PAK vs AUS: ಗೆಲುವಿಗೆ ಬೇಕು 278 ರನ್: ರೋಚಕ ಘಟ್ಟದತ್ತ ಪಾಕಿಸ್ತಾನ- ಆಸ್ಟ್ರೇಲಿಯಾ ಅಂತಿಮ ಟೆಸ್ಟ್
ಗುರಿ ಬೆನ್ನಟ್ಟಿರುವ ಬಾಬರ್ ಪಡೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 73 ರನ್ ಬಾರಿಸಿದೆ. ಪಾಕ್ ಗೆಲುವಿಗೆ ಇನ್ನೂ 278 ರನ್ಗಳ ಅವಶ್ಯಕತೆಯಿದ್ದರೆ ಆಸೀಸ್ ಗೆಲುವಿಗೆ 10 ವಿಕೆಟ್ಗಳು ಬೇಕಾಗಿದೆ.
ಪಾಕಿಸ್ತಾನ ಪ್ರವಾಸ ಬೆಳೆಸಿರುವ ಆಸ್ಟ್ರೇಲಿಯಾ (Pakistan vs Australia) ಕ್ರಿಕೆಟ್ ತಂಡ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಈಗಾಗಲೇ ನಡೆದಿರುವ ಎರಡು ಪಂದ್ಯ ಡ್ರಾ ಮೂಲಕ ಅಂತ್ಯಕಂಡಿದ್ದರೆ ಸದ್ಯ ಲಾಹೋರ್ನಲ್ಲಿ ಸಾಗುತ್ತಿರುವ ಮೂರನೇ ಟೆಸ್ಟ್ (3rd Test) ಕೂಡ ರೋಚಕ ಘಟ್ಟಕ್ಕೆ ತಲುಪಿದೆ. ಆಸ್ಟ್ರೇಲಿಯಾವನ್ನು 391 ರನ್ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ 268 ರನ್ಗೆ ಸರ್ವಪತನ ಕಂಡಿತು. ಉತ್ತಮ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಪ್ಯಾಟ್ ಕಮಿನ್ಸ್ (Pat Cummins) ಪಡೆ 227 ರನ್ಗೆ ಡಿಕ್ಲೇರ್ ಘೋಷಿಸಿ ಪಾಕ್ಗೆ ಗೆಲ್ಲಲು 351 ರನ್ಗಳ ಸವಾಲಿನ ಟಾರ್ಗೆಟ್ ನೀಡಿದೆ. ಗುರಿ ಬೆನ್ನಟ್ಟಿರುವ ಬಾಬರ್ ಪಡೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 73 ರನ್ ಬಾರಿಸಿದೆ. ಪಾಕ್ ಗೆಲುವಿಗೆ ಇನ್ನೂ 278 ರನ್ಗಳ ಅವಶ್ಯಕತೆಯಿದ್ದರೆ ಆಸೀಸ್ ಗೆಲುವಿಗೆ 10 ವಿಕೆಟ್ಗಳು ಬೇಕಾಗಿದೆ. ಹೀಗಾಗಿ ಅಂತಿಮ ಐದನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಪಂದ್ಯದ ಸಂಕ್ಷಿಪ್ತ ವಿವರ:
ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 133.3 ಓವರ್ನಲ್ಲಿ 391 ರನ್ಗೆ ಆಲೌಟ್ ಆಯಿತು. ಉಸ್ಮಾನ್ ಖ್ವಾಜಾ 219 ಎಸೆತಗಳಲ್ಲಿ 91 ರನ್ ಗಳಿಸಿದರೆ, ಕ್ಯಾಮೆರಾನ್ ಗ್ರೀನ್ 163 ಎಸೆತಗಳಲ್ಲಿ 79 ರನ್, ಅಲೆಕ್ಸ್ ಹೇಲ್ಸ್ 67 ಮತ್ತು ಸ್ಟೀವ್ ಸ್ಮಿತ್ 59 ರನ್ ಬಾರಿಸಿದರು. ಪಾಕಿಸ್ತಾನ ಪರ ಶಾಹಿನ್ ಶಾ ಅಫ್ರಿದಿ ಹಾಗೂ ನಸೀಂ ಶಾ ತಲಾ 4 ವಿಕೆಟ್ ಕಿತ್ತು ಮಿಂಚಿದರು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆರಂಭದಲ್ಲೇ ಪಾಕ್ ಇಮಾಮ್ ಉಲ್ ಹಖ್ (11) ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟ್ಗೆ ಅದ್ಬುಲ್ ಶಫೀಖ್ ಮತ್ತು ಅಝರ್ ಅಲಿ 150 ರನ್ಗಳ ಅಮೋಘ ಜೊತೆಯಾಟ ಆಡಿದರು. ಶಫೀಖ್ 228 ಎಸೆತಗಳಲ್ಲಿ 81 ರನ್ ಗಳಿಸಿದರೆ, ಅಝರ್ ಅಲಿ 208 ಎಸೆತಗಳಲ್ಲಿ 78 ರನ್ ಬಾರಿಸಿದರು. ಬಳಿಕ ಬಂದ ನಾಯಕ ಬಾಬರ್ ಅಜಾಮ್ 131 ಎಸೆತಗಳಲ್ಲಿ 67 ರನ್ ಸಿಡಿಸಿ ಔಟಾದರು.
256 ರನ್ಗೆ 5ನೇ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 268 ರನ್ಗೆ ಆಲೌಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದರಲ್ಲೂ 268 ರನ್ ಗಳಿಸಿದ್ದಾಗ ಬರೋಬ್ಬರಿ 4 ವಿಕೆಟ್ ಪತನಗೊಂಡಿತು. ಅಂತಿಮವಾಗಿ ಪಾಕ್ 116.4 ಓವರ್ನಲ್ಲಿ 268 ರನ್ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ಪರ ನಾಯಕ ಪ್ಯಾಟ್ ಕಮಿನ್ಸ್ 5 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದರು. 123 ರನ್ಗಳ ಉತ್ತಮ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿತ್ತು.
ನಾಲ್ಕನೇ ದಿನ ಬ್ಯಾಟಿಂಗ್ ಮುಂದುವರೆಸಿದ ಆಸ್ಟ್ರೇಲಿಯಾ ಭರ್ಜರಿ ರನ್ ಕಲೆಹಾಕಿತು. ವಾರ್ನರ್ ಹಾಗೂ ಖ್ವಾಜಾ ಮೊದಲ ವಿಕೆಟ್ಗೆ 96 ರನ್ಗಳ ಕಾಣಿಕೆ ನೀಡಿದರು. ವಾರ್ನರ್ 51 ರನ್ಗೆ ಔಟಾದರೆ ಮಾರ್ನಸ್ ಲ್ಯಾಬುಶೇನ್ 36 ರನ್ಗೆ ನಿರ್ಗಮಿಸಿದರು. ಸ್ಟೀವ್ ಸ್ಮಿತ್ ಈ ಬಾರಿ 17 ರನ್ಗೆ ಬೇಗನೆ ಬ್ಯಾಟ್ ಕೆಳಗಿಟ್ಟರು. ಇದರ ನಡುವೆ ಖ್ವಾಜಾ ಭರ್ಜರಿ ರನ್ ಕಲೆಹಾಕುತ್ತಿದ್ದರು. ಖ್ವಾಜಾ ಬ್ಯಾಟ್ನಿಂದ ಶತಕ ಸಿಡಿಯುತ್ತಿದ್ದಂತೆ ಆಸ್ಟ್ರೇಲಿಯಾ ಡಿಕ್ಲೇರ್ ಘೋಷಿಸಿತು. 60 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿ ಆಸೀಸ್ ಬ್ಯಾಟಿಂಗ್ ನಿಲ್ಲಿಸಿತು. ಖ್ವಾಜಾ 178 ಎಸೆತಗಳಲ್ಲಿ ಅಜೇಯ 104 ರನ್ ಬಾರಿಸಿದರೆ ಟ್ರಾವಿಸ್ ಹೆಡ್ ಅಜೇಯ 11 ರನ್ ಗಳಿಸಿದರು.
ಹೀಗೆ ಆಸ್ಟ್ರೇಲಿಯಾ ನೀಡಿರುವ 351 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿರುವ ಪಾಕ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ಉತ್ತಮ ಆರಂಭ ಪಡೆದುಕೊಂಡು 73 ರನ್ ಕಲೆಹಾಕಿದೆ. ಗೆಲುವಿಗೆ ಇನ್ನೂ 278 ರನ್ಗಳು ಬೇಕಾಗಿದೆ. ಹೀಗಾಗಿ ಎಲ್ಲರ ಕಣ್ಣು ಅಂತಿಮ ಐದನೇ ದಿನದಾಟದ ಮೇಲಿದೆ.