On This Day: ಅಜೇಯ 36 ರನ್​: ಏಕದಿನ ಕ್ರಿಕೆಟ್​ನ ಅತ್ಯಂತ ಕಳಪೆ ಬ್ಯಾಟಿಂಗ್..!

| Updated By: ಝಾಹಿರ್ ಯೂಸುಫ್

Updated on: Jun 07, 2022 | 11:39 AM

Sunil Gavaskar: ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತದ ಪರ ಸುನಿಲ್ ಗವಾಸ್ಕರ್ ಹಾಗೂ ಏಕನಾಥ್ ಸೋಲ್ಕರ್ ಇನಿಂಗ್ಸ್ ಆರಂಭಿಸಿದರು. 8 ರನ್​ಗಳಿಸಿ ಸೋಲ್ಕರ್ ಔಟಾದ ಬಳಿಕ ಅಂಶುಮಾನ್ ಗಾಯಕ್ವಾಡ್ ಕಣಕ್ಕಿಳಿದರು.

On This Day: ಅಜೇಯ 36 ರನ್​: ಏಕದಿನ ಕ್ರಿಕೆಟ್​ನ ಅತ್ಯಂತ ಕಳಪೆ ಬ್ಯಾಟಿಂಗ್..!
Sunil Gavaskar
Image Credit source: Wisden
Follow us on

ಕ್ರಿಕೆಟ್​ ಅಂಗಳದಲ್ಲಿ ಜೂನ್ 7 ಅಂತಹ ವಿಶೇಷ ದಿನವಂತು ಅಲ್ಲ. ಆದರೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮಾತ್ರ ಜೂನ್ 7ನೇ ತಾರೀಖನ್ನು ಸುನಿಲ್ ಗವಾಸ್ಕರ್ (Sunil Gavaskar) ಅವರ ಕಾರಣದಿಂದ ನೆನಪಿಸಿಕೊಳ್ಳುತ್ತಿರುತ್ತಾರೆ. ಏಕೆಂದರೆ 1975 ರ ಜೂನ್ 7 ರಂದು ಭಾರತ ತಂಡವು ಇಂಗ್ಲೆಂಡ್​ ವಿರುದ್ದ ವಿಶ್ವಕಪ್ ಪಂದ್ಯವಾಡಿತ್ತು. ಲಾರ್ಡ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಡೇನಿಯಲ್ ಅಮಿಸ್ (137) ಅವರ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ನಿಗದಿತ 60 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 334 ರನ್​ ಕಲೆಹಾಕಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತದ ಪರ ಸುನಿಲ್ ಗವಾಸ್ಕರ್ ಹಾಗೂ ಏಕನಾಥ್ ಸೋಲ್ಕರ್ ಇನಿಂಗ್ಸ್ ಆರಂಭಿಸಿದರು. 8 ರನ್​ಗಳಿಸಿ ಸೋಲ್ಕರ್ ಔಟಾದ ಬಳಿಕ ಅಂಶುಮಾನ್ ಗಾಯಕ್ವಾಡ್ ಕಣಕ್ಕಿಳಿದರು. ಅಲ್ಲದೆ ಸುನಿಲ್ ಗವಾಸ್ಕರ್ ಅವರಿಗೆ ಸಾಥ್ ನೀಡಿದರು. 22 ರನ್​ಗಳಿಸಿ ಅಂಶುಮಾನ್ ಔಟಾದರೆ, ಆ ಬಳಿಕ ಬಂದ ಗುಂಡಪ್ಪ ವಿಶ್ವನಾಥ್ 37 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ಇತ್ತ ಟೀಮ್ ಇಂಡಿಯಾದ ಮೂರು ವಿಕೆಟ್​ಗಳು ಪತನವಾದರೂ ಸುನಿಲ್ ಗವಾಸ್ಕರ್ ಒಂದೆಡೆ ಬಂಡೆಯಂತೆ ಕ್ರೀಸ್ ಕಚ್ಚಿ ನಿಂತಿದ್ದರು.

ಅತ್ತ ಇಂಗ್ಲೆಂಡ್​ ಬೌಲರ್​ಗಳು ಮಾರಕ ದಾಳಿ ನಡೆಸುತ್ತಿದ್ದರೆ ಸುನಿಲ್ ಗವಾಸ್ಕರ್ ರನ್​ಗಳಿಸಲು ಪರದಾಡಿದರು. ಅಷ್ಟೇ ಅಲ್ಲದೆ ರನ್​ಗಳಿಸಲು ಯಾವುದೇ ಆಸಕ್ತಿಯನ್ನೂ ಕೂಡ ತೋರಲಿಲ್ಲ. ಇತ್ತ ಇಂಗ್ಲೆಂಡ್ ಬೌಲರ್​ಗಳು ಗವಾಸ್ಕರ್ ವಿಕೆಟ್ ಪಡೆಯಲು ಹರಸಾಹಸ ಪಟ್ಟರು. ಇನ್ನೊಂದೆಡೆ ಏಕದಿನ ಪಂದ್ಯ ವೀಕ್ಷಿಸುತ್ತಿದ್ದ ಇಂಗ್ಲೆಂಡ್​ ಕ್ರಿಕೆಟ್​ಗಳೂ ಕೂಡ ಗೊಂದಲಕ್ಕೀಡಾದರು. ಏಕೆಂದರೆ ರನ್​ಗಳಿಸದೇ ಕ್ರೀಸ್​ ಕಚ್ಚಿ ನಿಂತಿದ್ದ ಸುನಿಲ್ ಗವಾಸ್ಕರ್ ಟೆಸ್ಟ್ ಪಂದ್ಯದಂತೆ ಬ್ಯಾಟಿಂಗ್ ಮಾಡಿದ್ದರು.

ಇದನ್ನೂ ಓದಿ
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಅಂತಿಮವಾಗಿ ಭಾರತ ತಂಡ 60 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಶೇಷ ಎಂದರೆ ಸುನಿಲ್ ಗವಾಸ್ಕರ್ ಅವರನ್ನು ಔಟ್ ಮಾಡುವಲ್ಲಿ ಇಂಗ್ಲೆಂಡ್ ಬೌಲರ್​ಗಳು ವಿಫಲರಾಗಿದ್ದರು. ಇನ್ನು 60 ಓವರ್​ವರೆಗೆ ಬ್ಯಾಟ್ ಮಾಡಿದ ಸುನಿಲ್ ಗವಾಸ್ಕರ್ ಕಲೆಹಾಕಿದ್ದು ಕೇವಲ 36 ರನ್​ ಮಾತ್ರ.

ಅಜೇಯರಾಗಿ ಉಳಿದ ಸುನಿಲ್ ಗವಾಸ್ಕರ್ ಬರೋಬ್ಬರಿ 174 ಎಸೆತಗಳನ್ನು ಎದುರಿಸಿದ್ದರು. ಈ ವೇಳೆ ಕೇವಲ 1 ಫೋರ್ ಮಾತ್ರ ಬಾರಿಸಿದ್ದರು. ಇದರಲ್ಲೇ ಸುನಿಲ್ ಗವಾಸ್ಕರ್ ಎಷ್ಟು ನಿಧಾನವಾಗಿ ಬ್ಯಾಟ್ ಬೀಸಿದ್ದರು ಎಂಬುದನ್ನು ಊಹಿಸಬಹುದು. ಇತ್ತ ಔಟ್ ಆಗದೇ 60 ಓವರ್​ವರೆಗೆ ಕ್ರೀಸ್ ಕಚ್ಚಿ ನಿಂತಿದ್ದ ಸುನಿಲ್ ಗವಾಸ್ಕರ್​ನಿಂದಾಗಿ ಅಂದು ಟೀಮ್ ಇಂಡಿಯಾ ಹೀನಾಯವಾಗಿ ಸೋಲನುಭವಿಸಿತು. ಅಂದರೆ ಬರೋಬ್ಬರಿ 202 ರನ್​ಗಳ ಅಂತರದಿಂದ ಆ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿತು.

ಸುನಿಲ್ ಗವಾಸ್ಕರ್ ಅವರ 174 ಎಸೆತಗಳಲ್ಲಿ 36 ರನ್​ಗಳ ಈ ಇನಿಂಗ್ಸ್​ ಅನ್ನು ಏಕದಿನ ಕ್ರಿಕೆಟ್​ನಲ್ಲಿ ಭಾರತೀಯ ಆಟಗಾರನ ಅತ್ಯಂತ ಕೆಟ್ಟ ಇನಿಂಗ್ಸ್​ ಎಂದು ಪರಿಗಣಿಸಲಾಗಿದೆ. ಇಂದಿಗೆ ಈ ಕಳಪೆ ಬ್ಯಾಟಿಂಗ್​ ದಾಖಲೆಗೆ 47 ವರ್ಷಗಳು ತುಂಬಿರುವುದು ವಿಶೇಷ.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.