
ಪ್ರತಿಯೊಂದು ಕ್ರಿಕೆಟ್ ತಂಡಕ್ಕೂ ತನ್ನದೇ ಆದ ಗುರುತಿರುತ್ತದೆ. ತಂಡದ ಹೆಸರು, ಆಟಗಾರರು ಮಾತ್ರವಲ್ಲ, ಆಟಗಾರರು ತೊಡುವ ಜೆರ್ಸಿಯ ಬಣ್ಣ ಕೂಡ ಆ ತಂಡದ ಗುರುತಾಗಿರುತ್ತದೆ. ಅದರಲ್ಲೂ ಪಾಕಿಸ್ತಾನ ಅಂದ್ರೆ ನೆನಪಿಗೆ ಬರೋದೇ ಹಸಿರು ಜೆರ್ಸಿ. ಆದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಹಸಿರು ಬಣ್ಣ ಬಿಟ್ಟು ಗುಲಾಬಿ ಬಣ್ಣದ ಜೆರ್ಸಿ ತೊಟ್ಟು ಮೈದಾನಕ್ಕಿಳಿದಿದ್ದರು. ಅಷ್ಟಕ್ಕೂ ಪಾಕಿಸ್ತಾನ ತಂಡ ಈ ರೀತಿ ಬಣ್ಣ ಬದಲಾಯಿಸಿದ್ದೇಕೆ? ಇದರ ಹಿಂದಿರೋ ಕಾರಣ ಏನು ಗೊತ್ತಾ?
ಅಕ್ಟೋಬರ್ 25ರ ಭಾನುವಾರ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ತ್ರಿಕೋನ ಸರಣಿಯ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಗುಲಾಬಿ ಬಣ್ಣದ ಜೆರ್ಸಿ ಧರಿಸಿ ಆಡಿದರು. ಅಷ್ಟೇ ಅಲ್ಲ, ಮೊದಲ ಪಂದ್ಯವಾಡುತ್ತಿದ್ದ ರಜಾವುಲ್ಲಾ ಅವರಿಗೂ ಹಸಿರು ಬಣ್ಣದ ಬದಲಿಗೆ ಗುಲಾಬಿ ಬಣ್ಣದ ಕ್ಯಾಪ್ ನೀಡಲಾಗಿತ್ತು. ಆದರೆ ಈ ಬದಲಾವಣೆಯ ಹಿಂದೆ ವಿಶೇಷವಾದ ಉದ್ದೇಶವಿತ್ತು. ಸ್ತನ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋದು ಮತ್ತು ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿಕೊಳ್ಳುವಂತೆ ಪ್ರೋತ್ಸಾಹಿಸೋದು ಈ ಅಭಿಯಾನದ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರಿಗೆ ಗುಲಾಬಿ ಜೆರ್ಸಿ ತೊಡಿಸಿತ್ತು.
ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ವಿಶ್ವದಾದ್ಯಂತ ಸ್ತನ ಕ್ಯಾನ್ಸರ್ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಪಿಂಕ್ ರಿಬ್ಬನ್ ಬ್ರೆಸ್ಟ್ ಕ್ಯಾನ್ಸರ್ ಟ್ರಸ್ಟ್ ಆಸ್ಪತ್ರೆಯ ಜೊತೆ ಕೈಜೋಡಿಸಿ ಈ ವಿಶೇಷ ಅಭಿಯಾನ ನಡೆಸಿತ್ತು. ಸ್ತನ ಕ್ಯಾನ್ಸರ್ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಆರಂಭಿಕ ತಪಾಸಣೆಯ ಮಹತ್ವ ತಿಳಿಸೋದು ಮತ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ನೆರವು ನೀಡೋದು ಈ ಅಭಿಯಾನದ ಉದ್ದೇಶವಾಗಿತ್ತು. ಪಾಕಿಸ್ತಾನದ ಆಟಗಾರರಷ್ಟೇ ಅಲ್ಲದೆ, ಇಂಗ್ಲೆಂಡ್ ಆಟಗಾರರು, ಪಂದ್ಯದ ಅಧಿಕಾರಿಗಳು ಮತ್ತು ಪ್ರೇಕ್ಷಕರು ಕೂಡ ತಮ್ಮ ಜೆರ್ಸಿಗೆ ಗುಲಾಬಿ ರಿಬ್ಬನ್ ಧರಿಸುವ ಮೂಲಕ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.
ಕೊಹ್ಲಿ ಬಾರಿಸಿದ ಆ 2 ಸಿಕ್ಸರ್ಗಳು ಇಡೀ ಕ್ರಿಕೆಟ್ ಲೋಕವನ್ನೇ ನಿಬ್ಬೇರಗಾಗಿಸಿದವು..! ವಿಡಿಯೋ
ಈ ಪಂದ್ಯದಲ್ಲಿ ಆಟಗಾರರು ಗುಲಾಬಿ ಜೆರ್ಸಿ ಧರಿಸಿದ್ದಷ್ಟೇ ಅಲ್ಲ, ಗುಲಾಬಿ ಬಣ್ಣದ ಸ್ಟಂಪ್‌ಗಳನ್ನೂ ಬಳಸಲಾಗಿತ್ತು. ಗಡಾಫಿ ಕ್ರೀಡಾಂಗಣದ ಸುತ್ತಮುತ್ತಲಿನ ಪರದೆಗಳು ಮತ್ತು ಜಾಹೀರಾತು ಫಲಕಗಳಲ್ಲೂ ಸ್ತನ ಕ್ಯಾನ್ಸರ್ ಜಾಗೃತಿಗೆ ಸಂಬಂಧಿಸಿದ ಸಂದೇಶಗಳನ್ನು ಪ್ರದರ್ಶಿಸಲಾಗಿತ್ತು. ಇಷ್ಟೇ ಅಲ್ಲ, ಅಕ್ಟೋಬರ್ 24ರಿಂದ 26ರವರೆಗೆ ಅಭಿಮಾನಿಗಳಿಗೆ ಉಚಿತ ಸ್ತನ ಕ್ಯಾನ್ಸರ್ ತಪಾಸಣೆಯ ವ್ಯವಸ್ಥೆಯನ್ನೂ ಪಿಸಿಬಿ ಮಾಡಿತ್ತು. ಪಿಂಕ್ ರಿಬ್ಬನ್ ಬ್ರೆಸ್ಟ್ ಕ್ಯಾನ್ಸರ್ ಟ್ರಸ್ಟ್ ಆಸ್ಪತ್ರೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.