On This Day: ಅಜೇಯ 36 ರನ್: ಏಕದಿನ ಕ್ರಿಕೆಟ್ನ ಅತ್ಯಂತ ಕಳಪೆ ಬ್ಯಾಟಿಂಗ್..!
Sunil Gavaskar: ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತದ ಪರ ಸುನಿಲ್ ಗವಾಸ್ಕರ್ ಹಾಗೂ ಏಕನಾಥ್ ಸೋಲ್ಕರ್ ಇನಿಂಗ್ಸ್ ಆರಂಭಿಸಿದರು. 8 ರನ್ಗಳಿಸಿ ಸೋಲ್ಕರ್ ಔಟಾದ ಬಳಿಕ ಅಂಶುಮಾನ್ ಗಾಯಕ್ವಾಡ್ ಕಣಕ್ಕಿಳಿದರು.
ಕ್ರಿಕೆಟ್ ಅಂಗಳದಲ್ಲಿ ಜೂನ್ 7 ಅಂತಹ ವಿಶೇಷ ದಿನವಂತು ಅಲ್ಲ. ಆದರೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮಾತ್ರ ಜೂನ್ 7ನೇ ತಾರೀಖನ್ನು ಸುನಿಲ್ ಗವಾಸ್ಕರ್ (Sunil Gavaskar) ಅವರ ಕಾರಣದಿಂದ ನೆನಪಿಸಿಕೊಳ್ಳುತ್ತಿರುತ್ತಾರೆ. ಏಕೆಂದರೆ 1975 ರ ಜೂನ್ 7 ರಂದು ಭಾರತ ತಂಡವು ಇಂಗ್ಲೆಂಡ್ ವಿರುದ್ದ ವಿಶ್ವಕಪ್ ಪಂದ್ಯವಾಡಿತ್ತು. ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಡೇನಿಯಲ್ ಅಮಿಸ್ (137) ಅವರ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ನಿಗದಿತ 60 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 334 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತದ ಪರ ಸುನಿಲ್ ಗವಾಸ್ಕರ್ ಹಾಗೂ ಏಕನಾಥ್ ಸೋಲ್ಕರ್ ಇನಿಂಗ್ಸ್ ಆರಂಭಿಸಿದರು. 8 ರನ್ಗಳಿಸಿ ಸೋಲ್ಕರ್ ಔಟಾದ ಬಳಿಕ ಅಂಶುಮಾನ್ ಗಾಯಕ್ವಾಡ್ ಕಣಕ್ಕಿಳಿದರು. ಅಲ್ಲದೆ ಸುನಿಲ್ ಗವಾಸ್ಕರ್ ಅವರಿಗೆ ಸಾಥ್ ನೀಡಿದರು. 22 ರನ್ಗಳಿಸಿ ಅಂಶುಮಾನ್ ಔಟಾದರೆ, ಆ ಬಳಿಕ ಬಂದ ಗುಂಡಪ್ಪ ವಿಶ್ವನಾಥ್ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇತ್ತ ಟೀಮ್ ಇಂಡಿಯಾದ ಮೂರು ವಿಕೆಟ್ಗಳು ಪತನವಾದರೂ ಸುನಿಲ್ ಗವಾಸ್ಕರ್ ಒಂದೆಡೆ ಬಂಡೆಯಂತೆ ಕ್ರೀಸ್ ಕಚ್ಚಿ ನಿಂತಿದ್ದರು.
ಅತ್ತ ಇಂಗ್ಲೆಂಡ್ ಬೌಲರ್ಗಳು ಮಾರಕ ದಾಳಿ ನಡೆಸುತ್ತಿದ್ದರೆ ಸುನಿಲ್ ಗವಾಸ್ಕರ್ ರನ್ಗಳಿಸಲು ಪರದಾಡಿದರು. ಅಷ್ಟೇ ಅಲ್ಲದೆ ರನ್ಗಳಿಸಲು ಯಾವುದೇ ಆಸಕ್ತಿಯನ್ನೂ ಕೂಡ ತೋರಲಿಲ್ಲ. ಇತ್ತ ಇಂಗ್ಲೆಂಡ್ ಬೌಲರ್ಗಳು ಗವಾಸ್ಕರ್ ವಿಕೆಟ್ ಪಡೆಯಲು ಹರಸಾಹಸ ಪಟ್ಟರು. ಇನ್ನೊಂದೆಡೆ ಏಕದಿನ ಪಂದ್ಯ ವೀಕ್ಷಿಸುತ್ತಿದ್ದ ಇಂಗ್ಲೆಂಡ್ ಕ್ರಿಕೆಟ್ಗಳೂ ಕೂಡ ಗೊಂದಲಕ್ಕೀಡಾದರು. ಏಕೆಂದರೆ ರನ್ಗಳಿಸದೇ ಕ್ರೀಸ್ ಕಚ್ಚಿ ನಿಂತಿದ್ದ ಸುನಿಲ್ ಗವಾಸ್ಕರ್ ಟೆಸ್ಟ್ ಪಂದ್ಯದಂತೆ ಬ್ಯಾಟಿಂಗ್ ಮಾಡಿದ್ದರು.
ಅಂತಿಮವಾಗಿ ಭಾರತ ತಂಡ 60 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಶೇಷ ಎಂದರೆ ಸುನಿಲ್ ಗವಾಸ್ಕರ್ ಅವರನ್ನು ಔಟ್ ಮಾಡುವಲ್ಲಿ ಇಂಗ್ಲೆಂಡ್ ಬೌಲರ್ಗಳು ವಿಫಲರಾಗಿದ್ದರು. ಇನ್ನು 60 ಓವರ್ವರೆಗೆ ಬ್ಯಾಟ್ ಮಾಡಿದ ಸುನಿಲ್ ಗವಾಸ್ಕರ್ ಕಲೆಹಾಕಿದ್ದು ಕೇವಲ 36 ರನ್ ಮಾತ್ರ.
ಅಜೇಯರಾಗಿ ಉಳಿದ ಸುನಿಲ್ ಗವಾಸ್ಕರ್ ಬರೋಬ್ಬರಿ 174 ಎಸೆತಗಳನ್ನು ಎದುರಿಸಿದ್ದರು. ಈ ವೇಳೆ ಕೇವಲ 1 ಫೋರ್ ಮಾತ್ರ ಬಾರಿಸಿದ್ದರು. ಇದರಲ್ಲೇ ಸುನಿಲ್ ಗವಾಸ್ಕರ್ ಎಷ್ಟು ನಿಧಾನವಾಗಿ ಬ್ಯಾಟ್ ಬೀಸಿದ್ದರು ಎಂಬುದನ್ನು ಊಹಿಸಬಹುದು. ಇತ್ತ ಔಟ್ ಆಗದೇ 60 ಓವರ್ವರೆಗೆ ಕ್ರೀಸ್ ಕಚ್ಚಿ ನಿಂತಿದ್ದ ಸುನಿಲ್ ಗವಾಸ್ಕರ್ನಿಂದಾಗಿ ಅಂದು ಟೀಮ್ ಇಂಡಿಯಾ ಹೀನಾಯವಾಗಿ ಸೋಲನುಭವಿಸಿತು. ಅಂದರೆ ಬರೋಬ್ಬರಿ 202 ರನ್ಗಳ ಅಂತರದಿಂದ ಆ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿತು.
ಸುನಿಲ್ ಗವಾಸ್ಕರ್ ಅವರ 174 ಎಸೆತಗಳಲ್ಲಿ 36 ರನ್ಗಳ ಈ ಇನಿಂಗ್ಸ್ ಅನ್ನು ಏಕದಿನ ಕ್ರಿಕೆಟ್ನಲ್ಲಿ ಭಾರತೀಯ ಆಟಗಾರನ ಅತ್ಯಂತ ಕೆಟ್ಟ ಇನಿಂಗ್ಸ್ ಎಂದು ಪರಿಗಣಿಸಲಾಗಿದೆ. ಇಂದಿಗೆ ಈ ಕಳಪೆ ಬ್ಯಾಟಿಂಗ್ ದಾಖಲೆಗೆ 47 ವರ್ಷಗಳು ತುಂಬಿರುವುದು ವಿಶೇಷ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.