NZ vs SA: ಸೌತ್ ಆಫ್ರಿಕಾ ವಿರುದ್ಧ ನ್ಯೂಝಿಲೆಂಡ್ಗೆ ಭರ್ಜರಿ ಜಯ
New Zealand vs South Africa: ನ್ಯೂಝೀಲೆಂಡ್ ವಿರುದ್ಧದ ಈ ಸರಣಿಗಾಗಿ ಸೌತ್ ಆಫ್ರಿಕಾ ದ್ವಿತೀಯ ದರ್ಜೆಯ ತಂಡವನ್ನು ಕಣಕ್ಕಿಳಿಸಿತು. ಸೌತ್ ಆಫ್ರಿಕಾದಲ್ಲಿ ಟಿ20 ಲೀಗ್ ನಡೆಯುತ್ತಿರುವುದರಿಂದ ಪ್ರಮುಖ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದರು. ಹೀಗಾಗಿ ಅನಾನುಭವಿ ಆಟಗಾರರನ್ನು ಒಳಗೊಂಡ ಹೊಸ ತಂಡವನ್ನು ಈ ಸರಣಿಗೆ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಆಯ್ಕೆ ಮಾಡಿದೆ.
ಮೌಂಟ್ ಮೌಂಗನುಯಿ ಬೇ ಓವಲ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ (South Africa) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ (New Zealand) ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಪರ ಕೇನ್ ವಿಲಿಯಮ್ಸನ್ (118) ಶತಕ ಬಾರಿಸಿದರೆ, ಯುವ ಎಡಗೈ ದಾಂಡಿಗ ರಚಿನ್ ರವೀಂದ್ರ (240) ದ್ವಿಶತಕ ಸಿಡಿಸಿದರು.
ಈ ಶತಕ ಹಾಗೂ ದ್ವಿಶತಕಗಳ ನೆರವಿನಿಂದ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 511 ರನ್ ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಪರ ಯಾವುದೇ ಬ್ಯಾಟರ್ಗೂ ಅರ್ಧಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮ ಸೌತ್ ಆಫ್ರಿಕಾ ಕೇವಲ 162 ರನ್ಗಳಿಗೆ ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು.
ದ್ವಿತೀಯ ಇನಿಂಗ್ಸ್:
349 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ಪರ ಈ ಬಾರಿ ಕೂಡ ಕೇನ್ ವಿಲಿಯಮ್ಸನ್ ಶತಕ ಬಾರಿಸಿದರು. 132 ಎಸೆತಗಳನ್ನು ಎದುರಿಸಿದ ವಿಲಿಯಮ್ಸನ್ 1 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 109 ರನ್ ಸಿಡಿಸಿದರು. ಈ ಮೂಲಕ ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿ ನ್ಯೂಝಿಲೆಂಡ್ ಡಿಕ್ಲೇರ್ ಘೋಷಿಸಿತು.
ದ್ವಿತೀಯ ಇನಿಂಗ್ಸ್ನಲ್ಲಿ 528 ರನ್ಗಳ ಬೃಹತ್ ಗುರಿ ಪಡೆದ ಸೌತ್ ಆಫ್ರಿಕಾ ತಂಡ ಪರ ಡೇವಿಡ್ ಬೆಡಿಂಗ್ಹ್ಯಾಮ್ 96 ಎಸೆತಗಳಲ್ಲಿ 87 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಲ್ಲದೆ 247 ರನ್ಗಳಿಗೆ ಆಲೌಟ್ ಆಗುವ ಮೂಲಕ 281 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಭರ್ಜರಿ ಗೆಲುವಿನೊಂದಿಗೆ 2 ಪಂದ್ಯಗಳ ಈ ಸರಣಿಯಲ್ಲಿ ನ್ಯೂಝಿಲೆಂಡ್ ತಂಡ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ , ಡೆವೊನ್ ಕಾನ್ವೆ , ಕೇನ್ ವಿಲಿಯಮ್ಸನ್ , ರಚಿನ್ ರವೀಂದ್ರ , ಡೇರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್ , ಕೈಲ್ ಜೇಮಿಸನ್ , ಟಿಮ್ ಸೌಥಿ (ನಾಯಕ) , ಮ್ಯಾಟ್ ಹೆನ್ರಿ.
ಇದನ್ನೂ ಓದಿ: VPL 2024: ಹೊಸ ಲೀಗ್ನಲ್ಲಿ ಕಣಕ್ಕಿಳಿಯಲಿದ್ದಾರೆ ಸಿಡಿಲಬ್ಬರದ ಸಿಡಿಲಮರಿ ಸೆಹ್ವಾಗ್
ಸೌತ್ ಆಫ್ರಿಕಾ ಪ್ಲೇಯಿಂಗ್ 11: ನೀಲ್ ಬ್ರಾಂಡ್ (ನಾಯಕ) , ಎಡ್ವರ್ಡ್ ಮೂರ್ , ರೇನಾರ್ಡ್ ವ್ಯಾನ್ ಟೋಂಡರ್ , ಜುಬೇರ್ ಹಮ್ಝ , ಡೇವಿಡ್ ಬೆಡಿಂಗ್ಹ್ಯಾಮ್ , ಕೀಗನ್ ಪೀಟರ್ಸನ್ , ರುವಾನ್ ಡಿ ಸ್ವಾರ್ಡ್ಟ್ , ಕ್ಲೈಡ್ ಫೋರ್ಚುಯಿನ್ (ವಿಕೆಟ್ ಕೀಪರ್) , ಡುವಾನ್ ಒಲಿವಿಯರ್ , ತ್ಶೆಪೋ ಮೊರೆಕಿ , ಡೇನ್ ಪ್ಯಾಟರ್ಸನ್.