‘ರನ್ ಗಳಿಸುತ್ತಿದ್ದೇನೆ, ತೂಕ ಕಡಿಮೆ ಮಾಡಿಕೊಂಡಿದ್ದೇನೆ.. ಆದರೆ ಅವಕಾಶ ಸಿಗುತ್ತಿಲ್ಲ’; ಪೃಥ್ವಿ ಶಾ ಅಸಮಾದಾನ
Prithvi Shaw: ನಾನು ನನ್ನ ಬ್ಯಾಟಿಂಗ್‌ನಲ್ಲಿ ಹೆಚ್ಚು ವಿಭಿನ್ನವಾಗಿ ಏನನ್ನು ಮಾಡಲು ಹೋಗಿಲ್ಲ, ಆದರೆ ಸಾಕಷ್ಟು ಫಿಟ್‌ನೆಸ್ ಕೆಲಸ ಮಾಡಿದ್ದೇನೆ. ಕಳೆದ ಐಪಿಎಲ್ ನಂತರ ನಾನು ತೂಕ ಇಳಿಸುವ ಕೆಲಸ ಮಾಡಿದ್ದು, ಏಳರಿಂದ ಎಂಟು ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೇನೆ.
ಟಿ20 ವಿಶ್ವಕಪ್ಗಾಗಿ ರೋಹಿತ್ ನೇತೃತ್ವದಲ್ಲಿ ಟೀಂ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಕ್ಕೆ ತೆರಳಿದ್ದು, ಧವನ್ ನೇತೃತ್ವದ ಬಿ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ. ಶಿಖರ್ ಧವನ್ (Shikhar Dhawan) ನೇತೃತ್ವದ ತಂಡದಲ್ಲಿ ಭಾಗಶಃ ಯುವ ಆಟಗಾರರೆ ತುಂಬಿಹೋಗಿದ್ದಾರೆ. ಅವರುಗಳಲ್ಲಿ ಶುಭಮನ್ ಗಿಲ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ರಜತ್ ಪಾಟಿದಾರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಅವೇಶ್ ಖಾನ್, ಕುಲ್ದೀಪ್ ಯಾದವ್ ಮತ್ತು ರವಿ ಬಿಷ್ಣೋಯ್ ಕೂಡ ಸೇರಿದ್ದಾರೆ. ಆದರೆ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿದಾಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದ ವಿಚಾರವೆಂದರೆ ದೇಶೀ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪೃಥ್ವಿ ಶಾ (Prithivi Shaw) ಹಾಗೂ ಸರ್ಫರಾಜ್ ಖಾನ್ ತಂಡದಲ್ಲಿ ಇಲ್ಲ ಎಂಬುದು.
ಕಳೆದ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಸ್ಥಿರ ಪ್ರದರ್ಶನ ನೀಡಿದ್ದ ಪೃಥ್ವಿ ಶಾ, ಇತ್ತೀಚೆಗೆ ಮುಗಿದ ನ್ಯೂಜಿಲೆಂಡ್ ‘ಎ’ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ 77 ರನ್ಗಳ ಇನ್ನಿಂಗ್ಸ್ ಆಡಿದ್ದರು. ಹೀಗಾಗಿ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಪೃಥ್ವಿ ಆಯ್ಕೆಯಾಗುತ್ತಾರೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಬಿಸಿಸಿಐ ಅನುಭವಿ ಪೃಥ್ವಿಯನ್ನು ತಂಡದಿಂದ ಕೈಬಿಟ್ಟು ಯುವ ಆರಂಭಿಕ ಆಟಗಾರ ರುತುರಾಜ್ಗೆ ಮಣೆಹಾಕಿತ್ತು. ಆದರೆ ತಂಡದಲ್ಲಿ ಸ್ಥಾನ ಪಡೆದ ರುತುರಾಜ್ ಮೊದಲ ಏಕದಿನ ಪಂದ್ಯದಲ್ಲಿ ಹೇಳಿಕೊಳ್ಳುವ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು.
ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಾ ತಂಡದಲ್ಲಿ ಆಯ್ಕೆಯಾಗದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು, ನನಗೆ ಸಾಕಷ್ಟು ನಿರಾಶೆಯಾಗಿದೆ. ನಾನು ರನ್ ಗಳಿಸುತ್ತಿದ್ದೇನೆ, ಜೊತೆಗೆ ಸಾಕಷ್ಟು ಕಠಿಣ ಪರಿಶ್ರಮ ಹಾಕುತ್ತಿದ್ದೇನೆ, ಆದರೂ ಸಹ ನನಗೆ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಶಾ ತಮ್ಮ ಅಸಮಾದಾನವನ್ನು ಹೊರಹಾಕಿದ್ದಾರೆ.
“ಆದರೆ, ಪರವಾಗಿಲ್ಲ. ರಾಷ್ಟ್ರೀಯ ಆಯ್ಕೆದಾರರು ನಾನು ಸಿದ್ಧ ಎಂದು ಭಾವಿಸಿದಾಗ ನನ್ನನ್ನು ತಂಡಕ್ಕೆ ಆಯ್ಕೆ ಮಾಡುತ್ತಾರೆ. ನನಗೆ ಯಾವುದೇ ಅವಕಾಶಗಳು ಸಿಗಲಿ, ಅದು ಭಾರತ ‘ಎ’ ಅಥವಾ ಇತರ ತಂಡಗಳಿಗೆ ಇರಲಿ, ನಾನು ನನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತೇನೆ. ಜೊತೆಗೆ ನನ್ನ ಫಿಟ್‌ನೆಸ್ ಮಟ್ಟವನ್ನು ಸಹ ಉತ್ತಮ ಪಡಿಸಿಕೊಳ್ಳುತ್ತೇನೆ ಎಂದು ಪೃಥ್ವಿ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಐಪಿಎಲ್ ಮುಗಿದ ಬಳಿಕ ತಮ್ಮ ತೂಕದಲ್ಲಿ 7-8 ಕೆಜಿ ಕಡಿಮೆ ಮಾಡಿಕೊಂಡಿರುವುದರ ಬಗ್ಗೆ ಮಾತನಾಡಿರುವ ಪೃಥ್ವಿ ತಮ್ಮ ಆಹಾರಕ್ರಮದಲ್ಲಿಯೂ ಕೆಲವೊಂದು ಬದಲಾವಣೆ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
“ನಾನು ನನ್ನ ಬ್ಯಾಟಿಂಗ್‌ನಲ್ಲಿ ಹೆಚ್ಚು ವಿಭಿನ್ನವಾಗಿ ಏನನ್ನು ಮಾಡಲು ಹೋಗಿಲ್ಲ, ಆದರೆ ಸಾಕಷ್ಟು ಫಿಟ್‌ನೆಸ್ ಕೆಲಸ ಮಾಡಿದ್ದೇನೆ. ಕಳೆದ ಐಪಿಎಲ್ ನಂತರ ನಾನು ತೂಕ ಇಳಿಸುವ ಕೆಲಸ ಮಾಡಿದ್ದು, ಏಳರಿಂದ ಎಂಟು ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೇನೆ. ನಾನು ಜಿಮ್‌ನಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ. ಅಲ್ಲದೆ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಿಕೊಂಡಿದ್ದು, ಯಾವುದೇ ಸಿಹಿತಿಂಡಿಗಳು ಮತ್ತು ತಂಪು ಪಾನೀಯಗಳನ್ನು ಸೇವಿಸುತ್ತಿಲ್ಲ. ಜೊತೆಗೆ ಚೈನೀಸ್ ಫುಡ್ ಕೂಡ ಈಗ ನನ್ನ ಮೆನುವಿನಿಂದ ಸಂಪೂರ್ಣವಾಗಿ ಹೊರಗಿದೆ ಎಂದು ಪೃಥ್ವಿ ಹೇಳಿಕೊಂಡಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪೃಥ್ವಿ
ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಅಹಮದಾಬಾದ್‌ನಲ್ಲಿರುವ ಪೃಥ್ವಿ ಈ ಬಗ್ಗೆ ಮಾತನಾಡಿದ್ದು, ನಾವು ಇಲ್ಲಿ ಕೆಲವು ಅಭ್ಯಾಸ ಪಂದ್ಯಗಳನ್ನು ಆಡಿದ್ದೇವೆ. ಎಲ್ಲಾ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ. ನಮ್ಮಲ್ಲಿ ಉತ್ತಮ ಆಲ್‌ರೌಂಡರ್‌ಗಳು, ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿದ್ದಾರೆ. ಇದು ತುಂಬಾ ಬಲಿಷ್ಠ ತಂಡ ಎಂದು ನಾನು ನಂಬುತ್ತೇನೆ. ಎಲ್ಲಾ ಸಹಾಯಕ ಸಿಬ್ಬಂದಿ ಸದಸ್ಯರು ನಮ್ಮ ತಯಾರಿಯಲ್ಲಿ ಶ್ರಮಿಸುತ್ತಿದ್ದಾರೆ ಮತ್ತು ನಾನು ತಂಡವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ಆಶಾವಾದವನ್ನು ಹೊಂದಿದ್ದೇನೆ ಎಂದು ಪೃಥ್ವಿ ಮುಂದಿನ ತಯಾರಿಯ ಬಗ್ಗೆ ಮಾತನಾಡಿದ್ದಾರೆ.
Published On - 7:52 pm, Sat, 8 October 22