ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 362 ರನ್ ದಾಖಲಿಸಿ, ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅಧಿಕ ಮೊತ್ತ ಕಲೆಹಾಕಿದ ದಾಖಲೆ ಬರೆದಿದೆ. ನ್ಯೂಜಿಲೆಂಡ್ ಪರ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದರು. ಆರಂಭಿಕ ರಚಿನ್ ರವೀಂದ್ರ (Rachin Ravindra) 108 ರನ್ ಮತ್ತು ಕೇನ್ ವಿಲಿಯಮ್ಸನ್ 102 ರನ್ ಗಳಿಸಿದರು. ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಕೂಡ ತಲಾ 49 ರನ್ ಗಳಿಸಿ ನ್ಯೂಜಿಲೆಂಡ್ ತಂಡವನ್ನು ಈ ಬೃಹತ್ ಸ್ಕೋರ್ ತಲುಪುವಂತೆ ಮಾಡಿದರು.
ಮೇಲೆ ಹೇಳಿದಂತೆ ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ನ್ಯೂಜಿಲೆಂಡ್ ತಂಡವು ಅತ್ಯಧಿಕ ಸ್ಕೋರ್ ಗಳಿಸಿದ ಸಾಧನೆ ಮಾಡಿದೆ. ಇದೇ ಪಂದ್ಯಾವಳಿಯಲ್ಲಿ, ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ 356 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಮಾಡಿತ್ತು. ಆದರೆ ಇದೀಗ ನ್ಯೂಜಿಲೆಂಡ್ 362 ರನ್ ಬಾರಿಸಿ ಆ ದಾಖಲೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ, 350 ಕ್ಕಿಂತ ಹೆಚ್ಚು ಸ್ಕೋರ್ ಮೂರು ಬಾರಿ ದಾಖಲಾಗಿದೆ. ಈ ಆವೃತ್ತಿಯಲ್ಲೇ ಮೂರು ಬಾರಿ 350 ರನ್‌ಗಳ ಗಡಿ ದಾಟಿರುವುದು ವಿಶೇಷ ಸಂಗತಿಯಾಗಿದೆ.
ಇದಲ್ಲದೆ ಮೊದಲ ಬಾರಿಗೆ, ನ್ಯೂಜಿಲೆಂಡ್ ತಂಡ ವಿದೇಶದಲ್ಲಿ ಐಸಿಸಿ ಏಕದಿನ ಪಂದ್ಯಾವಳಿಯ ನಾಕೌಟ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ದಾಖಲೆ ಬರೆದಿದೆ. 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್ ತಂಡ 393 ರನ್ ಗಳಿಸಿತ್ತು, ಆ ಸ್ಕೋರ್ ವೆಲ್ಲಿಂಗ್ಟನ್‌ನಲ್ಲಿ ದಾಖಲಾಗಿತ್ತು. ಇದರ ಜೊತೆಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯವೊಂದರಲ್ಲಿ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ತನ್ನದೇ ಆದ ದಾಖಲೆಯನ್ನು ನ್ಯೂಜಿಲೆಂಡ್ ತಂಡ ಮುರಿದಿದೆ. 2004 ರಲ್ಲಿ, ನ್ಯೂಜಿಲೆಂಡ್ ಅಮೆರಿಕ ವಿರುದ್ಧ 40 ಬೌಂಡರಿಗಳನ್ನು ಬಾರಿಸಿತ್ತು. ಆದರೆ ಈ ಬಾರಿ ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 43 ಬೌಂಡರಿಗಳನ್ನು ಬಾರಿಸಿದೆ. ಆದಾಗ್ಯೂ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ದಾಖಲೆಯನ್ನು ಆಸ್ಟ್ರೇಲಿಯಾ ಹೊಂದಿದ್ದು, ಕಾಂಗರೂ ಪಡೆ ಲಾಹೋರ್‌ನಲ್ಲಿಯೇ 45 ಬೌಂಡರಿ ಕಲೆಹಾಕಿತ್ತು.
ಇದನ್ನೂ ಓದಿ: NZ vs SA: ಐಸಿಸಿ ಟೂರ್ನಿಗಳಲ್ಲಿ ಹೆಚ್ಚು ಶತಕ; ವಿಶ್ವ ದಾಖಲೆ ಸೃಷ್ಟಿಸಿದ ಕನ್ನಡಿಗ ರಚಿನ್ ರವೀಂದ್ರ
ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪ್ರವೇಶಿಸಲು ನ್ಯೂಜಿಲೆಂಡ್‌ಗೆ ಅವಕಾಶವಿದೆ. ಐಸಿಸಿ ಟೂರ್ನಿಗಳ ಇತಿಹಾಸದಲ್ಲಿ ಯಾವುದೇ ತಂಡವು 300 ಕ್ಕಿಂತ ಹೆಚ್ಚು ರನ್‌ಗಳ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ. ಆದರೆ, ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದೆ. ಒಂದು ವೇಳೆ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿದರೆ, ಮಾರ್ಚ್ 9 ರಂದು ನಡೆಯಲಿರುವ ಪ್ರಶಸ್ತಿ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Wed, 5 March 25