
ಚಾಂಪಿಯನ್ಸ್ ಟ್ರೋಫಿಯಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ಇದೀಗ ಪಾಕಿಸ್ತಾನ್ ತಂಡ ಟಿ20 ಸರಣಿಗಾಗಿ ಸಜ್ಜಾಗುತ್ತಿದೆ. ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಗಾಗಿ ಈಗಾಗಲೇ ತಂಡವನ್ನು ಘೋಷಿಸಲಾಗಿದೆ. ಈ ತಂಡದಲ್ಲಿ ಶಾದಾಬ್ ಖಾನ್ ಕಾಣಿಸಿಕೊಂಡಿರುವುದು ಪಾಕ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿಯ ಕಣ್ಣು ಕೆಂಪಾಗಿಸಿದೆ.
ಟಿ20 ವಿಶ್ವಕಪ್ ಬಳಿಕ ಪಾಕಿಸ್ತಾನ್ ತಂಡದಿಂದ ಹೊರಬಿದ್ದಿದ್ದ ಶಾದಾಬ್ ಖಾನ್ ಅವರನ್ನು ಯಾವ ಅರ್ಹತೆ ಮೇಲೆ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶಾಹಿದ್ ಅಫ್ರಿದಿ ಪ್ರಶ್ನಿಸಿದ್ದಾರೆ. ಅಲ್ಲದೆ ಶಾದಾಬ್ ಅವರನ್ನು ಉಪನಾಯಕನ್ನಾಗಿ ನೇಮಿಸಿರುವುದಕ್ಕೆ ಅಚ್ಚರಿಯನ್ನು ಸಹ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅಫ್ರಿದಿ, ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತೆಗೆದುಕೊಳ್ಳುತ್ತಿರುವ ತಪ್ಪು ನಿರ್ಧಾರಗಳಿಂದಾಗಿ ಇಂದು ಪಾಕ್ ಕ್ರಿಕೆಟ್ ಐಸಿಯುನಲ್ಲಿದೆ. ನಮ್ಮ ತಂಡವು ಚೇತರಿಸಿಕೊಳ್ಳುವುದನ್ನು ಎದುರು ನೋಡುತ್ತಲೇ ಇರಬೇಕು. ಆದರೆ ಪಿಸಿಬಿ ಕಡೆಯಿಂದ ಉತ್ತಮ ತಂಡವನ್ನು ನಿರೀಕ್ಷಿಸುವಂತಿಲ್ಲ ಎಂದು ಅಫ್ರಿದಿ ಆಕ್ರೋಶ ಹೊರಹಾಕಿದ್ದಾರೆ.
ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮಂಡಳಿಯ ನಿರ್ಧಾರಗಳು ಸರಿಯಾಗಿಲ್ಲ. ಅವರು ನಿರಂತರವಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಯಾವುದೇ ದೀರ್ಘಾವಧಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಅವರು ನಾಯಕರು, ತರಬೇತುದಾರರು ಅಥವಾ ಕೆಲವು ಆಟಗಾರರನ್ನು ಬದಲಾಯಿಸುತ್ತಲೇ ಇರುತ್ತಾರೆ. ಆದರೆ, ಇದು ಮಂಡಳಿಯ ಅಧಿಕಾರಿಗಳ ಜವಾಬ್ದಾರಿಯೇ? ಎಂದು ಅಫ್ರಿದಿ ಪ್ರಶ್ನಿಸಿದ್ದಾರೆ.
ಪಿಸಿಬಿ ಅಧಿಕಾರಿಗಳು ತಮ್ಮ ಕೆಲಸವನ್ನು ಉಳಿಸಿಕೊಳ್ಳಲು ಕೋಚ್ ಆಟಗಾರರನ್ನು ದೂಷಿಸುತ್ತಿರುವುದು ದುಃಖಕರ. ನಾಯಕ ಹಾಗೂ ಕೋಚ್ ತಲೆಯ ಮೇಲೆ ತೂಗುಗತ್ತಿ ನೇತಾಡುತ್ತಿರುವಾಗ ಪಾಕಿಸ್ತಾನ್ ಕ್ರಿಕೆಟ್ ಹೇಗೆ ಪ್ರಗತಿ ಸಾಧಿಸಲು ಸಾಧ್ಯ? ಹೀಗೆ ಸದಾ ಐಸಿಯುನಲ್ಲೇ ಇರುತ್ತದೆ ಎಂದು ಶಾಹಿದ್ ಅಫ್ರಿದಿ ಬೇಸರ ಹೊರಹಾಕಿದ್ದಾರೆ.
ಇನ್ನು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಸಹ ಟೀಕಿಸಿರುವ ಅಫ್ರಿದಿ, ನಖ್ವಿ ಒಬ್ಬ ಸಕಾರಾತ್ಮಕ ವ್ಯಕ್ತಿ ಎಂದು ನಾನು ಭಾವಿಸಿದ್ದೆ. ಆದರೆ, ಅವನಿಗೆ ಕ್ರಿಕೆಟ್ ಬಗ್ಗೆ ಹೆಚ್ಚು ತಿಳಿದಿಲ್ಲ ಎಂಬುದೇ ಸತ್ಯ. ಹೀಗಾಗಿಯೇ ನಮ್ಮ ತಂಡ ಇಂದು ಈ ಸ್ಥಿತಿಯಲ್ಲಿದೆ ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ ವಿಶ್ವಕಪ್ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲ..!
ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯು ಮಾರ್ಚ್ 16 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ ತಂಡಕ್ಕೆ ಸಲ್ಮಾನ್ ಅಲಿ ಅಘಾ ಅವರನ್ನು ನಾಯಕರನ್ನಾಗಿ ಮಾಡಿದರೆ, ಶಾದಾಬ್ ಖಾನ್ ಅವರನ್ನು ಉಪನಾಯಕನ್ನಾಗಿ ನೇಮಿಸಿದೆ. ಅದರಂತೆ ಕಿವೀಸ್ ವಿರುದ್ಧದ ಸರಣಿಗೆ ಪಾಕಿಸ್ತಾನ್ ಟಿ20 ತಂಡ ಈ ಕೆಳಗಿನಂತಿದೆ…
ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಹಾರಿಸ್ ರೌಫ್, ಹಸನ್ ನವಾಝ್, ಜಹಂದಾದ್ ಖಾನ್, ಖುಷ್ದಿಲ್ ಶಾ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಲಿ, ಮೊಹಮ್ಮದ್ ಹಾರಿಸ್, ಮುಹಮ್ಮದ್ ಇರ್ಫಾನ್ ಖಾನ್, ಒಮೈರ್ ಬಿನ್ ಯೂಸುಫ್, ಶಾಹೀನ್ ಅಫ್ರಿದಿ, ಸುಫಿಯಾನ್ ಮೊಕಿಮ್ ಮತ್ತು ಉಸ್ಮಾನ್ ಖಾನ್.