ನ್ಯೂಝಿಲೆಂಡ್ ವಿರುದ್ಧ ನೈಜೀರಿಯಾ ತಂಡಕ್ಕೆ ಐತಿಹಾಸಿಕ ಜಯ
ICC Under 19 Womens T20 World Cup 2025: ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳಾ ಅಂಡರ್-19 ಟಿ20 ವಿಶ್ವಕಪ್ನಲ್ಲಿ ನೈಜೀರಿಯಾ ತಂಡ ರೋಚಕ ಜಯ ಸಾಧಿಸಿದೆ. ಈ ಟೂರ್ನಿಯ 11ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡಕ್ಕೆ ಸೋಲುಣಿಸಿ ನೈಜೀರಿಯಾ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದೆ.
ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೈಜೀರಿಯಾ ತಂಡವು ಐತಿಹಾಸಿಕ ಜಯ ಸಾಧಿಸಿದೆ. ಅದು ಕೂಡ ಈಗಾಗಲೇ ಕ್ರಿಕೆಟ್ ಅಂಗಳದಲ್ಲಿ ತನ್ನದೇ ಛಾಪು ಹೊತ್ತಿರುವ ನ್ಯೂಝಿಲೆಂಡ್ ತಂಡವನ್ನು ಮಣಿಸುವ ಮೂಲಕ ಎಂಬುದು ವಿಶೇಷ. ಮಲೇಷ್ಯಾದ ಸರವಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು.
ಮಳೆಯ ಕಾರಣ ತಲಾ 13 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೈಜೀರಿಯಾ ಪರ ನಾಯಕಿ ಲಕ್ಕಿ ಪೈಟಿ 18 ರನ್ ಬಾರಿಸಿದರೆ, ಲಿಲಿಯನ್ ಉದೆ 19 ರನ್ ಕಲೆಹಾಕಿದರು. ಈ ಮೂಲಕ ನೈಜೀರಿಯಾ ತಂಡವು 13 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿತು.
13 ಓವರ್ಗಳಲ್ಲಿ 66 ರನ್ಗಳ ಸುಲಭ ಗುರಿ ಪಡೆದ ನ್ಯೂಝಿಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಎಮ್ಮಾ ಮೆಕ್ಲಿಯೋಡ್ 3 ರನ್ಗಳಿಸಿ ಔಟಾದರೆ, ಕೇಟ್ ಇರ್ವಿನ್ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಇನ್ನು ಈವ್ ವೊಲ್ಯಾಂಡ್ 14, ಅನಿಕಾ ಟಾಡ್ 19 ಹಾಗೂ ಕಿವೀಸ್ ತಂಡದ ನಾಯಕಿ ತಾಶ್ ವಾಕೆಲಿನ್ 18 ರನ್ ಬಾರಿಸಿದರು. ಪರಿಣಾಮ ನ್ಯೂಝಿಲೆಂಡ್ ತಂಡವು 12 ಓವರ್ಗಳ ಮುಕ್ತಾಯದ ವೇಳೆಗೆ 57 ರನ್ ಕಲೆಹಾಕಿತು.
ಕೊನೆಯ 6 ಎಸೆತಗಳಲ್ಲಿ ನ್ಯೂಝಿಲೆಂಡ್ ತಂಡಕ್ಕೆ ಗೆಲ್ಲಲು 9 ರನ್ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್ ಎಸೆದ ಲಿಲಿಯನ್ ಉದೆ ಕೇವಲ 6 ರನ್ ಮಾತ್ರ ಬಿಟ್ಟುಕೊಟ್ಟರು. ಈ ಮೂಲಕ 2 ರನ್ಗಳ ರೋಚಕ ಜಯದೊಂದಿಗೆ ನೈಜೀರಿಯಾ ಅಂಡರ್-19 ತಂಡವು ಐಸಿಸಿ ಟೂರ್ನಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ.
ನ್ಯೂಝಿಲೆಂಡ್ ಮಹಿಳಾ ಅಂಡರ್ 19 ಪ್ಲೇಯಿಂಗ್ 11: ಎಮ್ಮಾ ಮೆಕ್ಲಿಯೋಡ್ , ಕೇಟ್ ಇರ್ವಿನ್ , ಈವ್ ವೊಲಂಡ್ , ಅನಿಕಾ ಟಾಡ್ , ತಾಶ್ ವಾಕೆಲಿನ್ (ನಾಯಕಿ) , ಡಾರ್ಸಿ ರೋಸ್ ಪ್ರಸಾದ್ , ಅಯಾನ್ ಲ್ಯಾಂಬಾಟ್ , ಎಲಿಜಬೆತ್ ಬುಕಾನನ್ (ವಿಕೆಟ್ ಕೀಪರ್) , ಹನ್ನಾ ಫ್ರಾನ್ಸಿಸ್ , ಅನಿಕಾ ಟೌವಾರೆ , ಹನ್ನಾ ಒಕಾನ್ನರ್.
ಇದನ್ನೂ ಓದಿ: Champions Trophy 2025: ಟೀಮ್ ಇಂಡಿಯಾದಲ್ಲಿ 6 ಹಳೆ ಹುಲಿಗಳು
ನೈಜೀರಿಯಾ ಮಹಿಳಾ ಅಂಡರ್ 19 ಪ್ಲೇಯಿಂಗ್ 11: ಪೆಕ್ಯುಲಿಯರ್ ಅಗ್ಬೋಯಾ , ಲಕ್ಕಿ ಪಿಯೆಟಿ (ನಾಯಕಿ) , ಅಡೆಶೋಲಾ ಅಡೆಕುನ್ಲೆ , ಕ್ರಿಸ್ಟಾಬೆಲ್ ಚುಕ್ವುಯೋನಿ , ಯುಸೆನ್ ಪೀಸ್ , ಲಿಲಿಯನ್ ಉದೆ , ವಿಕ್ಟರಿ ಇಗ್ಬಿನೆಡಿಯನ್ , ಡೆಬೊರಾ ಬಸ್ಸಿ (ವಿಕೆಟ್ ಕೀಪರ್) , ಅನೋಯಿಂಟೆಡ್ ಅಖಿಗ್ಬೆ , ಮುಹಿಬತ್ ಅಮುಸಾ , ಒಮೊಕುನ್ಸ್.