ಪಾಕಿಸ್ತಾನ್ ವೇಗಿ ನಸೀಮ್ ಶಾಗೆ 2 ಕೋಟಿ ರೂ. ದಂಡ..!

Naseem Shah: ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ ಅವರು ಟಿ20 ಕ್ರಿಕೆಟ್‌ನಲ್ಲಿ ಪ್ರಭಾವಿ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. 2024 ರಲ್ಲಿ ನಡೆದ ಭಾರತದ ವಿರುದ್ಧ ಟಿ20 ಪಂದ್ಯದಲ್ಲಿ 4 ಓವರ್​ಗಳಲ್ಲಿ 21 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ರಾವಲ್ಪಿಂಡಿಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

ಪಾಕಿಸ್ತಾನ್ ವೇಗಿ ನಸೀಮ್ ಶಾಗೆ 2 ಕೋಟಿ ರೂ. ದಂಡ..!
Naseem Shah

Updated on: Mar 31, 2026 | 2:55 PM

ಪಾಕಿಸ್ತಾನದ ವೇಗಿ ನಸೀಮ್ ಶಾ (Naseem Shah) ಅವರಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ (PCB) ಸುಮಾರು 2 ಕೋಟಿ ರೂಪಾಯಿ (PKR) ಭಾರಿ ದಂಡ ವಿಧಿಸಿದೆ. ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲೇ ಇದು ಒಬ್ಬ ಆಟಗಾರನಿಗೆ ವಿಧಿಸಲಾದ ಅತಿ ದೊಡ್ಡ ಮೊತ್ತದ ದಂಡ ಎಂಬುದು ವಿಶೇಷ.

ದಂಡ ವಿಧಿಸಲು ಕಾರಣವೇನು?

ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಝ್ ಅವರನ್ನು ಟೀಕಿಸಿ ನಸೀಮ್ ಶಾ ಅವರ ಎಕ್ಸ್ (ಟ್ವಿಟರ್) ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು.

ಪಾಕಿಸ್ತಾನ್ ಸೂಪರ್ ಲೀಗ್​ನ (PSL 2026) ಪಂದ್ಯವೊಂದರ ವೇಳೆ ಮರಿಯಮ್ ನವಾಝ್ ಅವರಿಗೆ ನೀಡಲಾಗಿದ್ದ ವಿಶೇಷ ಗೌರವವನ್ನು ಪ್ರಶ್ನಿಸಿ, “ಅವರನ್ನು ಲಾರ್ಡ್ಸ್ ಮೈದಾನದ ರಾಣಿಯಂತೆ ಏಕೆ ನಡೆಸಿಕೊಳ್ಳಲಾಗುತ್ತಿದೆ?” ಎಂದು ವ್ಯಂಗ್ಯವಾಡಿದ್ದರು.

ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದ ಈ ಪೋಸ್ಟ್ ವಿವಾದಕ್ಕೆ ಕಾರಣಗಾಗುತ್ತಿದ್ದಂತೆ ನಸೀಮ್ ಶಾ ಅದನ್ನು ಡಿಲೀಟ್ ಮಾಡಿದ್ದರು. ಅಲ್ಲದೆ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಎಂದು ಅವರು ಸ್ಪಷ್ಟನೆ ನೀಡಿದ್ದರು.

ಪಿಸಿಬಿ ಕ್ರಮ:

ನಸೀಮ್ ಶಾ ಅವರ ‘ಹ್ಯಾಕಿಂಗ್’ ವಾದವನ್ನು ತಳ್ಳಿಹಾಕಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿ, ಇದು ಕೇಂದ್ರ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಿದೆ.

ಅಲ್ಲದೆ ಯುವ ವೇಗಿಯನ್ನು ಎರಡು ವರ್ಷಗಳ ಕಾಲ ನಿಷೇಧಿಸುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಹಸ್ತಕ್ಷೇಪದಿಂದಾಗಿ ಕೇವಲ ಆರ್ಥಿಕ ದಂಡಕ್ಕೆ ಸೀಮಿತಗೊಳಿಸಲಾಯಿತು.

ಅದರಂತೆ ಇದೀಗ ನಸೀಮ್ ಶಾಗೆ ಬರೋಬ್ಬರಿ 2 ಕೋಟಿ ರೂ. (PKR) ದಂಡ ವಿಧಿಸಲಾಗಿದೆ. ಇನ್ನು ತಾನು ಮಾಡಿರುವ ಪ್ರಮಾದಕ್ಕೆ ಪಾಕ್ ವೇಗಿ, ಮಂಡಳಿಯ ಮುಂದೆ ಬೇಷರತ್ ಕ್ಷಮೆಯಾಚಿಸಿದ್ದಾರೆ.

ಮ್ಯಾನೇಜರ್​ಗೆ ಗೇಟ್ ಪಾಸ್:

ಈ ಘಟನೆಯ ನಂತರ ನಸೀಮ್ ಶಾ ಅವರು ತಮ್ಮ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಅನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಪಿಸಿಬಿ ಕೂಡ ಆ ಮ್ಯಾನೇಜರ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದೆ.

ಇದನ್ನೂ ಓದಿ: 19 ವರ್ಷಗಳಲ್ಲೇ ಮೊದಲ ಬಾರಿ… CSK ಪಾಲಿಗೆ ಇದು ಅಂತಿಂಥ ಸೋಲಲ್ಲ!

ಸದ್ಯ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ತೊಡಗಿಸಿಕೊಂಡಿರುವ ನಸೀಮ್ ಶಾ ರಾವಲ್ಪಿಂಡಿಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಪಿಂಡಿಸ್ ಫ್ರಾಂಚೈಸಿ ಪರ ಕಣಕ್ಕಿಳಿಯುತ್ತಿರುವ ನಸೀಮ್​ಗೆ ಈ ಬಾರಿ ಸಿಗುವ ವೇತನ 8.65 ಕೋಟಿ ರೂ. (PKR). ಇದರಲ್ಲಿ ಇದೀಗ 2 ಕೋಟಿ ರೂ. ದಂಡ ಪಾವತಿಸಬೇಕಾಗಿ ಬಂದಿದೆ.

 

Follow Us