Pakistan vs England, 1st Test: ಪಾಕ್​ಗೆ ಮುಖಭಂಗ: ಇಂಗ್ಲೆಂಡ್​ಗೆ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Dec 05, 2022 | 5:38 PM

Pakistan vs England, 1st Test: ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲ ಪಡೆಯ ನಾಯಕ ಬೆನ್ ಸ್ಟೋಕ್ಸ್ (Ben Stokes) ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ ಪಾಕ್ ಬೌಲರ್​ಗಳಿಗೆ ಬಾಝ್ ​ಬಾಲ್ ಅಬ್ಬರ ಹೇಗಿರುತ್ತೆ ಎಂಬುದನ್ನು ತೋರಿಸಿಕೊಟ್ಟಿದ್ದರು.

Pakistan vs England, 1st Test: ಪಾಕ್​ಗೆ ಮುಖಭಂಗ: ಇಂಗ್ಲೆಂಡ್​ಗೆ ಭರ್ಜರಿ ಜಯ
England
Follow us on

Pakistan vs England, 1st Test: ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​ ತಂಡವು ಭರ್ಜರಿ ಜಯ ಸಾಧಿಸಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕೊನೆಯ ದಿನದಾಟದಲ್ಲಿ ಮೇಲುಗೈ ಸಾಧಿಸುವ ಮೂಲಕ ಇಂಗ್ಲೆಂಡ್ ಬೌಲರ್​ಗಳು ಜಯದ ನಗೆ ಬೀರಿದರು. ಬ್ಯಾಟಿಂಗ್ ಪಿಚ್​ನಲ್ಲಿ ಉಭಯ ತಂಡಗಳಿಂದ ಭರ್ಜರಿ ಮೊತ್ತ ಮೂಡಿಬಂದಿದ್ದರಿಂದ ಈ ಪಂದ್ಯವು  ಡ್ರಾನಲ್ಲಿ ಕೊನೆಗೊಳ್ಳುವ ನಿರೀಕ್ಷೆಯಿತ್ತು. ಅದರಲ್ಲೂ ಎರಡನೇ ಇನಿಂಗ್ಸ್ ಆಡಿದ ಪಾಕಿಸ್ತಾನ್ ತಂಡವು ಪಂದ್ಯವನ್ನು ಗೆಲ್ಲುವ ಅಥವಾ ಡ್ರಾನಲ್ಲಿ ಅಂತ್ಯಗೊಳಿಸುವ ಇರಾದೆಯಲ್ಲಿತ್ತು. ಆದರೆ ಆಂಗ್ಲರ ಸಾಂಘಿಕ ದಾಳಿ ಮುಂದೆ ತತ್ತರಿಸಿದ ಪಾಕ್ ಬ್ಯಾಟರ್​ಗಳು ಸೋಲೊಪ್ಪಿಕೊಳ್ಳಲೇಬೇಕಾಯಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ಆಂಗ್ಲ ಪಡೆಯ ನಾಯಕ ಬೆನ್ ಸ್ಟೋಕ್ಸ್ (Ben Stokes) ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ ಪಾಕ್ ಬೌಲರ್​ಗಳಿಗೆ ಬಾಝ್ ​ಬಾಲ್ ಅಬ್ಬರ ಹೇಗಿರುತ್ತೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಮೊದಲ ಓವರ್​ನಲ್ಲೇ 14 ರನ್​ ಬಾರಿಸುವ ಮೂಲಕ ಭರ್ಜರಿಯಾಗಿ ಇನಿಂಗ್ಸ್ ಆರಂಭಿಸಿದ ಝ್ಯಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಮೊದಲ ವಿಕೆಟ್​ಗೆ 233 ರನ್​ಗಳ ಜೊತೆಯಾಟವಾಡಿದರು. ಅದು ಕೂಡ ಕೇವಲ 35.4 ಓವರ್​ಗಳಲ್ಲಿ ಎಂಬುದು ವಿಶೇಷ. ಈ ಭರ್ಜರಿ ಜೊತೆಯಾಟದಲ್ಲಿ ಝ್ಯಾಕ್​ ಕ್ರಾಲಿ 111 ಎಸೆತಗಳಲ್ಲಿ 21 ಫೋರ್​ನೊಂದಿಗೆ 122 ರನ್ ಬಾರಿಸಿದರು. ಮತ್ತೊಂದೆಡೆ ಬೆನ್ ಡಕೆಟ್ 110 ಎಸೆತಗಳಲ್ಲಿ 15 ಫೋರ್​ನೊಂದಿಗೆ 107 ರನ್​ಗಳ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.

ಇದನ್ನೂ ಓದಿ
IPL 2023: RCB ಈ ನಾಲ್ವರು ಆಟಗಾರರ ಖರೀದಿಗೆ ಮುಂದಾಗಬಹುದು..!
IPL 2023: ಈ ಬಾರಿಯ ಐಪಿಎಲ್​ನಿಂದ 5 ಆಟಗಾರರು ಔಟ್..!
IPL 2023 Mini Auction: ಐಪಿಎಲ್ ಮಿನಿ ಹರಾಜು ಲೀಸ್ಟ್ ಔಟ್: ಯಾವ ದೇಶದಿಂದ ಎಷ್ಟು ಆಟಗಾರರು?
New Record: ಅತ್ಯಧಿಕ ಟೆಸ್ಟ್ ಶತಕ: ಕೊಹ್ಲಿ, ರೂಟ್​ರನ್ನು ಹಿಂದಿಕ್ಕಿದ ಸ್ಟೀವ್ ಸ್ಮಿತ್

ಈ ಹಂತದಲ್ಲಿ ಝಾಹಿದ್ ಮೆಹಮೂದ್ ಎಸೆತದಲ್ಲಿ ಕ್ರಾಲಿ (107) ಔಟಾದರೆ, ಇದರ ಬೆನ್ನಲ್ಲೇ ಹ್ಯಾರಿಸ್ ರೌಫ್ ಎಸೆತದಲ್ಲಿ ಡಕೆಟ್ (122) ಕೂಡ ವಿಕೆಟ್ ಒಪ್ಪಿಸಿದರು. ಈ ವೇಳೆ ಜೊತೆಯಾದ ಒಲಿ ಪೋಪ್ ಹಾಗೂ ಜೋ ರೂಟ್ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದರು. ಆದರೆ 23 ರನ್​ಗಳಿಸಿದ್ದ ರೂಟ್ ಝಾಹಿದ್ ಮೆಹಮೂದ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು.

ಆ ನಂತರ ಶುರುವಾಗಿದ್ದು ಪೋಪ್ ಹಾಗೂ ಹ್ಯಾರಿ ಬ್ರೂಕ್ ಅಬ್ಬರ. ಟೆಸ್ಟ್​ ಕ್ರಿಕೆಟ್​ನಲ್ಲಿ ಏಕದಿನ ಇನಿಂಗ್ಸ್​ ಆಡಿದ ಈ ಜೋಡಿ ಪಾಕಿಸ್ತಾನದ ಪ್ರಮುಖ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ 104 ಎಸೆತಗಳಲ್ಲಿ 14 ಫೋರ್​ನೊಂದಿಗೆ ಒಲಿ ಪೋಪ್ 108 ರನ್ ಬಾರಿಸಿದರು. ಇದೇ ವೇಳೆ ಅಲಿ ಎಸೆತವನ್ನು ಗುರುತಿಸುವಲ್ಲಿ ಎಡವಿದ ಪೋಪ್ ಎಲ್​ಬಿ ಆಗಿ ನಿರ್ಗಮಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರ ಮುಂದುವರೆಸಿದ್ದ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಸೌದ್ ಶಕೀಲ್ ಎಸೆದ 68ನೇ ಓವರ್​ನ 6 ಎಸೆತಗಳಲ್ಲೂ ಭರ್ಜರಿ ಬೌಂಡರಿ ಬಾರಿಸಿದರು.

ಅಷ್ಟೇ ಅಲ್ಲದೆ ಕೇವಲ 80 ಎಸೆತಗಳಲ್ಲಿ 14 ಫೋರ್, 2 ಸಿಕ್ಸ್​ನೊಂದಿಗೆ ಚೊಚ್ಚಲ ಶತಕ ಪೂರೈಸುವ ಮೂಲಕ ಬ್ಯಾಟ್ ಮೇಲೆಕ್ಕೆತ್ತಿದ್ದರು. ಇನ್ನು ಶತಕದ ಬಳಿಕ ಸಿಡಿಲಬ್ಬರ ಮುಂದುವರೆಸಿದ ಬ್ರೂಕ್ ಅಂತಿಮವಾಗಿ 116 ಎಸೆತಗಳಲ್ಲಿ 19 ಫೋರ್​ ಹಾಗೂ 5 ಸಿಕ್ಸ್​ನೊಂದಿಗೆ 153 ರನ್​ ಕಲೆಹಾಕಿ ನಸೀಮ್ ಶಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬ್ರೂಕ್ ವಿಕೆಟ್ ಬೀಳುತ್ತಿದ್ದಂತೆ ಮೇಲುಗೈ ಸಾಧಿಸಿದ ಪಾಕ್ ಬೌಲರ್​ಗಳು ಅಂತಿಮವಾಗಿ ಇಂಗ್ಲೆಂಡ್ ತಂಡವನ್ನು 657 ರನ್​ಗಳಿಗೆ ಆಲೌಟ್ ಮಾಡಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್​ನಲ್ಲಿ ಪಾಕಿಸ್ತಾನದ ಮೂವರು ಬ್ಯಾಟ್ಸ್​ಮನ್​ಗಳು ಶತಕ ಸಿಡಿಸಿ ಭರ್ಜರಿ ಪ್ರದರ್ಶನ ನೀಡಿದ್ದರು.  ಅಬ್ದುಲ್ಲಾ ಶಫೀಕ್ (114 ರನ್​ ),ಇಮಾಮ್ ಉಲ್ ಹಕ್ ( 121) ಹಾಗೂ ಬಾಬರ್ ಆಜಂ- (136) ಶತಕದ ನೆರವಿನಿಂದ ಪಾಕಿಸ್ತಾನ್ ತಂಡವು ಮೊದಲ ಇನಿಂಗ್ಸ್​ನಲ್ಲಿ 579 ರನ್​ ಕಲೆಹಾಕಿತು.

ಇತ್ತ 78 ರನ್​ಗಳ ಮುನ್ನಡೆಯೊಂದಿಗೆ ನಾಲ್ಕನೇ ದಿನಾಟದಲ್ಲಿ ಬ್ಯಾಟ್ ಬೀಸಿದ ಇಂಗ್ಲೆಂಡ್ ತಂಡವು ಕ್ರಾಲಿ (50), ಜೋ ರೂಟ್ (73) ಹಾಗೂ ಹ್ಯಾರಿ ಬ್ರೂಕ್ (87) ಅವರ ಅರ್ಧಶತಕದೊಂದಿಗೆ 35.5 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 264 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು.

342 ರನ್​ಗಳ ಗುರಿಯೊಂದಿಗೆ ನಾಲ್ಕನೇ ದಿನದಾಟದ ಅಂತ್ಯದಲ್ಲಿ ಕೊನೆಯ ಇನಿಂಗ್ಸ್​ ಆರಂಭಿಸಿದ ಪಾಕಿಸ್ತಾನ್ ತಂಡವು ಉತ್ತಮ ಆರಂಭವನ್ನೇ ಪಡೆದಿತ್ತು. 175 ರನ್​ಗಳಿಗೆ ಕೇವಲ 3 ವಿಕೆಟ್ ಕಳೆದುಕೊಂಡು ವಿಜಯದತ್ತ ದಾಪುಗಾಲಿಟ್ಟಿದ್ದ ಪಾಕ್ ಪಡೆಗೆ ಇಂಗ್ಲೆಂಡ್ ಐದನೇ ದಿನದಾಟದಲ್ಲಿ ಆಘಾತ ನೀಡಿದರು. ಪರಿಣಾಮ ಗೆಲ್ಲಲು ಹೊರಟಿದ್ದ ಪಾಕಿಸ್ತಾನ್ ತಂಡವು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಮುಂದಾಯಿತು.

ಆದರೆ ಒಲಿ ರಾಬಿನ್ಸನ್ ಹಾಗೂ ಜೇಮ್ಸ್ ಅ್ಯಂಡರ್ಸನ್​ ದಾಳಿಗೆ ತತ್ತರಿಸಿದ ಪಾಕ್ ತಂಡವು 89 ರನ್​ ಸೇರಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು 268 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಡ್ರಾನಲ್ಲಿ ಅಂತ್ಯವಾಗುವ ಪಂದ್ಯವನ್ನು ಇಂಗ್ಲೆಂಡ್ ತಂಡವು 74 ರನ್​ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತು.

 

ಇಂಗ್ಲೆಂಡ್​ ಪರ ಜೇಮ್ಸ್ ಅ್ಯಂಡರ್ಸನ್ ಹಾಗೂ ಒಲಿ ರಾಬಿನ್ಸನ್ ತಲಾ 4 ವಿಕೆಟ್ ಕಬಳಿಸುವ ಮೂಲಕ ಕೊನೆಯ ದಿನದಾಟದಲ್ಲಿ ಗೆಲುವಿನ ರುವಾರಿ ಎನಿಸಿಕೊಂಡರು.