ಸೆಮಿಫೈನಲ್​ಗೆ ನ್ಯೂಜಿಲೆಂಡ್ ಎಂಟ್ರಿ; ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಹೆಚ್ಚಾಯ್ತು ಸಂಕಷ್ಟ..!

| Updated By: ಪೃಥ್ವಿಶಂಕರ

Updated on: Nov 04, 2022 | 1:24 PM

T20 World Cup 2022: ಕಿವೀಸ್ ಗೆಲುವಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ಕಷ್ಟಗಳು ಹೆಚ್ಚಿವೆ. ಆತಿಥೇಯರು ಪ್ರಸ್ತುತ ಮೂರನೇ ಸ್ಥಾನದಲ್ಲಿದ್ದು ಕೇವಲ ಐದು ಅಂಕಗಳನ್ನು ಹೊಂದಿದ್ದಾರೆ.

ಸೆಮಿಫೈನಲ್​ಗೆ ನ್ಯೂಜಿಲೆಂಡ್ ಎಂಟ್ರಿ; ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಹೆಚ್ಚಾಯ್ತು ಸಂಕಷ್ಟ..!
nz vs ire
Follow us on

ಕೇನ್ ವಿಲಿಯಮ್ಸನ್ (Kane Williamson) ಅವರ ಬಿರುಸಿನ ಅರ್ಧಶತಕದ ಆಧಾರದ ಮೇಲೆ ನ್ಯೂಜಿಲೆಂಡ್ ತಂಡ ಐರ್ಲೆಂಡ್ ತಂಡವನ್ನು (New Zealand defeated Ireland) 35 ರನ್​ಗಳಿಂದ ಸೋಲಿಸಿ ಟಿ20 ವಿಶ್ವಕಪ್‌ನ (T20 World Cup 2022) ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಅಡಿಲೇಡ್‌ನಲ್ಲಿ ನಡೆದ ಈ ಮಹತ್ವದ ಪಂದ್ಯದಲ್ಲಿ, ಕಿವೀಸ್ ತಂಡ ಮೊದಲು ಬ್ಯಾಟಿಂಗ್‌ ಮಾಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್‌ಗಳ ದೊಡ್ಡ ಸ್ಕೋರ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ತಂಡ ಆಡಿರುವ ಐದು ಪಂದ್ಯಗಳ ನಂತರ ಏಳು ಅಂಕಗಳನ್ನು ಹೊಂದಿದ್ದು ಮೊದಲನೇ ಗ್ರೂಪ್​ನಲ್ಲಿ ಅಗ್ರಸ್ಥಾನದಲ್ಲಿದೆ. ಇದರೊಂದಿಗೆ ಸೆಮಿಫೈನಲ್‌ ಟಿಕೆಟ್ ಸಹ ಖಚಿತಪಡಿಸಿಕೊಂಡಿದೆ. ಆದರೆ ಈಗ ಕಿವೀಸ್ ಗೆಲುವಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ಕಷ್ಟಗಳು ಹೆಚ್ಚಿವೆ. ಆತಿಥೇಯರು ಪ್ರಸ್ತುತ ಮೂರನೇ ಸ್ಥಾನದಲ್ಲಿದ್ದು ಕೇವಲ ಐದು ಅಂಕಗಳನ್ನು ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಕೂಡ ಐದು ಅಂಕಗಳನ್ನು ಹೊಂದಿದೆ ಆದರೆ ಅದರ ನೆಟ್ ರನ್ ರೇಟ್ ಆಸ್ಟ್ರೇಲಿಯಾಕ್ಕಿಂತ ಉತ್ತಮವಾಗಿದೆ. ಹೀಗಾಗಿ ಉಳಿದರುವ ಕೊನೆಯ ಪಂದ್ಯವನ್ನು ಆಸೀಸ್ ಪಡೆ ಭಾರೀ ಅಂತರದಲ್ಲಿ ಗೆದ್ದರೂ ಸಹ ಇಂಗ್ಲೆಂಡ್ ತಂಡದ ಪಲಿತಾಂಶದ ಮೇಲೆ ಅದರ ಸೇಮಿಸ್ ಹಾದಿ ನಿರ್ಧಾರವಾಗಲಿದೆ.

ಟಾಸ್ ಗೆದ್ದ ಐರ್ಲೆಂಡ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಜೊತೆಗೆ ಎರಡೂ ತಂಡಗಳು ಸಹ ತನ್ನ ಆಡುವ ಇಲೆವೆನ್​ನಲ್ಲಿ ಬದಲಾವಣೆ ಮಾಡದೆ ಹಳೆಯ ತಂಡವನ್ನೇ ಕಣಕ್ಕಿಳಿಸಿದ್ದವು. ಈ ಪಂದ್ಯದಲ್ಲಿ ಕಿವೀಸ್ ತಂಡದ ನಾಯಕ ಕೇನ್ ಬಿರುಸಾಗಿ ಬ್ಯಾಟಿಂಗ್‌ ಮಾಡುವುದರೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಾಗೆಯೇ ಆರಂಭಿಕರಾಗಿ ಕಣಕ್ಕಿಳಿದಿದ್ದ ಫಿಲ್ ಅಲೆನ್ 31 ರನ್​ಗಳ ಕೊಡುಗೆ ನೀಡಿದರೆ, ಕಾನ್ವೆ ಕೂಡ 28 ರನ್​ಗಳ ಇನ್ನಿಂಗ್ಸ್ ಆಡಿದರು. ಅಂತಿಮ ಹಂತದಲ್ಲಿ ಮಿಚೆಲ್ ಕೂಡ 31 ರನ್ ಬಾರಿಸಿದ್ದರಿಂದ ಕಿವೀಸ್ ಪಡೆ 185 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು.

ಇದನ್ನೂ ಓದಿ: ‘ಪಿಚ್​ನಲ್ಲಿ ನಿದ್ದೆ ಮಾಡಿದ್ರೆ ಹೀಗೆ ಆಗೋದು’; ಅನುಭವಿ ಇಫ್ತಿಕರ್ ವಿರುದ್ಧ ಮುನಿದ ಪಾಕ್ ಮಾಜಿ ನಾಯಕ

ಕೇನ್ ಅದ್ಭುತ ಬ್ಯಾಟಿಂಗ್

ಕಳೆದ ಕೆಲವು ಪಂದ್ಯಗಳಲ್ಲಿ ವಿಫಲರಾಗಿದ್ದ ಕೇನ್, ಈ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿ ಕೇವಲ 35 ಎಸೆತಗಳಲ್ಲಿ 61 ರನ್ ಗಳಿಸಿದರು. ಅಲ್ಲದೆ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ನೂರಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ವಿಲಿಯಮ್ಸನ್, ತಮ್ಮ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಸಹ ಹೊಡೆದರು. ಐರ್ಲೆಂಡ್ ಪರ ಎಡಗೈ ವೇಗಿ ಲಿಟಲ್ ಡೆತ್ ಓವರ್‌ಗಳಲ್ಲಿ ನ್ಯೂಜಿಲೆಂಡ್‌ನ ರನ್ ರೇಟ್‌ಗೆ ಕಡಿವಾಣ ಹಾಕಿದರು. ಅಲ್ಲದೆ 19ನೇ ಓವರ್‌ನಲ್ಲಿ ಅವರು ಸತತ ಮೂರು ಎಸೆತಗಳಲ್ಲಿ ವಿಲಿಯಮ್ಸನ್, ಜಿಮ್ಮಿ ನೀಶಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರ ವಿಕೆಟ್‌ಗಳನ್ನು ಪಡೆದು ಹ್ಯಾಟ್ರಿಕ್ ಸಾಧನೆ ಕೂಡ ಮಾಡಿದರು.

ಐರ್ಲೆಂಡ್ ಉತ್ತಮ ಆರಂಭ

ಗುರಿ ಬೆನ್ನಟ್ಟಿದ ಐರ್ಲೆಂಡ್‌ಗೆ ಪಾಲ್ ಸ್ಟರ್ಲಿಂಗ್ ಮತ್ತು ಆಂಡ್ರ್ಯೂ ಉತ್ತಮ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 68 ರನ್‌ಗಳ ಜೊತೆಯಾಟವಾಡಿದರು. ಆದಾಗ್ಯೂ, ಇಬ್ಬರೂ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಇಲ್ಲಿಂದ ಐರ್ಲೆಂಡ್‌ನ ಸಂಕಷ್ಟ ಪ್ರಾರಂಭವಾಯಿತು. ತಂಡವು ಆಗಾಗ್ಗೆ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ಅಂತಿಮವಾಗಿ 9 ವಿಕೆಟ್ ಕಳೆದುಕೊಂಡ ಐರ್ಲೆಂಡ್ 20 ಓವರ್​ಗಳಲ್ಲಿ 150 ರನ್ ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ ಮೂರು, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್ ಮತ್ತು ಟಿಮ್ ಸೌಥಿ ತಲಾ 2 ವಿಕೆಟ್ ಪಡೆದರು.

ನಾಲ್ಕನೇ ಬಾರಿಗೆ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್

ನ್ಯೂಜಿಲೆಂಡ್ ತಂಡ ನಾಲ್ಕನೇ ಬಾರಿಗೆ ಈ ಟೂರ್ನಿಯಲ್ಲಿ ಫೈನಲ್ ತಲುಪಿದೆ. ಕಳೆದ ವರ್ಷ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ನ್ಯೂಜಿಲೆಂಡ್ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಫೈನಲ್​ನಲ್ಲಿ ಆಸ್ಟ್ರೇಲಿಯಾ ಎದುರು ಸೋತು ನಿರಾಸೆ ಅನುಭವಿಸಿತ್ತು. ಅಲ್ಲದೆ ನ್ಯೂಜಿಲೆಂಡ್ ತಂಡ 2007 ರಲ್ಲಿ ನಡೆದ ಮೊದಲ ವಿಶ್ವಕಪ್‌ನಲ್ಲೂ ಸೆಮಿ-ಫೈನಲ್ ತಲುಪಿತ್ತು. ಇದರ ನಂತರ, ಮುಂದಿನ ನಾಲ್ಕು ವಿಶ್ವಕಪ್‌ಗಳಲ್ಲಿ ಕಿವೀಸ್ ಪಡೆಗೆ ಎರಡನೇ ಸುತ್ತನ್ನು ಮೀರಿ ಮುನ್ನಡೆಯಲು ಸಾಧ್ಯವಾಗಲಿಲ್ಲ. ಆದರೆ 2016ರಲ್ಲಿ ಸೆಮಿಫೈನಲ್ ತಲುಪುವಲ್ಲಿ ನ್ಯೂಜಿಲೆಂಡ್ ತಂಡ ಯಶಸ್ವಿಯಾಗಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:20 pm, Fri, 4 November 22