T20 World Cup 2022: ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಟೀಮ್ ಇಂಡಿಯಾ (Team India) ಇದೀಗ 2ನೇ ಪಂದ್ಯಕ್ಕಾಗಿ ಸಜ್ಜಾಗಿದೆ. ಗುರುವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡವು ನೆದರ್ಲ್ಯಾಂಡ್ಸ್ (India vs Netherlands) ವಿರುದ್ಧ ಸೆಣಸಲಿದೆ. ಆದರೆ ಈ ಪಂದ್ಯದ ವೇಳೆ ಯಾವುದೇ ಆಟಗಾರರಿಗೂ ವಿಶ್ರಾಂತಿ ನೀಡಲಾಗುತ್ತಿಲ್ಲ ಎಂದು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ತಿಳಿಸಿದ್ದಾರೆ.
ಭಾನುವಾರ ಪಾಕಿಸ್ತಾನ್ ವಿರುದ್ಧ ಆಡಿದ್ದ ಕೆಲ ಆಟಗಾರರು ಮಂಳಗವಾರ ಅಭ್ಯಾಸದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದರಲ್ಲೂ ತಂಡದ ಪ್ರಮುಖ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ನೆದರ್ಲ್ಯಾಂಡ್ಸ್ ವಿರುದ್ಧ ಪಾಂಡ್ಯ ಆಡುವುದು ಅನುಮಾನ ಎನ್ನಲಾಗಿತ್ತು.
ಏಕೆಂದರೆ ಮುಂಬರುವ ಪಂದ್ಯಗಳು ಟೀಮ್ ಇಂಡಿಯಾ ಪಾಲಿಗೆ ಮಹತ್ವದ್ದಾಗಿದ್ದು, ಹೀಗಾಗಿ ತಂಡದ ಪ್ರಮುಖ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮುಂದಾಗಿದೆ ಎಂದು ವರದಿಯಾಗಿತ್ತು. ಆದರೀಗ ಟೀಮ್ ಇಂಡಿಯಾ ಆಟಗಾರರಿಗೆ ಮೂರು ದಿನಗಳ ವಿಶ್ರಾಂತಿ ಲಭಿಸಿದೆ. ಹೀಗಾಗಿ ನೆದರ್ಲ್ಯಾಂಡ್ಸ್ ವಿರುದ್ಧ ಯಾವುದೇ ಆಟಗಾರರಿಗೆ ರೆಸ್ಟ್ ನೀಡಲಾಗುತ್ತಿಲ್ಲ ಎಂಬುದನ್ನು ಭಾರತ ತಂಡದ ಬೌಲಿಂಗ್ ಕೋಚ್ ಮಾಂಬ್ರೆ ಖಚಿತಪಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಹೀಗಾಗಿ ಅವರ ಎಲ್ಲಾ ಪಂದ್ಯಗಳನ್ನು ಆಡುತ್ತೇನೆ ಎಂದಿದ್ದಾರೆ. ಹೀಗಾಗಿ ನಾವು ಯಾರಿಗೆ ವಿಶ್ರಾಂತಿ ನೀಡಬೇಕೆಂದು ಯೋಚಿಸುತ್ತಿಲ್ಲ. ಯಾವುದೇ ನಿರ್ದಿಷ್ಟ ಆಟಗಾರನ ಬಗ್ಗೆ ಅಂತಹ ಆಲೋಚನೆ ಇಲ್ಲ. ಹಾರ್ದಿಕ್ ನಮಗೆ ಬಹಳ ಮುಖ್ಯವಾದ ಆಟಗಾರ. ಅವರು ತಂಡದ ಸಮತೋಲನಕ್ಕೆ ಅನಿವಾರ್ಯ ಎಂದು ಪರಸ್ ಮಾಂಬ್ರೆ ಹೇಳಿದ್ದಾರೆ.
ಏಕೆಂದರೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವುದರಿಂದ ತಂಡದಲ್ಲಿ ಅವರ ಅನಿವಾರ್ಯತೆ ಯಾವಾಗಲೂ ಇರುತ್ತದೆ. ನೀವು ಕಳೆದ ಪಂದ್ಯದಲ್ಲಿ ನೋಡಿದಂತೆ, ಅವರು ನಿರ್ಣಾಯಕ ಇನ್ನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡುವ ಮೂಲಕ ಒತ್ತಡವನ್ನು ನಿಭಾಯಿಸಿದರು. ಇದರ ಶ್ರೇಯಸ್ಸು ಕೂಡ ಹಾರ್ದಿಕ್‌ಗೆ ಸಲ್ಲಬೇಕು. ನಮಗೆ ಪ್ರತಿ ಪಂದ್ಯ ಕೂಡ ಮುಖ್ಯವಾಗಿರುವ ಕಾರಣ, ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಯಾವುದೇ ಆಟಗಾರರಿಗೂ ವಿಶ್ರಾಂತಿ ನೀಡಲಾಗುತ್ತಿಲ್ಲ ಎಂದು ಪರಸ್ ಮಾಂಬ್ರೆ ಸ್ಪಷ್ಟಪಡಿಸಿದ್ದಾರೆ.
ಇನ್ನು ಮಂಗಳವಾರ ಅಭ್ಯಾಸದಿಂದ ಹೊರಗುಳಿದಿದ್ದ ಆರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್ ಮತ್ತು ಸೂರ್ಯಕುಮಾರ್ ಯಾದವ್…ಎಲ್ಲರೂ ಫಿಟ್ ಆಗಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲೂ ಈ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ ಎಂದು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಹೇಳಿದ್ದಾರೆ.
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.