IPL 2025: ಲಕ್ನೋ ತಂಡಕ್ಕೆ ರಿಷಬ್ ಪಂತ್ ನಾಯಕ; ಅಧಿಕೃತ ಘೋಷಣೆ
IPL 2025: ಲಕ್ನೋ ಸೂಪರ್ ಜೈಂಟ್ಸ್ ತಂಡವು ಐಪಿಎಲ್ 2025 ರ ಆವೃತ್ತಿಗೆ ರಿಷಭ್ ಪಂತ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಿದೆ. 27 ಕೋಟಿ ರೂಪಾಯಿಗಳ ದಾಖಲೆಯ ಮೊತ್ತಕ್ಕೆ ಹರಾಜಿನಲ್ಲಿ ಖರೀದಿಸಲ್ಪಟ್ಟ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಅನುಭವ ಹೊಂದಿದ್ದಾರೆ. ಲಕ್ನೋ ತಂಡದ ಮಾಲೀಕರಾದ ಸಂಜೀವ್ ಗೋಯಂಕಾ ಅವರು ಈ ಘೋಷಣೆಯನ್ನು ಮಾಡಿದ್ದು, ಪಂತ್ ಐಪಿಎಲ್ ನಲ್ಲಿ ಅತ್ಯುತ್ತಮ ನಾಯಕನಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.
Updated on: Jan 20, 2025 | 5:51 PM

18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಲಕ್ನೋ ಸೂಪರ್‌ಜೈಂಟ್ಸ್ ಫ್ರಾಂಚೈಸಿ ತನ್ನ ತಂಡಕ್ಕೆ ನೂತನ ನಾಯಕನನ್ನು ನೇಮಕ ಮಾಡಿದೆ. ಈ ಮೊದಲೇ ನಿರೀಕ್ಷಿಸಿದಂತೆ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ಗೆ ನಾಯಕತ್ವದ ಅಧಿಕಾರ ನೀಡಲಾಗಿದೆ.

ಈ ಹಿಂದೆ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಜಿದ್ದಿಗೆ ಬಿದ್ದು ರಿಷಬ್ ಪಂತ್ ಮೇಲೆ ದಾಖಲೆಯ ಮೊತ್ತವನ್ನು ಲಕ್ನೋ ಫ್ರಾಂಚೈಸಿ ಖರ್ಚು ಮಾಡಿತ್ತು. ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಅಂದರೆ ಬರೋಬ್ಬರಿ 27 ಕೋಟಿ ರೂಗಳಿಗೆ ಲಕ್ನೋ ತಂಡವನ್ನು ಸೇರಿಕೊಂಡಿದ್ದ ಪಂತ್ ಇದೀಗ ಮುಂಬರುವ ಆವೃತ್ತಿಯಿಂದ ತಂಡದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ಆವೃತ್ತಿಯವರೆಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಪಂತ್ಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಅವರ ನಾಯಕತ್ವದಲ್ಲಿ ತಂಡ ಒಮ್ಮೆಯೂ ಪ್ರಶಸ್ತಿ ಎತ್ತಿ ಹಿಡಿದಿರಲಿಲ್ಲ. ಆದಾಗ್ಯೂ ಪಂತ್ ಮೇಲೆ ಭರವಸೆ ಇಟ್ಟಿರುವ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯಂಕಾ ಅವರು ತಂಡದ ಸಾರಥ್ಯವನ್ನು ವಹಿಸಿಕೊಟ್ಟಿದೆ.

ನಾಯಕನ ಘೋಷಣೆಗಾಗಿಯೇ ಖಾಸಗಿ ವಾಹಿನಿಯ ಸಂವಾದದಲ್ಲಿ ಭಾಗಿಯಾಗಿದ್ದ ಲಕ್ನೋ ಸೂಪರ್‌ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ರಿಷಬ್ ಪಂತ್ ಅವರನ್ನು ನಾಯಕನನ್ನಾಗಿ ನೇಮಿಸಿರುವುದಾಗಿ ತಿಳಿಸಿದ್ದಾರೆ. ಈ ಘೋಷಣೆಯ ಜೊತೆಗೆ, ರಿಷಬ್ ಪಂತ್ ಈ ತಂಡಕ್ಕೆ ಮಾತ್ರವಲ್ಲದೆ ಇಡೀ ಐಪಿಎಲ್‌ನ ಶ್ರೇಷ್ಠ ನಾಯಕ ಎಂದು ಸಾಬೀತುಪಡಿಸುತ್ತಾರೆ ಎಂದು ಸಂಜೀವ್ ಗೋಯೆಂಕಾ ಹೇಳಿದ್ದಾರೆ.

ರಿಷಬ್ ಪಂತ್ ಐಪಿಎಲ್‌ನಲ್ಲಿ ನಾಯಕನಾಗಿ ಉತ್ತಮ ಅನುಭವ ಹೊಂದಿದ್ದಾರೆ. ಅವರು 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದರು. ಆದರೆ 2024 ರ ನಂತರ ಡೆಲ್ಲಿ ತಂಡದಿಂದ ಹೊರಬರಲು ಪಂತ್ ನಿರ್ಧರಿಸಿದ್ದರು. ಇದಾದ ಬಳಿಕ ಲಕ್ನೋ ತಂಡಕ್ಕೆ ಬಂದಿದ್ದು, ಇದೀಗ ತಂಡವನ್ನು ಚಾಂಪಿಯನ್ ಮಾಡುವುದೇ ಅವರ ಗುರಿಯಾಗಿದೆ.

ಪಂತ್ ಅವರನ್ನು ನಾಯಕನನ್ನಾಗಿ ಮಾಡುವ ಮೂಲಕ ಲಕ್ನೋ ಸೂಪರ್‌ಜೈಂಟ್ಸ್ ತಮ್ಮ ಹಳೆಯ ಸಂಪ್ರದಾಯವನ್ನು ಮುಂದುವರೆಸಿದೆ. ವಾಸ್ತವವಾಗಿ, ಪಂತ್ ಅವರು ಸಂಜೀವ್ ಗೋಯೆಂಕಾ ಅವರ ಫ್ರಾಂಚೈಸಿಯಿಂದ ನಾಯಕರಾಗಿ ಆಯ್ಕೆಯಾದ ಮೂರನೇ ಭಾರತೀಯ ವಿಕೆಟ್ ಕೀಪರ್ ಆಗಿದ್ದಾರೆ.

ರಿಷಬ್ ಪಂತ್ಗೂ ಮೊದಲು ಸಂಜೀವ್ ಗೋಯೆಂಕಾ ಒಡೆತನದ ಪುಣೆ ಸೂಪರ್ ಜೈಂಟ್ ತಂಡದ ನಾಯಕತ್ವವನ್ನು ಮಹೇಂದ್ರ ಸಿಂಗ್ ಧೋನಿ ನಿರ್ವಹಿಸಿದ್ದರು. ಅವರ ಬಳಿಕ ಕನ್ನಡಿಗ ಕೆಎಲ್ ರಾಹುಲ್ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿದ್ದರು.

ಲಕ್ನೋ ಸೂಪರ್‌ಜೈಂಟ್ಸ್ ಸ್ಕ್ವಾಡ್: ರಿಷಭ್ ಪಂತ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ರವಿ ಬಿಷ್ಣೋಯ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ಶಹಬಾಜ್ ಅಹ್ಮದ್, ಆಕಾಶ್ ಸಿಂಗ್, ಅವೇಶ್ ಖಾನ್, ಅಬ್ದುಲ್ ಸಮದ್, ಆರ್ಯನ್ ಜುಯಲ್, ಆಕಾಶ್ ದೀಪ್, ಶೆಮರ್ ಜೋಸೆಫ್, ಪ್ರಿನ್ಸ್ ಯಾದವ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗೇಕರ್, ಅರ್ಶಿನ್ ಕುಲಕರ್ಣಿ, ಮ್ಯಾಥ್ಯೂ ಬ್ರಿಟ್ಜ್ಕೆ, ಹಿಮ್ಮತ್ ಸಿಂಗ್, ಎಂ. ಸಿದ್ಧಾರ್ಥ, ದಿಗ್ವೇಶ್ ಸಿಂಗ್.



















