10 ಭರ್ಜರಿ ಸಿಕ್ಸ್: ಪವರ್ಫುಲ್ ಶತಕ ಸಿಡಿಸಿದ ಪೂರನ್
Nicholas Pooran: ಮೊದಲ ವಿಕೆಟ್ ಪತನದೊಂದಿಗೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಚೆಂಡಾಡಿದರು. ಬಾರ್ಬಡೋಸ್ ರಾಯಲ್ಸ್ ಬೌಲರ್ಗಳು ವಿಕೆಟ್ ಪಡೆಯುತ್ತಿದ್ದರೆ, ಮತ್ತೊಂದೆಡೆ ಪೂರನ್ ಬೆಂಡೆತ್ತಿದರು.
ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ನಿಕೋಲಸ್ ಪೂರನ್ (ನಿಕ್ಕಿ-ಪಿ) ತೂಫಾನ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಬಾರ್ಬಡೋಸ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೂರನ್ ಅಜೇಯ ಸೆಂಚುರಿ ಸಿಡಿಸಿದರು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾರ್ಬಡೋಸ್ ರಾಯಲ್ಸ್ ತಂಡದ ನಾಯಕ ರೋವ್‌ಮನ್ ಪೊವೆಲ್ ಬೌಲಿಂಗ್ ಆಯ್ದುಕೊಂಡಿದ್ದರು.
ಇತ್ತ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಮಾರ್ಕ್ ಡೇಯಲ್ ಕೇವಲ 6 ರನ್ಗಳಿಸಿ ಕೈಲ್ ಮೇಯರ್ಸ್ಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಮತ್ತೋರ್ವ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 30 ಎಸೆತಗಳಲ್ಲಿ 35 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಪೂರನ್ ಪವರ್ಗೆ ತತ್ತರಿಸಿದ ರಾಯಲ್ಸ್:
ಮೊದಲ ವಿಕೆಟ್ ಪತನದೊಂದಿಗೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಚೆಂಡಾಡಿದರು. ಬಾರ್ಬಡೋಸ್ ರಾಯಲ್ಸ್ ಬೌಲರ್ಗಳು ವಿಕೆಟ್ ಪಡೆಯುತ್ತಿದ್ದರೆ, ಮತ್ತೊಂದೆಡೆ ಪೂರನ್ ಬೆಂಡೆತ್ತುತ್ತಿದ್ದರು.
ಪರಿಣಾಮ ನಿಕೋಲಸ್ ಪೂರನ್ ಬ್ಯಾಟ್ನಿಂದ ಕೇವಲ 51 ಎಸೆತಗಳಲ್ಲಿ ಶತಕ ಮೂಡಿಬಂತು. ಇನ್ನು ಕೆಳ ಕ್ರಮಾಂಕದಲ್ಲಿ ಆ್ಯಂಡ್ರೆ ರಸೆಲ್ 22 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 39 ರನ್ ಬಾರಿಸಿ ಉತ್ತಮ ಸಾಥ್ ನೀಡಿದರು.
ಅಂತಿಮವಾಗಿ 53 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ನಿಕೋಲಸ್ ಪೂರನ್ ಅಜೇಯ 102 ರನ್ ಬಾರಿಸಿದರು. ಇದರೊಂದಿಗೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಮೊತ್ತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ಕ್ಕೆ ಬಂದು ನಿಂತಿತು.
Pooran Perfection! The local boy has shown us what he can do once again. Queen’s Park Oval is on fire right now and Pooran 💯 lit the match! #CPL23 #TKRvBR #CricketPlayedLouder #BiggestPartyInSport #Pooran #NicholasPooran pic.twitter.com/CXpmEnSGbL
— CPL T20 (@CPL) September 7, 2023
ಕಠಿಣ ಟಾರ್ಗೆಟ್ ಪಡೆದ ಬಾರ್ಬಡೋಸ್ ರಾಯಲ್ಸ್:
209 ರನ್ಗಳ ಕಠಿಣ ಗುರಿ ಪಡೆದ ಬಾರ್ಬಡೋಸ್ ರಾಯಲ್ಸ್ ತಂಡಕ್ಕೆ ಕೈಲ್ ಮೇಯರ್ಸ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. 45 ಎಸೆತಗಳನ್ನು ಎದುರಿಸಿದ ಎಡಗೈ ದಾಂಡಿಗ 4 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 70 ರನ್ ಬಾರಿಸಿದರು.
ಆದರೆ ಮೇಯರ್ಸ್ರನ್ನು ಹೊರತುಪಡಿಸಿದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಬಾರ್ಬಡೋಸ್ ರಾಯಲ್ಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 166 ರನ್ಗಳಿಸಲಷ್ಟೇ ಶಕ್ತರಾದರು.
ಟ್ರಿನ್‌ಬಾಗೊ ನೈಟ್ ರೈಡರ್ಸ್ಗೆ ಭರ್ಜರಿ ಜಯ:
ಬಾರ್ಬಡೋಸ್ ರಾಯಲ್ಸ್ ತಂಡದ ಇನಿಂಗ್ಸ್ 166 ರನ್ಗಳಿಗೆ ಅಂತ್ಯವಾಗುವುದರೊಂದಿಗೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು 42 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕೀರನ್ ಪೊಲಾರ್ಡ್ ನೇತೃತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪಡೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಸದ್ಯ ಮೊದಲ ಸ್ಥಾನದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವಿದೆ.
ಟ್ರಿನ್‌ಬಾಗೊ ನೈಟ್ ರೈಡರ್ಸ್ ಪ್ಲೇಯಿಂಗ್ 11: ಮಾರ್ಟಿನ್ ಗಪ್ಟಿಲ್ , ಮಾರ್ಕ್ ಡೇಯಲ್ , ನಿಕೋಲಸ್ ಪೂರನ್ , ಲೋರ್ಕನ್ ಟಕರ್ (ವಿಕೆಟ್ ಕೀಪರ್) , ಕೀರನ್ ಪೊಲಾರ್ಡ್ (ನಾಯಕ) , ಅಕೇಲ್ ಹೊಸೈನ್ , ಆಂಡ್ರೆ ರಸೆಲ್ , ಸುನಿಲ್ ನರೈನ್ , ಅಲಿ ಖಾನ್ , ವಕಾರ್ ಸಲಾಮ್ಖೈಲ್ , ಜೇಡನ್ ಸೀಲ್ಸ್.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಬಾರ್ಬಡೋಸ್ ರಾಯಲ್ಸ್ ಪ್ಲೇಯಿಂಗ್ 11: ಕೈಲ್ ಮೇಯರ್ಸ್ , ರಹಕೀಮ್ ಕಾರ್ನ್‌ವಾಲ್ , ಲಾರಿ ಇವಾನ್ಸ್ , ಅಲಿಕ್ ಅಥಾನಾಝ್, ರೋವ್‌ಮನ್ ಪೊವೆಲ್ (ನಾಯಕ) , ಜೇಸನ್ ಹೋಲ್ಡರ್ , ನೈಮ್ ಯಂಗ್ , ರಿವಾಲ್ಡೊ ಕ್ಲಾರ್ಕ್ (ವಿಕೆಟ್) , ರೋಲೋಫ್ ವ್ಯಾನ್ ಡೆರ್ ಮೆರ್ವೆ , ಕೈಸ್ ಅಹ್ಮದ್ , ಒಬೆಡ್ ಮೆಕಾಯ್.