಪಂದವು 2028 ರವರೆಗೆ ವಿಸ್ತರಿಸುವ ನಿರೀಕ್ಷೆಯಿದೆ.’’ ಎಂದು ಬರೆಯಲಾಗಿದೆ.
ಪಾನ್ ಮಸಾಲಾ ಬಿಸಿಸಿಐನ ಹೊಸ ಪ್ರಾಯೋಜಕತ್ವ ಸುಳ್ಳು ಸುದ್ದಿ:
ಟಿವಿ9 ಕನ್ನಡ ಈ ವೈರಲ್ ಹೇಳಿಕೆಯನ್ನು ಸತ್ಯಾಂಶ ಪರಿಶೀಲಿಸಿದೆ ಮತ್ತು ಇದು ದಾರಿತಪ್ಪಿಸುವ ಮತ್ತು ಸುಳ್ಳು ಎಂಬುದು ಕಂಡುಬಂದಿದೆ. ನಿಜಾಂಶವನ್ನು ತಿಳಿಯಲು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ಚಿತ್ರವಿರುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ವಿಶ್ವಾಸಾರ್ಹ ಮೂಲಗಳು ಸಿಗಲಿಲ್ಲ. ಬಿಸಿಸಿಐ, ಅಜಯ್ ದೇವಗನ್ ಅಥವಾ ವಿಮಲ್ ಬ್ರ್ಯಾಂಡ್ ಆಗಲಿ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಅಂತಹ ಯಾವುದೇ ಹೇಳಿಕೆಯನ್ನು ಪೋಸ್ಟ್ ಮಾಡಿಲ್ಲ.
ಪಾನ್ ಮಸಾಲಾ ಬಿಸಿಸಿಐನ ಹೊಸ ಪ್ರಾಯೋಜಕತ್ವಕ್ಕೆ ಮುಂದೆ ಬಂದಿರುವುದು ನಿಜವಾಗಿದ್ದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ಆದರೆ, ಸತ್ಯಕ್ಕೆ ಹತ್ತಿರವಾಗಿರುವ ಒಂದೇ ಒಂದು ಸುದ್ದಿಯಿಲ್ಲ. ಬಿಸಿಸಿಐ ಸದ್ಯ ಭಾರತೀಯ ತಂಡಕ್ಕೆ ಅಧಿಕೃತ ಪ್ರಾಯೋಜಕರನ್ನು ಹುಡುಕುತ್ತಿದೆ, ಆದರೆ ಈವರೆಗೆ ಬಿಸಿಸಿಐನಿಂದ ಯಾವುದೇ ದೃಢೀಕರಣ ಬಂದಿಲ್ಲ. ಆದ್ದರಿಂದ, ಈ ವರದಿಗಳು ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಟೊಯೋಟಾ ಮೋಟಾರ್ಸ್ ಆಸಕ್ತಿ
ಭಾರತ ತಂಡವು ಯಾವುದೇ ಪ್ರಾಯೋಜಕರಿಲ್ಲದೆ ಏಷ್ಯಾಕಪ್‌ಗೆ ಪ್ರವೇಶಿಸುವ ಸಾಧ್ಯತೆ ಕೂಡ ಇದೆ. ಆದರೆ ಈ ಮಧ್ಯೆ, ಪ್ರಸಿದ್ಧ ಆಟೋಮೊಬೈಲ್ ಕಂಪನಿ ಟೊಯೋಟಾ ಟೀಮ್ ಇಂಡಿಯಾವನ್ನು ಪ್ರಾಯೋಜಿಸಲು ಆಸಕ್ತಿ ತೋರಿಸಿದೆ. ವರದಿಯ ಪ್ರಕಾರ, ಜಪಾನ್‌ನ ಪ್ರಸಿದ್ಧ ಕಾರು ಕಂಪನಿ ಟೊಯೋಟಾ ಭಾರತೀಯ ತಂಡದ ಶೀರ್ಷಿಕೆ ಪ್ರಾಯೋಜಕರಾಗಲು ಬಯಸಿದೆ. ಈ ಕಂಪನಿಯು ಟೊಯೋಟಾ ಕಿರ್ಲೋಸ್ಕರ್ ಜೊತೆ ಜಂಟಿ ಉದ್ಯಮದಡಿಯಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕಳೆದ ಹಣಕಾಸು ವರ್ಷದಲ್ಲಿ, ಇದು 56500 ಕೋಟಿ ರೂ. ಗಳಿಗಿಂತ ಹೆಚ್ಚು ಗಳಿಸಿದೆ. ಈಗ ಅಂತಹ ದೊಡ್ಡ ಕಂಪನಿಯು ಪ್ರಾಯೋಜಕತ್ವದಲ್ಲಿ ಆಸಕ್ತಿ ತೋರಿಸಿದರೆ, ಬಿಸಿಸಿಐ ಅದನ್ನು ಪರಿಗಣಿಸುವ ಸಾಧ್ಯತೆಯಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




