ಐಸಿಸಿ ವರ್ಷದ ಟೆಸ್ಟ್ ಆಟಗಾರನ ನಾಮನಿರ್ದೇಶಿತ ಪಟ್ಟಿ ಪ್ರಕಟ: ಟೀಮ್ ಇಂಡಿಯಾ ಆಟಗಾರನಿಗೆ ಸ್ಥಾನ
ICC Men's Test Player: ಕೈಲ್ ಜೇಮಿಸನ್ ಬೌಲಿಂಗ್ ಮೂಲಕ ಮಿಂಚಿದರೆ, ಶ್ರೀಲಂಕಾ ಪರ ದಿಮುತ್ ಕರುಣಾರತ್ನೆ ಭರ್ಜರಿ ಆರಂಭಿಕನಾಗಿ ಅಬ್ಬರಿಸಿದ್ದರು. ಹಾಗಿದ್ರೆ ಈ ವರ್ಷದಲ್ಲಿ ಈ ನಾಲ್ವರು ಆಟಗಾರರ ಸಾಧನೆಗಳೇನು ನೋಡೋಣ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗರ ನಾಮನಿರ್ದೇಶಿತ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರ ಸ್ಥಾನ ಪಡೆದಿರುವುದು ವಿಶೇಷ. ಒಟ್ಟು ನಾಲ್ವರು ಈ ಪಟ್ಟಿಯಲ್ಲಿದ್ದು, ಇವರಲ್ಲಿ ಒಬ್ಬರನ್ನು ಈ ವರ್ಷದ ಅತ್ಯುತ್ತಮ ಟೆಸ್ಟ್ ಆಟಗಾರನಾಗಿ ಆಯ್ಕೆ ಮಾಡಲಾಗುತ್ತದೆ. ಅದರಂತೆ ಅಂತಿಮ ನಾಲ್ವರ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದಿದ್ದಾರೆ. ಅಶ್ವಿನ್ ಹೊರತಾಗಿ, ಐಸಿಸಿಯಿಂದ ವರ್ಷದ ಪುರುಷ ಟೆಸ್ಟ್ ಆಟಗಾರ ಎಂದು ನಾಮನಿರ್ದೇಶನಗೊಂಡ ಆಟಗಾರರಲ್ಲಿ ಜೋ ರೂಟ್, ದಿಮುತ್ ಕರುಣಾರತ್ನೆ ಮತ್ತು ಕೈಲ್ ಜೇಮಿಸನ್ ಹೆಸರಿದೆ.
ಈ ವರ್ಷದ ಪ್ರದರ್ಶನದ ಆಧಾರದ ಮೇಲೆ ಈ ಆಟಗಾರರನ್ನು ವರ್ಷದ ಟೆಸ್ಟ್ ಆಟಗಾರನ ಅವಾರ್ಡ್ಗೆ ಐಸಿಸಿ ಆಯ್ಕೆ ಮಾಡಿದೆ. ಜೋ ರೂಟ್ ಈ ವರ್ಷ ಬ್ಯಾಟಿಂಗ್ ಮೂಲಕ ರನ್ ಮಳೆ ಸುರಿಸಿದರೆ, ಆರ್. ಅಶ್ವಿನ್ ಆಲ್‌ರೌಂಡರ್ ಪ್ರದರ್ಶನ ಮೂಲಕ ಗಮನ ಸೆಳೆದಿದ್ದರು. ಇನ್ನು ಕೈಲ್ ಜೇಮಿಸನ್ ಬೌಲಿಂಗ್ ಮೂಲಕ ಮಿಂಚಿದರೆ, ಶ್ರೀಲಂಕಾ ಪರ ದಿಮುತ್ ಕರುಣಾರತ್ನೆ ಭರ್ಜರಿ ಆರಂಭಿಕನಾಗಿ ಅಬ್ಬರಿಸಿದ್ದರು. ಹಾಗಿದ್ರೆ ಈ ವರ್ಷದಲ್ಲಿ ಈ ನಾಲ್ವರು ಆಟಗಾರರ ಸಾಧನೆಗಳೇನು ನೋಡೋಣ.
ಆರ್. ಅಶ್ವಿನ್: ಈ ವರ್ಷ ಅಶ್ವಿನ್ ಭಾರತ ಪರ ಆಡಿದ 8 ಪಂದ್ಯಗಳಲ್ಲಿ 52 ವಿಕೆಟ್ ಪಡೆದಿದ್ದಾರೆ. ಅಂದರೆ 16.27 ರ ಬೌಲಿಂಗ್ ಸರಾಸರಿಯೊಂದಿಗೆ ಈ ಯಶಸ್ಸನ್ನು ಸಾಧಿಸಿರುವುದು ವಿಶೇಷ. ಇನ್ನು ಈ ವರ್ಷ ಬ್ಯಾಟಿಂಗ್ ಮೂಲಕ ಮಿಂಚಿದ್ದ ಅಶ್ವಿನ್, 28.08 ಸರಾಸರಿಯಲ್ಲಿ 337 ರನ್ ಕಲೆಹಾಕಿದ್ದರು. ಈ ಮೂಲಕ ಆಲ್‌ರೌಂಡರ್ ಪ್ರದರ್ಶನದಿಂದ ಗಮನ ಸೆಳೆದಿದ್ದರು.
ಜೋ ರೂಟ್: ಇಂಗ್ಲೆಂಡ್ ನಾಯಕ ಜೋ ರೂಟ್ ಈ ವರ್ಷ ಆಡಿದ 15 ಟೆಸ್ಟ್ ಪಂದ್ಯಗಳಲ್ಲಿ 61 ಸರಾಸರಿಯಲ್ಲಿ 1708 ರನ್ ಗಳಿಸಿದ್ದಾರೆ. ಈ ವೇಳೆ 6 ಶತಕ ಮತ್ತು 4 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಈ ವರ್ಷ ಅತೀ ಹೆಚ್ಚು ರನ್ಗಳಿಸಿದ ಟೆಸ್ಟ್ ಬ್ಯಾಟರ್ ಎಂಬ ದಾಖಲೆಯನ್ನು ರೂಟ್ ಬರೆದಿದ್ದಾರೆ.
ಕೈಲ್ ಜೇಮಿಸನ್: ಈ ನ್ಯೂಜಿಲೆಂಡ್ ಆಲ್‌ರೌಂಡರ್ ಜೇಮಿಸನ್ಗೆ 2021 ವರ್ಷ ಅದ್ಭುತವಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದ ಜೇಮಿಸನ್ ಈ ವರ್ಷ ಆಡಿದ 5 ಟೆಸ್ಟ್‌ಗಳಲ್ಲಿ 17.51 ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಬ್ಯಾಟ್ ಮೂಲಕ ಕೂಡ ಗಮನ ಸೆಳೆದಿರುವ ಜೇಮಿಸನ್ 17.50 ಸರಾಸರಿಯಲ್ಲಿ ಒಟ್ಟು 105 ರನ್‌ಗಳಿಸಿದ್ದಾರೆ.
ದಿಮುತ್ ಕರುಣಾರತ್ನೆ: ಶ್ರೀಲಂಕಾ ತಂಡವು 2021 ರಲ್ಲಿ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರಬಹುದು. ಆದರೆ ಈ ವರ್ಷ ಲಂಕಾ ಆರಂಭಿಕ ಆಟಗಾರ ದಿಮುತ್ ಕರುಣಾರತ್ನೆಗೆ ಅದ್ಭುತವಾಗಿತ್ತು. ಏಕೆಂದರೆ 2021 ರಲ್ಲಿ ಕರುಣಾರತ್ನೆ 7 ಟೆಸ್ಟ್‌ಗಳಲ್ಲಿ 4 ಶತಕಗಳೊಂದಿಗೆ 70 ರ ಸರಾಸರಿಯಲ್ಲಿ 902 ರನ್ ಗಳಿಸಿದ್ದಾರೆ. ಈ ಮೂಲಕ ಲಂಕಾ ಪರ ಈ ವರ್ಷ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(Nominees for ICC Men’s Test Player of the Year revealed)
Published On - 3:54 pm, Tue, 28 December 21