
ಭಾರತ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಇತ್ತೀಚೆಗೆ 15 ವರ್ಷದ ಬ್ಯಾಟಿಂಗ್ ಸನ್ಸೇಷನ್ ವೈಭವ್ ಸೂರ್ಯವಂಶಿ ಕುರಿತು ಆಡಿದ್ದ ಮಾತುಗಳು ಭಾರೀ ಚರ್ಚೆಗೆ ಕಾರಣವಾಗಿದ್ದವು. ತಂಡದಲ್ಲಿ ಸ್ಥಾನ ಸಿಗದಿದ್ದರೆ ವೈಭವ್ “ಹಿರಿಯ ಆಟಗಾರರಿಗೆ ಡ್ರಿಂಕ್ಸ್ ನೀಡಲಿ” ಎಂದು ಅಶ್ವಿನ್ ಹೇಳಿದ್ದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ಹೇಳಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. “ವೈಭವ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಮಯ ಕಳೆಯಬಹುದು, ಹಿರಿಯರಿಗೆ ಪಾನೀಯಗಳನ್ನು ನೀಡಬಹುದು ಅಥವಾ ಹೊರಗೆ ಕುಳಿತುಕೊಳ್ಳಬಹುದು” ಎಂದು ನಾನು ಹೇಳಿದ್ದೆ. ಇದರ ಹೊರತಾಗಿ ಆತನನ್ನು ಕೀಳಾಗಿ ಕಾಣಲು ಖಂಡಿತ ಅಲ್ಲ.
ಒಬ್ಬ 15 ವರ್ಷದ ಯುವ ಆಟಗಾರ ಅಂತರರಾಷ್ಟ್ರೀಯ ಪಂದ್ಯಗಳನ್ನು ಹೊರಗಿನಿಂದ ಸೂಕ್ಷ್ಮವಾಗಿ ಗಮನಿಸುವುದರಿಂದ ಸಿಗುವ ಅನುಭವ ಅಪಾರ. ಇದು ಆತನ ಕ್ರಿಕೆಟ್ ಬದುಕಿನ ದೊಡ್ಡ ಕಲಿಕೆಯ ಹಂತ. ಹೀಗಾಗಿ ನಾನು ವೈಭವ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗದಿದ್ದರೆ ಹಿರಿಯ ಆಟಗಾರರಿಗೆ ಡ್ರಿಂಕ್ಸ್ ನೀಡಲಿ ಎಂದಿದ್ದೆ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅಶ್ವಿನ್ ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಆತನನ್ನು ತಂಡದಿಂದ ಕೈಬಿಡುವ ಅಥವಾ ಆಯ್ಕೆ ಮಾಡುವ ಬಗ್ಗೆ ಸದಾ ಚರ್ಚಿಸಬೇಡಿ. ಆತನಿಗೆ ತನ್ನದೇ ಆದ ಹಾದಿಯಲ್ಲಿ ಬೆಳೆಯಲು ಬಿಡಿ. ಭವಿಷ್ಯದಲ್ಲಿ ಆತ ಅದ್ಭುತ ಆಟಗಾರನಾಗಲಿದ್ದಾನೆ ಎಂದು ಅಶ್ವಿನ್ ಕ್ರಿಕೆಟ್ ಪ್ರೇಮಿಗಳಲ್ಲಿ ವಿನಂತಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೇಗಿ ಜೊಫ್ರಾ ಆರ್ಚರ್ ಎಸೆದ ಶಾರ್ಟ್ ಪಿಚ್ ಎಸೆತಗಳಿಗೆ ವೈಭವ್ ಸೂರ್ಯವಂಶಿ ಔಟಾಗಿದ್ದನ್ನು ಕೆಲವರು ಟೀಕಿಸಿದ್ದರು. ಇದಕ್ಕೆ ಅಶ್ವಿನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
“ನಿಮ್ಮ ಪ್ರಕಾರ ಶಾರ್ಟ್ ಬಾಲ್ ಎದುರಿಸುವಲ್ಲಿ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್‌ಮನ್ ಯಾರು? ರಿಕ್ಕಿ ಪಾಂಟಿಂಗ್ ತಾನೇ? ಹಾಗಾದರೆ ಪಾಂಟಿಂಗ್ ಎಂದಿಗೂ ಶಾರ್ಟ್ ಬಾಲ್‌ಗೆ ಔಟಾಗಿಯೇ ಇಲ್ಲವೇ? ಅವರೂ ಸಹ ಔಟಾಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರತಿಯೊಬ್ಬರಿಗೂ ಶಕ್ತಿ ಮತ್ತು ದೌರ್ಬಲ್ಯಗಳಿರುತ್ತವೆ” ಎಂದು ವೈಭವ್ನ ಟೀಕಿಸಿದವರಿಗೆ ಅಶ್ವಿನ್ ತಿರುಗೇಟು ನೀಡಿದ್ದಾರೆ.
15 ವರ್ಷದ ಹುಡುಗ ಇಂಗ್ಲೆಂಡ್‌ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಜೊಫ್ರಾ ಆರ್ಚರ್‌ನಂತಹ ವಿಶ್ವದರ್ಜೆಯ ವೇಗಿಯನ್ನು ಹಿಂದೆ ಎಷ್ಟು ಬಾರಿ ಎದುರಿಸಿದ್ದಾರೆ? ಇದು ಆತನಿಗೆ ಮೊದಲ ಅನುಭವ. ಕೇವಲ ಒಂದೆರಡು ಪಂದ್ಯಗಳ ವೈಫಲ್ಯಕ್ಕೆ ಆತನ ವೃತ್ತಿಜೀವನವೇ ಮುಗಿಯಿತು ಎಂದು ಭವಿಷ್ಯ ನುಡಿಯುವುದು ಮೂರ್ಖತನ.
ಐಪಿಎಲ್‌ನಲ್ಲಿ ವೈಭವ್ ಅದ್ಭುತವಾಗಿ ಪ್ರದರ್ಶನ ನೀಡಿದ್ದರಿಂದ ಜನರ ನಿರೀಕ್ಷೆಗಳು ಗಗನಕ್ಕೇರಿವೆ. ಹೀಗಾಗಿ ಪ್ರತಿ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಅವರಂತೆ ಸ್ಥಿರವಾಗಿ ರನ್ ಗಳಿಸಬೇಕು ಎಂದು ನಿರೀಕ್ಷಿಸುವುದು ತಪ್ಪು. ಕ್ರಿಕೆಟ್‌ನಲ್ಲಿ ಏರಿಳಿತಗಳು ಸಹಜ ಎಂಬುದನ್ನು ಅಭಿಮಾನಿಗಳು ಅರಿಯಬೇಕು ಎಂದು ಅಶ್ವಿನ್ ಕ್ರಿಕೆಟ್ ಫ್ಯಾನ್ಸ್ಗೆ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ್ ತಂಡದ WTC ಫೈನಲ್ ಕನಸು ನುಚ್ಚು ನೂರು!
ಒಟ್ಟಾರೆಯಾಗಿ ಹೇಳುವುದಾದರೆ, ಆರ್ ಅಶ್ವಿನ್ ಅವರ ಈ ಸ್ಪಷ್ಟನೆಯು ಯುವ ಆಟಗಾರರ ಮೇಲಿರುವ ಅತಿಯಾದ ಸಾಮಾಜಿಕ ಮಾಧ್ಯಮಗಳ ಒತ್ತಡವನ್ನು ಕಡಿಮೆ ಮಾಡುವ ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ. ಹದಿಹರೆಯದ ಪ್ರತಿಭೆಗಳನ್ನು ಕೇವಲ ಒಂದೆರಡು ಪಂದ್ಯಗಳ ವೈಫಲ್ಯದ ಆಧಾರದ ಮೇಲೆ ನಿರ್ಣಯಿಸಬಾರದು ಮತ್ತು ಬೆಂಚ್ ಕಾಯಿಸುವುದು ಕೂಡ ಕ್ರಿಕೆಟ್‌ನ ಅತ್ಯೂಲ್ಯ ಕಲಿಕೆಯ ಭಾಗ ಎಂಬುದನ್ನು ಅಶ್ವಿನ್ ನೆನಪಿಸಿದ್ದಾರೆ.