World Cup Qualifier: ಸ್ಕಾಟ್ಲೆಂಡ್ ಎದುರು ಸೋತ ವಿಂಡೀಸ್ ತಂಡಕ್ಕಿದೆ ವಿಶ್ವಕಪ್ ಆಡುವ ಕೊನೆಯ ಅವಕಾಶ! ಹೇಗೆ ಗೊತ್ತಾ?
World Cup Qualifier: ವೆಸ್ಟ್ ಇಂಡೀಸ್ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆಯಬೇಕೆಂದರೆ ಅದು ಪಾಕಿಸ್ತಾನದಿಂದ ಮಾತ್ರ ಸಾಧ್ಯ.
ಹರಾರೆಯಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ವಾಲಿಫೈಯರ್ (World Cup Qualifier) ಸೂಪರ್ ಸಿಕ್ಸ್, 3ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 7 ವಿಕೆಟ್ಗಳ ಹೀನಾಯ ಸೋಲು ಕಂಡ ವೆಸ್ಟ್ ಇಂಡೀಸ್ (Scotland vs West Indies) ವಿಶ್ವಕಪ್ನಿಂದ ಹೊರಬಿದ್ದಿದೆ. ಹೀಗಾಗಿ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ 2 ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಇಲ್ಲದೆ ವಿಶ್ವಕಪ್ ನಡೆಯಲ್ಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್, 43.5 ಓವರ್ಗಳಲ್ಲಿ 181 ರನ್ ಬಾರಿಸಿ ಆಲ್ ಔಟ್ ಆಯಿತು. ಈ ಸುಲಭ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್, 43.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 185 ರನ್ ಬಾರಿಸುವ ಮೂಲಕ ವಿಶ್ವಕಪ್ ವಿಜೇತ ಕೆರಿಬಿಯನ್ನರಿಗೆ ಮುಖಭಂಗ ನೀಡಿತು. ಈ ಮೂಲಕ ಸೂಪರ್ ಸಿಕ್ಸ್ ಹಂತದಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಇರುವಾಗಲೇ ವಿಂಡೀಸ್ ವಿಶ್ವಕಪ್ ಪ್ರಯಾಣ ಮುಗಿದಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲದರ ನಡುವೆ ಏಕದಿನ ವಿಶ್ವಕಪ್ (ODI World Cup 2023) ಆಡುವ ಕೊನೆಯ ಅವಕಾಶ ವೆಸ್ಟ್ ಇಂಡೀಸ್ ತಂಡಕ್ಕಿದೆ.
ಪಾಕ್ ಕೈಯಲ್ಲಿ ವಿಂಡೀಸ್ ಭವಿಷ್ಯ
ಸದ್ಯ ವೆಸ್ಟ್ ಇಂಡೀಸ್ ಸೂಪರ್ ಸಿಕ್ಸ್ ಹಂತದಲ್ಲಿ ಒಂದು ಪಂದ್ಯವನ್ನಾಡಿದ್ದು, ಆ ಪಂದ್ಯದಲ್ಲಿ ಸೋತು ಶೂನ್ಯ ಅಂಕ ಸಂಪಾದಿಸಿದೆ. ಇನ್ನು ಈ ಹಂತದಲ್ಲಿ ವಿಂಡೀಸ್ 2 ಪಂದ್ಯಗಳನ್ನು ಆಡಬೇಕಿದೆ. ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ ವಿಂಡೀಸ್ ತಂಡಕ್ಕೆ 4 ಅಂಕಗಳು ಸಿಗಲಿವೆ. ಆದರೆ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಗೆಲುವಿನ ನಾಗಲೋಟ ಮುಂದುವರೆಸಿರುವ ಶ್ರೀಲಂಕಾ ಹಾಗೂ ಜಿಂಬಾಬ್ವೆ ಈಗಾಗಲೇ 6 ಅಂಕ ಗಳಿಸಿವೆ. ಅಲ್ಲದೆ ನಿಯಮದಂತೆ ಸೂಪರ್ ಸಿಕ್ಸ್ ಹಂತದಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಮಾತ್ರ 2023 ರ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಇನ್ನುಳಿದ 2 ಪಂದ್ಯಗಳನ್ನು ಗೆದ್ದರೂ ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯುವುದು ಅಸಾಧ್ಯ. ಆದರೆ ವಿಂಡೀಸ್‌ಗೆ ತೆರೆಮರೆಯಲ್ಲಿ ಕೊನೆಯ ಅವಕಾಶವೊಂದಿದೆ.
ODI World Cup 2023: ‘ನಾವು ಯಾವ ಪಂದ್ಯದಲ್ಲೂ’; ತಂಡದ ಸೋಲಿಗೆ ವಿಂಡೀಸ್ ನಾಯಕ ದೂರಿದ್ದು ಯಾರನ್ನು ಗೊತ್ತಾ?
ವೆಸ್ಟ್ ಇಂಡೀಸ್ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆಯಬೇಕೆಂದರೆ ಅದು ಪಾಕಿಸ್ತಾನದಿಂದ ಮಾತ್ರ ಸಾಧ್ಯ. ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹದಗೆಟ್ಟ ಸಂಬಂಧದಿಂದಾಗಿ ಪಾಕ್ ತಂಡ ಪ್ರಸ್ತುತ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಇನ್ನೂ ಪಾಕ್ ಸರ್ಕಾರದಿಂದ ಅನುಮತಿ ಪಡೆದಿಲ್ಲ. ಒಂದು ವೇಳೆ ಪಾಕ್ ತಂಡ ಪಂದ್ಯಾವಳಿಯಿಂದ ಹಿಂದೆ ಸರಿದರೆ, ವಿಶ್ವಕಪ್ ಕ್ವಾಲಿಫೈಯರ್ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವ ತಂಡವು ಎರಡು ತಂಡಗಳೊಂದಿಗೆ ವಿಶ್ವಕಪ್‌ಗೆ ಎಂಟ್ರಿಕೊಡಲಿದೆ.
ವಿಂಡೀಸ್ ವಿಶ್ವಕಪ್‌ಗೆ ಅರ್ಹತೆ ಪಡೆಯುವುದು ಹೇಗೆ?
ಪ್ರಸ್ತು ವಿಂಡೀಸ್ ಸೂಪರ್ ಸಿಕ್ಸ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಆರನೇ ಹಾಗೂ ಕೊನೆಯ ಸ್ಥಾನದಲ್ಲಿ ಒಮಾನ್ ತಂಡವಿದೆ. ವೆಸ್ಟ್ ಇಂಡೀಸ್ ತಂಡಕ್ಕೆ ಸೂಪರ್ ಸಿಕ್ಸ್‌ನಲ್ಲಿ ಇನ್ನು 2 ಪಂದ್ಯಗಳು ಬಾಕಿ ಉಳಿದಿವೆ. ಈ ಎರಡು ಪಂದ್ಯಗಳಲ್ಲಿ ವಿಂಡೀಸ್ ತಂಡ ಶ್ರೀಲಂಕಾ ಮತ್ತು ಒಮಾನ್ ವಿರುದ್ಧ ಕಣಕ್ಕಿಳಿಯಲಿದೆ. ಈ ಎರಡೂ ಪಂದ್ಯಗಳನ್ನು ವಿಂಡೀಸ್ ಭಾರೀ ಅಂತರದಲ್ಲಿ ಗೆಲ್ಲಬೇಕು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ವಿಂಡೀಸ್ ತಂಡಕ್ಕಿಂತ ಮೇಲಿರುವ ತಂಡಗಳು ತಮ್ಮ ಉಳಿದ ಪಂದ್ಯಗಳಲ್ಲಿ ಸೋಲಬೇಕು. ಆಗ ಮಾತ್ರ ವಿಂಡೀಸ್ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ವಿಶ್ವಕಪ್‌ಗೆ ಅರ್ಹತೆ ಪಡೆಯಬಹುದಾಗಿದೆ. ಅದು ಕೂಡ ಪಾಕಿಸ್ತಾನ ಟೂರ್ನಿಯಿಂದ ಹಿಂದೆ ಸರಿದರೆ ಮಾತ್ರ.
ಇನ್ನು ಶ್ರೀಲಂಕಾ ಹಾಗೂ ಜಿಂಬಾಬ್ವೆ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಸನಿಹದಲ್ಲಿವೆ. ಹೀಗಾಗಿ ಈ ಎರಡು ತಂಡಗಳಿಗೆ ವಿಶ್ವಕಪ್ ಟಿಕೆಟ್ ಸಿಗುವುದು ಖಚಿತ. ಆದ್ದರಿಂದ ವಿಂಡೀಸ್ ತಂಡ 3ನೇ ಸ್ಥಾನ ಪಡೆಯಬೇಕೆಂದರೆ ಇಲ್ಲಿ 3 ಮತ್ತು 4ನೇ ಸ್ಥಾನದಲ್ಲಿರುವ ಸ್ಕಾಟ್‌ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್ ತಂಡಗಳು ಉಳಿದ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಬೇಕು.
ಸ್ಕಾಟ್ಲೆಂಡ್ ಈಗಾಗಲೇ ನಾಲ್ಕು ಪಾಯಿಂಟ್‌ಗಳನ್ನು ಹೊಂದಿದೆ. ಹೀಗಾಗಿ ಮುಂದಿನ ಎರಡೂ ಪಂದ್ಯಗಳಲ್ಲಿ ಜಿಂಬಾಬ್ವೆ ಮತ್ತು ನೆದರ್‌ಲ್ಯಾಂಡ್ಸ್ ವಿರುದ್ಧ ಸ್ಕಾಟ್ಲೆಂಡ್ ಹೀನಾಯ ಸೋಲು ಕಾಣಬೇಕು. ಇತ್ತ ನೆದರ್ಲ್ಯಾಂಡ್ಸ್ ತಂಡ ಕೂಡ ಓಮನ್ ವಿರುದ್ಧ ಸೋತರೆ ವಿಂಡೀಸ್‌ಗೆ ವಿಶ್ವಕಪ್ ಬಾಗಿಲು ತೆರೆಯಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:58 am, Sun, 2 July 23