
ಇಂಗ್ಲೆಂಡ್ ಪ್ರವಾಸದಲ್ಲಿ ಪಾಕಿಸ್ತಾನ (England vs Pakistan) ತಂಡದ ಪ್ರದರ್ಶನ ಅತ್ಯಂತ ನಿರಾಶಾದಾಯಕವಾಗಿದೆ. ಮೂರು ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಪಾಕ್ ತಂಡ ಹೀನಾಯ ಸೋಲನ್ನು ಅನುಭವಿಸಿದೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ತಂಡವನ್ನು ಇನ್ನಿಂಗ್ಸ್‌ನಿಂದ ಮತ್ತು ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 194 ರನ್‌ಗಳಿಂದ ಸೋತಿರುವ ಪಾಕ್ ತಂಡದ ಮೇಲೆ ಟೀಕೆಗಳ ಮಳೆಯೇ ಸುರಿಯುತ್ತಿದೆ. ಆಟಗಾರರಿಂದ ಹಿಡಿದು ತಂಡದ ಕೋಚಿಂಗ್ ಸಿಬ್ಬಂದಿಗಳ ಮೇಲೆ ಮಾಜಿ ಆಟಗಾರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದರ ಪರಿಣಾಮವಾಗಿ ಪಾಕಿಸ್ತಾನ ಟೆಸ್ಟ್ ತಂಡದ ಮುಖ್ಯ ಕೋಚ್ ತಲೆದಂಡವಾಗಿದೆ ಎಂದು ವರದಿಯಾಗಿದೆ.
ಸರಣಿ ಸೋಲುಗಳ ಹಿನ್ನೆಲೆಯಲ್ಲಿ ಪಿಸಿಬಿ ಟೆಸ್ಟ್ ತಂಡದ ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಅವರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಪ್ರಸ್ತುತ ವೈಟ್-ಬಾಲ್ ಸ್ವರೂಪದ ಕೋಚ್ ಆಗಿರುವ ಮೈಕ್ ಹೆಸನ್ ಅವರನ್ನು ಟೆಸ್ಟ್ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಪಿಸಿಬಿ ಕೇಳಿಕೊಂಡಿದೆ ಎಂದು ವರದಿಯಾಗಿದೆ. ಪ್ರಸ್ತುತ ಲಂಡನ್‌ನಲ್ಲಿರುವ ಮೈಕ್ ಹೆಸನ್, ಅಕಿಬ್ ಜಾವೇದ್ ಅವರೊಂದಿಗೆ ಪ್ರಿನ್ಸ್ ಚಾರ್ಲ್ಸ್ ಆಯೋಜಿಸಿದ್ದ ಭೋಜನಕೂಟದಲ್ಲಿ ಭಾಗವಹಿಸಲು ಬಂದಿದ್ದರು. ಈ ಭೇಟಿಯ ಸಮಯದಲ್ಲಿ ಅವರಿಗೆ ಟೆಸ್ಟ್ ತಂಡದ ಜವಾಬ್ದಾರಿಗಳನ್ನು ಹಸ್ತಾಂತರಿಸುವ ಕೆಲಸ ನಡೆದಿದೆ ಎಂದು ವರದಿಯಾಗಿದೆ.
ಮೂರನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 9 ರಿಂದ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯ ಆರಂಭವಾಗುವ ಮೊದಲು ಮೈಕ್ ಹೆಸ್ಸನ್ ಪಾಕಿಸ್ತಾನ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಸರ್ಫರಾಜ್ ಅಹ್ಮದ್ ಅವರ ಅಧಿಕಾರಾವಧಿ ಇಲ್ಲಿಗೆ ಅಂತ್ಯವಾಗಿದೆ ಎಂಬುದು ಕ್ರೀಡಾ ವಿಶ್ಲೇಷಕರ ಅಭಿಪ್ರಾಯವಾಗಿದೆ. ಎಲ್ಲವೂ ಯೋಜಿಸಿದಂತೆ ನಡೆದರೆ, ಮೈಕ್ ಹೆಸ್ಸನ್ ಮೂರು ಸ್ವರೂಪಗಳಲ್ಲಿ ಮುಖ್ಯ ಕೋಚ್ ಜವಾಬ್ದಾರಿ ಹೋರುವ ಸಾಧ್ಯತೆಯಿದೆ.
ಆಂಗ್ಲರ ವೇಗಕ್ಕೆ ಹೆದರಿ ಗಾಯದ ನಾಟಕವಾಡಿದ್ದ ಇಮಾಮ್ ವಿರುದ್ಧ ತನಿಖೆಗಿಳಿದ ಪಿಸಿಬಿ
ಈ ವರ್ಷದ ಏಪ್ರಿಲ್ 18 ರಂದು ಬಾಂಗ್ಲಾದೇಶ ವಿರುದ್ಧದ ಸರಣಿಗೆ ಮುಂಚಿತವಾಗಿ ಸರ್ಫರಾಜ್ ಅಹ್ಮದ್ ಅವರನ್ನು ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಆದಾಗ್ಯೂ, ಅವರ ಉಸ್ತುವಾರಿಯಲ್ಲಿ ಪಾಕಿಸ್ತಾನದ ಪ್ರದರ್ಶನವು ತುಂಬಾ ಕಳಪೆಯಾಗಿದೆ. ಮೊದಲ ಸರಣಿಯಲ್ಲೇ ಬಾಂಗ್ಲಾದೇಶ ತಂಡವು ಪಾಕ್ ತಂಡವನ್ನು ಅವರ ಸ್ವಂತ ನೆಲದಲ್ಲಿಯೇ ವೈಟ್‌ವಾಶ್ ಮಾಡಿತ್ತು. ನಂತರ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಡ್ರಾ ಮಾಡಿಕೊಂಡಿತು. ಇದೀಗ, ಇಂಗ್ಲೆಂಡ್ ಪ್ರವಾಸದಲ್ಲಿ ಮತ್ತೊಂದು ವೈಟ್‌ವಾಶ್ ಆತಂಕದಲ್ಲಿ ತಂಡವಿದೆ. ಹೀಗಾಗಿ ಪಿಸಿಬಿ ಸರ್ಫರಾಜ್ ಅಹ್ಮದ್ ಅವರನ್ನು ವಜಾಗೊಳಿಸಬೇಕು ಎಂಬ ತೀರ್ಮಾನಕ್ಕೆ ಬಂದಿದೆ.
Published On - 8:03 pm, Mon, 31 August 26