
T20 World Cup 2026: ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ಗೆ ಅರ್ಹತೆ ಪಡೆಯಬೇಕಿದ್ದರೆ ಪಾಕಿಸ್ತಾನ್ ತಂಡ ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕು. ಈ ಗೆಲುವಿನೊಂದಿಗೆ ಪಾಕ್ ಪಡೆ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಲೇಬೇಕು. ಸೂಪರ್-8 ಸುತ್ತಿನ ಗ್ರೂಪ್-2 ಅಂಕ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡವು ಅಗ್ರಸ್ಥಾನದಲ್ಲಿದ್ದರೆ, ನ್ಯೂಝಿಲೆಂಡ್ ತಂಡ ದ್ವಿತೀಯ ಸ್ಥಾನದಲ್ಲಿದೆ.
ಇದೀಗ ನ್ಯೂಝಿಲೆಂಡ್ ತಂಡವನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಿದರೆ ಮಾತ್ರ ಪಾಕಿಸ್ತಾನ್ ತಂಡಕ್ಕೆ ಸೆಮಿಫೈನಲ್ಗೇರಲು ಅವಕಾಶ ದೊರೆಯಲಿದೆ. ಆದರೆ ಹೀಗೆ ನೆಟ್ ರನ್ ರೇಟ್ನಲ್ಲಿ ಕಿವೀಸ್ ಪಡೆಯನ್ನು ಹಿಂದಿಕ್ಕಲು ಪಾಕ್ ತಂಡದ ಮುಂದಿರುವುದು ಎರಡೇ ಎರಡು ದಾರಿ.
ಒಂದು ಭಾರೀ ಅಂತರದ ಗೆಲುವು. ಇನ್ನೊಂದು ಅತೀ ಕಡಿಮೆ ಓವರ್ಗಳಲ್ಲಿ ರನ್ ಚೇಸ್. ಆದರೆ ಇವೆರಡು ಅಂದುಕೊಂಡಷ್ಟು ಸುಲಭವಲ್ಲ.
ಉದಾಹರಣೆಗೆ:- ಶ್ರೀಲಂಕಾ ತಂಡವು 201 ರನ್ಗಳ ಗುರಿ ನೀಡಿದರೆ ಪಾಕಿಸ್ತಾನ್ ತಂಡವು 14 ಓವರ್ಗಳ ಒಳಗೆನೇ ಪಂದ್ಯವನ್ನು ಮುಗಿಸುವುದು ಅನಿವಾರ್ಯ.
ಅಂದರೆ ನ್ಯೂಝಿಲೆಂಡ್ ತಂಡದ ನೆಟ್ ರನ್ ರೇಟ್ ಹಿಂದಿಕ್ಕಲು ಪಾಕಿಸ್ತಾನ್ ತಂಡಕ್ಕೆ ಕನಿಷ್ಠ 64 ರನ್ಗಳ ಅಂತರದ ಗೆಲುವು ಅನಿವಾರ್ಯ. ಇನ್ನು ಶ್ರೀಲಂಕಾ ನೀಡುವ ಗುರಿಯನ್ನು 14 ಓವರ್ಗಳಲ್ಲಿ ಚೇಸ್ ಮಾಡುವುದು ಸಹ ಅತ್ಯಗತ್ಯ.
ಒಂದು ವೇಳೆ ಪಾಕಿಸ್ತಾನ್ ತಂಡವು 64 ಕ್ಕಿಂತ ಕಡಿಮೆ ರನ್ಗಳ ಅಂತರದಿಂದ ಗೆದ್ದರೆ ಟಿ20 ವಿಶ್ವಕಪ್ನಿಂದ ಹೊರಬೀಳಲಿದೆ. ಹಾಗೆಯೇ ಶ್ರೀಲಂಕಾ 201 ರನ್ಗಳ ಗುರಿ ನೀಡಿದರೆ ಪಾಕಿಸ್ತಾನ್ 14 ಓವರ್ಗಳನ್ನು ಆಡಿದರೂ ಕೂಡ ವಿಶ್ವಕಪ್ ಅಭಿಯಾನ ಅಂತ್ಯವಾಗಲಿದೆ.
ಅಂದರೆ ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್ನ ಭವಿಷ್ಯ 64 ರನ್ ಹಾಗೂ 13.5 ಓವರ್ಗಳ ನಡುವೆ ನಿಂತಿದೆ. ಹೀಗಾಗಿ ಇಂದಿನ ಮ್ಯಾಚ್ನಲ್ಲಿ ಪಾಕ್ ಪಡೆ ಸಂಪೂರ್ಣ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಲಿದೆ. ಈ ಲೆಕ್ಕಾಚಾರದ ಮೂಲಕ ಗೆಲುವು ಸಾಧಿಸಲು ವಿಫಲವಾದರೆ ನ್ಯೂಝಿಲೆಂಡ್ ತಂಡವು ಟಿ20 ವಿಶ್ವಕಪ್ನ ಸೆಮಿಫೈನಲ್ಗೇರಲಿದೆ.
ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್ಗೆ 12 ತಂಡಗಳು ಆಯ್ಕೆ
ಒಟ್ಟಿನಲ್ಲಿ ಆರಂಭದಿಂದಲೇ ಸೋಲು-ಗೆಲುವುಗಳ ಲೆಕ್ಕಾಚಾರದೊಂದಿಗೆ ಸೂಪರ್-8 ಸುತ್ತಿಗೆ ಎಂಟ್ರಿ ಕೊಟ್ಟಿರುವ ಪಾಕಿಸ್ತಾನ್ ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಮ್ಯಾಚ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ ಕನಿಷ್ಠ 64 ರನ್ಗಳ ಜಯ ಅಥವಾ ಗರಿಷ್ಠ 13.5 ಓವರ್ಗಳಲ್ಲಿ ಪಂದ್ಯ ಮುಗಿಸಿ ಸೆಮಿಫೈನಲ್ಗೇರಲಿದೆಯಾ ಕಾದು ನೋಡಬೇಕಿದೆ.