PAK vs AUS: 24 ವರ್ಷಗಳ ಬಳಿಕ ಪಾಕ್ ನೆಲಕ್ಕೆ ಕಾಲಿಟ್ಟ ಕಾಂಗರೂಗಳಿಗೆ ಬಾಂಬ್ ದಾಳಿಯ ಸ್ವಾಗತ; ಆಸೀಸ್ ನಿಲುವೇನು?

| Updated By: ಪೃಥ್ವಿಶಂಕರ

Updated on: Mar 04, 2022 | 7:39 PM

PAK vs AUS: ಪಂದ್ಯ ಆರಂಭವಾದ ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನದ ಭದ್ರತಾ ವೈಫಲ್ಯ ಮತ್ತೆ ಬಹಿರಂಗವಾಯಿತು. ರಾವಲ್ಪಿಂಡಿಯಿಂದ ಸುಮಾರು 190 ಕಿಮೀ ದೂರದಲ್ಲಿರುವ ಪೇಶಾವರದಲ್ಲಿ ಭಾರಿ ಬಾಂಬ್ ಸ್ಫೋಟ ಸಂಭವಿಸಿದ್ದು, ಸುಮಾರು 50 ಜನರು ಸಾವನ್ನಪ್ಪಿದ್ದಾರೆ.

PAK vs AUS: 24 ವರ್ಷಗಳ ಬಳಿಕ ಪಾಕ್ ನೆಲಕ್ಕೆ ಕಾಲಿಟ್ಟ ಕಾಂಗರೂಗಳಿಗೆ ಬಾಂಬ್ ದಾಳಿಯ ಸ್ವಾಗತ; ಆಸೀಸ್ ನಿಲುವೇನು?
ಆಸೀಸ್ ತಂಡ, ಬಾಂಬ್ ದಾಳಿ ನಡೆದ ಜಾಗ
Follow us on

ಭದ್ರತೆಯ ವಿಚಾರದಲ್ಲಿ ದೀರ್ಘಕಾಲದಿಂದ ಸತತ ವೈಫಲ್ಯದಿಂದಾಗಿ ವಿಶ್ವದ ಅಗ್ರಮಾನ್ಯ ಕ್ರಿಕೆಟ್ ತಂಡಗಳ ಆತಿಥ್ಯದಿಂದ ವಂಚಿತವಾಗಿದ್ದ ಪಾಕಿಸ್ತಾನಕ್ಕೆ ಮಾರ್ಚ್ 4 ಶುಕ್ರವಾರ ಐತಿಹಾಸಿಕ ದಿನವಾಗಿತ್ತು. ಸುಮಾರು 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಆಸ್ಟ್ರೇಲಿಯನ್ ತಂಡವು ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಲು ಪಾಕಿಸ್ತಾನದ (Pakistan vs Australia) ಮೈದಾನಕ್ಕೆ ಬಂದಿಳಿದಿತ್ತು. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ರಾವಲ್ಪಿಂಡಿಯ ಪ್ರಸಿದ್ಧ ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಾರಂಭವಾಗಿತ್ತು. ಆದರೆ ಪಂದ್ಯ ಆರಂಭವಾದ ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನದ ಭದ್ರತಾ ವೈಫಲ್ಯ ಮತ್ತೆ ಬಹಿರಂಗವಾಯಿತು. ರಾವಲ್ಪಿಂಡಿಯಿಂದ ಸುಮಾರು 190 ಕಿಮೀ ದೂರದಲ್ಲಿರುವ ಪೇಶಾವರದಲ್ಲಿ ಭಾರಿ ಬಾಂಬ್ ಸ್ಫೋಟ ಸಂಭವಿಸಿದ್ದು, ಸುಮಾರು 50 ಜನರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಆಸ್ಟ್ರೇಲಿಯ ಪಾಕಿಸ್ತಾನದಲ್ಲಿ ಉಳಿಯುವ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ಪೇಶಾವರದಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ, ಮಸೀದಿಯಲ್ಲಿ ಬೃಹತ್ ಬಾಂಬ್ ಸ್ಫೋಟಗೊಂಡಿತು. ಇದರಲ್ಲಿ ಸುಮಾರು 30 ಜನರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡರು. ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಇದರ ಹೊಣೆ ಹೊತ್ತುಕೊಂಡಿಲ್ಲ. ಮಾಹಿತಿ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಪೇಶಾವರ ಪೊಲೀಸರ ಪ್ರಕಾರ, ಇಬ್ಬರು ದುಷ್ಕರ್ಮಿಗಳು ಮಸೀದಿಗೆ ಪ್ರವೇಶಿಸಲು ಪ್ರಯತ್ನಿಸಿದರು, ಅವರನ್ನು ಪೊಲೀಸರು ತಡೆದಿದ್ದಾರೆ. ಕೂಡಲೇ ದುಷ್ಕರ್ಮಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಓರ್ವ ಪೊಲೀಸ್ ಅಲ್ಲೇ ಮೃತಪಟ್ಟರೆ, ಮತ್ತೋರ್ವ ಗಾಯಗೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯಾದ ಐತಿಹಾಸಿಕ ಪ್ರವಾಸ ಮುಂದುವರೆಯಲಿದೆಯೇ?
ಈ ಸ್ಫೋಟವು ಪಾಕಿಸ್ತಾನ-ಆಸ್ಟ್ರೇಲಿಯಾ ಸರಣಿಯ ಮುಂದುವರಿಕೆಯ ಪ್ರಶ್ನೆಯನ್ನು ಹುಟ್ಟುಹಾಕಿದೆ. 1998ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯ ತಂಡ ಪಾಕಿಸ್ತಾನಕ್ಕೆ ಬಂದಿದ್ದು, ಅಲ್ಲಿ 3 ಟೆಸ್ಟ್ ಪಂದ್ಯ, 3 ODI ಹಾಗೂ 1 T20 ಪಂದ್ಯವನ್ನು ಆಡಬೇಕಿದೆ. ಶುಕ್ರವಾರ ಇಡೀ ಪ್ರವಾಸದಲ್ಲಿ ಮೊದಲ ಟೆಸ್ಟ್‌ನ ಮೊದಲ ದಿನವಾಗಿದ್ದು, ಮೊದಲ ದಿನವೇ ರಾವಲ್ಪಿಂಡಿಯಿಂದ ಸುಮಾರು 190 ಕಿಮೀ ದೂರದಲ್ಲಿರುವ ಸ್ಫೋಟವು ಆಸ್ಟ್ರೇಲಿಯಾ ತಂಡವು ಪ್ರವಾಸವನ್ನು ಮುಂದುವರಿಸುತ್ತದೆಯೇ ಅಥವಾ ಹಿಂತಿರುಗುತ್ತದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪ್ರವಾಸವನ್ನು ರದ್ದುಗೊಳಿಸಿದ್ದ ನ್ಯೂಜಿಲೆಂಡ್-ಇಂಗ್ಲೆಂಡ್
ಕಳೆದ ವರ್ಷದ ಆರಂಭದಲ್ಲಿ, ಭಯೋತ್ಪಾದಕ ದಾಳಿಯ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ ನ್ಯೂಜಿಲೆಂಡ್ ತಂಡವು ಯಾವುದೇ ಪಂದ್ಯವನ್ನು ಆಡದೆ ಪಾಕಿಸ್ತಾನದಿಂದ ಮರಳಿತ್ತು. ಇದಾದ ಬಳಿಕ ಇಂಗ್ಲೆಂಡ್ ಕೂಡ ತನ್ನ ಪ್ರವಾಸವನ್ನು ರದ್ದುಗೊಳಿಸಿತ್ತು. ಈ ಬಗ್ಗೆ ಪಾಕಿಸ್ತಾನಿ ಕ್ರಿಕೆಟ್ ಮಂಡಳಿ ಮತ್ತು ಪಾಕಿಸ್ತಾನಿ ಕ್ರಿಕೆಟ್ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈ ಘಟನೆಯ ನಂತರ ಮತ್ತೆ ಪಾಕಿಸ್ತಾನದ ಕ್ರಿಕೆಟ್ ತಂಡಗಳ ಪ್ರವಾಸಕ್ಕೆ ತೊಂದರೆಯಾಗುತ್ತಿದೆ.

2009ರಲ್ಲಿ ಶ್ರೀಲಂಕಾ ತಂಡದ ಮೇಲೆ ದಾಳಿ ನಡೆದಿತ್ತು
2009ರಲ್ಲಿ ಪಾಕಿಸ್ತಾನದಲ್ಲಿ ಶ್ರೀಲಂಕಾ ತಂಡದ ಮೇಲೆ ಉಗ್ರರ ದಾಳಿ ನಡೆದಿತ್ತು. ಲಾಹೋರ್‌ನಲ್ಲಿ ಟೆಸ್ಟ್ ಪಂದ್ಯಕ್ಕೆ ತೆರಳುತ್ತಿದ್ದ ಶ್ರೀಲಂಕಾ ತಂಡದ ಬಸ್ ಮೇಲೆ ಹಲವಾರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ ಓರ್ವ ಆಟಗಾರ ಮತ್ತು ಅಂಪೈರ್ ಗಾಯಗೊಂಡಿದ್ದರು. ಇದಾದ ನಂತರ ಶ್ರೀಲಂಕಾ ತಂಡವನ್ನು ಹೆಲಿಕಾಪ್ಟರ್ ಮೂಲಕ ಕ್ರೀಡಾಂಗಣಕ್ಕೆ ಹಿಂತಿರುಗಿಸಲಾಯಿತು. ಅಂದಿನಿಂದ, ಪಾಕಿಸ್ತಾನದಲ್ಲಿ ದೀರ್ಘಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲಿಲ್ಲ. ಆದರೆ, ಕಳೆದ 4-5 ವರ್ಷಗಳಲ್ಲಿ ಪರಿಸ್ಥಿತಿ ಬದಲಾಯಿತು. ತಂಡಗಳು ಮತ್ತೆ ಪಾಕಿಸ್ತಾನಕ್ಕೆ ಬರಲು ಪ್ರಾರಂಭಿಸಿದವು, ಆದರೆ ಈ ಘಟನೆಯಿಂದ ಮತ್ತೆ ಕಪ್ಪು ಮೋಡಗಳು ಸುಳಿದಾಡಲು ಪ್ರಾರಂಭಿಸಿವೆ.

ಇದನ್ನೂ ಓದಿ:IND vs SL: ಪಂತ್‌ಗೆ ಕಾಡಿದ ನರ್ವಸ್ 90! 5ನೇ ಬಾರಿಗೆ ಶತಕದಂಚಿನಲ್ಲಿ ವಿಕೆಟ್ ಕೈಚೆಲ್ಲಿದ ರಿಷಬ್