
ಒಂದೆಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಗೂ ಅಲ್ಲಿನ ಸರ್ಕಾರದಲ್ಲಿ ಸಚಿವರಾಗಿರುವ ಮೊಹ್ಸಿನ್ ನಖ್ವಿ ಕೈನಿಂದ ಏಷ್ಯಾಕಪ್ ಟ್ರೋಫಿಯನ್ನು ಸ್ವೀಕರಿಸಲು ಭಾರತ ಕ್ರಿಕೆಟ್ ತಂಡ ಒಪ್ಪದೆ ಟ್ರೋಫಿ ಇಲ್ಲದೆಯೇ ದುಬೈನಿಂದ ಭಾರತಕ್ಕೆ ವಾಪಸ್ಸಾಗುತ್ತಿದೆ. ಇನ್ನೊಂದೆಡೆ ಅದೇ ಪಾಕಿಸ್ತಾನದ ತಂಡಕ್ಕೆ ಭಾರತದಲ್ಲಿ ಪಂದ್ಯಾವಳಿಯನ್ನು ಆಡಲು ಅನುಮತಿ ನೀಡಲಾಗಿದೆ. ಪಾಕಿಸ್ತಾನದ ತಂಡವೊಂದು ಭಾರತಕ್ಕೆ ಬರುವುದಕ್ಕೆ ಅನುಮತಿ ನೀಡಿರುವುದು ಮತ್ತು ಅಲ್ಲಿನ ಸರ್ಕಾರ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ಒಪ್ಪಿಗೆ ಸೂಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಇದೇ ಅಕ್ಟೋಬರ್ 27 ರಿಂದ ಆರಂಭವಾಗಲಿರುವ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಹಾಕಿ ತಂಡ ಭಾರತಕ್ಕೆ ಬರುತ್ತಿರುವುದಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸ್ಪಷ್ಟಪಡಿಸಿದ್ದಾರೆ.
ವಾಸ್ತವವಾಗಿ ಪುರುಷರ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯು ಪಂಜಾಬ್‌ನ ಎರಡು ನಗರಗಳಾದ ಮೊಹಾಲಿ ಮತ್ತು ಜಲಂಧರ್‌ನಲ್ಲಿ ಅಕ್ಟೋಬರ್ 27, 2026 ರಿಂದ ನವೆಂಬರ್ 5, 2026 ರವರೆಗೆ ನಡೆಯಲಿದೆ. ಭಾರತ ಸೇರಿದಂತೆ ಆರು ದೇಶಗಳ ತಂಡಗಳು ಇದರಲ್ಲಿ ಭಾಗವಹಿಸಲಿವೆ. ವಿಶೇಷವೆಂದರೆ ಭಾರತದಲ್ಲಿ ನಡೆಯಲಿರುವ ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಬರುವ ಆ ಆರು ದೇಶಗಳಲ್ಲಿ ಪಾಕಿಸ್ತಾನದ ಹಾಕಿ ತಂಡವೂ ಸೇರಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೋಮವಾರ ಮೊಹಾಲಿಯಲ್ಲಿ ನಡೆದ ಹಾಕಿ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಅಧಿಕೃತ ಘೋಷಣೆ ಮಾಡಿದ್ದಾರೆ.
ಪುರುಷರ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ಪಾಕಿಸ್ತಾನ, ಚೀನಾ, ಜಪಾನ್, ಮಲೇಷ್ಯಾ ಮತ್ತು ಕೊರಿಯಾ ತಂಡಗಳು ಭಾಗವಹಿಸಲಿವೆ. ಒಂದು ತಂಡ ಪಂದ್ಯಾವಳಿಯಿಂದ ಹಿಂದೆ ಸರಿದರೆ, ಆ ಸ್ಥಾನವನ್ನು ಓಮನ್ ಅಥವಾ ಬಾಂಗ್ಲಾದೇಶಕ್ಕೆ ನೀಡಲಾಗುತ್ತದೆ. ಈ ಪಂದ್ಯಾವಳಿಯನ್ನು ವಾರ್ಷಿಕವಾಗಿ ಏಷ್ಯನ್ ಹಾಕಿ ಫೆಡರೇಶನ್ ಆಶ್ರಯದಲ್ಲಿ ನಡೆಸಲಾಗುತ್ತದೆ, ಆದರೆ ಕಳೆದ ವರ್ಷ ನಡೆಯಲಿಲ್ಲ. 2023 (ಚೆನ್ನೈ) ಮತ್ತು 2024 (ಹುಲುನ್‌ಬುಯಿರ್, ಚೀನಾ) ನಲ್ಲಿ ಪ್ರಶಸ್ತಿಗಳನ್ನು ಗೆದ್ದಿರುವ ಭಾರತವು ಹಾಲಿ ಚಾಂಪಿಯನ್ ಆಗಿ ಸ್ಪರ್ಧೆಗೆ ಪ್ರವೇಶಿಸಲಿದೆ.
ಇನ್ನು ಪಾಕಿಸ್ತಾನದ ಹಾಕಿ ತಂಡ ಭಾಗವಹಿಸುವಿಕೆಯ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಬಳಿ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅವರು ‘ದ್ವಿಪಕ್ಷೀಯ ಸರಣಿಯನ್ನು ಹೊರತುಪಡಿಸಿ, ಭಾರತ ತಂಡವು ಪ್ರತಿಯೊಂದು ಪಂದ್ಯಾವಳಿಯಲ್ಲಿ ಪಾಕಿಸ್ತಾನದೊಂದಿಗೆ ಆಡುವುದು ಕೇಂದ್ರ ಸರ್ಕಾರದ ನೀತಿಯಾಗಿದೆ. ಒಲಿಂಪಿಕ್ ಚಾರ್ಟರ್ ಅನ್ನು ಅನುಸರಿಸುವುದರಿಂದ ಭಾರತ ತಂಡವು ಬಹು ರಾಷ್ಟ್ರಗಳ ಪಂದ್ಯಾವಳಿಗಳಲ್ಲಿ ಪಾಕಿಸ್ತಾನದ ವಿರುದ್ಧ ಆಡುವುದನ್ನು ತಡೆಯಲಾಗುವುದಿಲ್ಲ. ಹಾಗೆಯೇ ಪಾಕಿಸ್ತಾನಿ ಆಟಗಾರರು ಭಾರತದಲ್ಲಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಭಾರತ ತಡೆಯುವುದಿಲ್ಲ ಎಂದಿದ್ದಾರೆ. ಆದಾಗ್ಯೂ, ಇದರ ಹೊರತಾಗಿಯೂ, ಕಳೆದ ವರ್ಷ ತಮಿಳುನಾಡಿನಲ್ಲಿ ನಡೆದ ಜೂನಿಯರ್ ಹಾಕಿ ವಿಶ್ವಕಪ್‌ನಿಂದ ಪಾಕಿಸ್ತಾನ ಹಿಂದೆ ಸರಿದಿತ್ತು. ಆದರೆ ಈ ಬಾರಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ಒಪ್ಪಿಗೆ ಸೂಚಿಸಿದೆ.
ಇನ್ನು ಈ ಪಂದ್ಯಾವಳಿಯ ಬಗ್ಗೆ ಮಾಹಿತಿ ನೀಡಿದ ಅವರು, ‘ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ಮತ್ತು ಉದ್ಘಾಟನಾ ಸಮಾರಂಭವು ಜಲಂಧರ್‌ನಲ್ಲಿ ನಡೆಯಲಿದ್ದು, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಮೊಹಾಲಿ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್, ‘ಭಾರತ ಮತ್ತು ಪಾಕಿಸ್ತಾನದ ಹಾಕಿ ನಡುವೆ ಉತ್ತಮ ಸಂಬಂಧವಿದೆ. ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿದರೆ, ನಾನು ಮೊದಲು ಭೇಟಿಯಾಗುವುದು ಪಾಕಿಸ್ತಾನ ತಂಡವನ್ನು. ಪಾಕ್ ಆಟಗಾರರು ಸಹ ನನಗೆ ತುಂಬಾ ಗೌರವ ತೋರಿಸುತ್ತಾರೆ’ ಎಂದಿದ್ದಾರೆ.
Published On - 6:52 pm, Mon, 14 September 26