ಪೂಜಾರಾ ಮತ್ತು ರಹಾನೆ ಸ್ಪರ್ಶ ಕಂಡುಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ, ನಾವು ತಾಳ್ಮೆ ಕಳೆದುಕೊಳ್ಳಬಾರದು: ವಿಕ್ರಮ್ ರಾಠೋಡ್
ಪೂಜಾರಾ ಮತ್ತು ರಹಾನೆ ಅವರ ಫಾರ್ಮ್ ಟೀಮ್ ಮ್ಯಾನೇಜ್ಮೆಂಟ್ ಅನ್ನು ಚಿಂತೆಗೀಡು ಮಾಡಿದೆ. ಹಾಗಂತ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ನಿರಾಶೆಯನ್ನು ವ್ಯಕ್ತಪಡಿಸುತ್ತಿಲ್ಲ.
ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ ಪೂಜರಾ ಕಳಪೆ ಫಾರ್ಮ್ ದಕ್ಷಿಣ ಆಫ್ರಿಕಾ ಪ್ರವಾಸನಲ್ಲೂ ಮುಂದುವರಿದಿದೆ. ಈಗ ಜಾರಿಯಲ್ಲಿರುವ ಮೊದಲ ಟೆಸ್ಟ್ ನಲ್ಲಿ ಕೊಹ್ಲಿ (34, 18), ರಹಾನೆ (48, 20) ಮತ್ತು ಪೂಜಾರಾ (0,16) ರನ್ ಗಳಿಸಿದರು. ಸತತವಾಗಿ ಎರಡನೇ ವರ್ಷವನ್ನೂ ಕಿಂಗ್ ಕೊಹ್ಲಿ ಅಂತರರಾಷ್ಟ್ರೀಯ ಶತಕವಿಲ್ಲದೆ ಪೂರ್ಣಗೊಳಿಸಿದರು. ಅವರು ಶತಕ ಬಾರಿಸುತ್ತಿಲ್ಲ ಎನ್ನುವ ವ್ಯಥೆಯನ್ನು ಬಿಟ್ಟರೆ, ತೀರ ಕಳಪೆಯಾಗೇನೂ ಆಡುತ್ತಿಲ್ಲ. ಆದರೆ, ಪೂಜಾರಾ ಮತ್ತು ರಹಾನೆ ಅವರ ಫಾರ್ಮ್ ಟೀಮ್ ಮ್ಯಾನೇಜ್ಮೆಂಟ್ ಅನ್ನು ಚಿಂತೆಗೀಡು ಮಾಡಿದೆ. ಹಾಗಂತ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ನಿರಾಶೆಯನ್ನು ವ್ಯಕ್ತಪಡಿಸುತ್ತಿಲ್ಲ. ‘ಪೂಜಾರಾ ಮತ್ತು ರಹಾನೆಯ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ ಇಬ್ಬರೂ ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ರಹಾನೆ ಉತ್ತಮ ಸ್ಪರ್ಶದಲ್ಲಿದ್ದರು, ಆದರೆ ದುರಾದೃಷ್ಟಶಾತ್ ಔಟ್ ಆದರು. ಪೂಜಾರಾ ಅವರದ್ದು ಸಹ ಅದೇ ಕತೆ.’ ಎಂದು ಸೆಂಚೂರಿಯನ್ ನಲ್ಲಿ ನಾಲ್ಕನೇ ದಿನದಾಟದ ನಂತರ ವಿಕ್ರಮ್ ಹೇಳಿದರು.
‘ಪೂಜಾರಾ ಅವರು ಭಾರತಕ್ಕಾಗಿ ಕೆಲವು ಮಹತ್ವದ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಆದರೆ ನಿಮಗೆ ಗೊತ್ತಿದೆ, ಇಲ್ಲಿ ಪಿಚ್ಗಳಲ್ಲಿ ರನ್ ಗಳಿಸುವುದು ಕಷ್ಟ. ಅತಿರಥರು ಸಹ ಇಲ್ಲಿ ರನ್ ಗಳಿಸಲು ಹೆಣಗಾಡಿದ್ದಾರೆ. ಪೂಜಾರಾ ಮತ್ತು ರಹಾನೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ ನಾವೆಲ್ಲ ತಾಳ್ಮೆಯಿಂದರಬೇಕಿದೆ. ನಮಗೆ ನಿರಾಶೆಯೇನೂ ಆಗಿಲ್ಲ’ ಎಂದು ವಿಕ್ರಮ್ ಹೇಳಿದರು.
ಸೆಂಚೂರಿಯನ್ನಿನ ಸೂಪರ್ ಸ್ಪೋರ್ಟ್ ಪಾರ್ಕ್ನಲ್ಲಿ ಪಂದ್ಯದ ಕೊನೆಯ ದಿನವಾಗಿರುವ ಗುರುವಾರ ಭಾರತ ಗೆಲ್ಲಲು 6 ವಿಕೆಟ್ ಕಿತ್ತಬೇಕಿದೆ. ಭಾರತದ ಎರಡನೇ ಇನ್ನಿಂಗ್ಸ್ ಕೊನೆಗೊಂಡ ನಂತರ ನಡೆದ 40 ಓವರ್ಗಳ ಆಟದಲ್ಲಿ ಅತಿಥೇಯರು 4 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿದರು. ಭಾರತದ ಗೆಲ್ಲಬೇಕಾದರೆ ಬೌಲರ್ಗಳು ಬುಧವಾರ ಪ್ರದರ್ಶಿಸಿದ ಶಿಸ್ತಿನ ದಾಳಿಯನ್ನು ಮುಂದುವರಿಸಬೇಕು ಎಂದು ಬ್ಯಾಟಿಂಗ್ ಕೋಚ್ ಹೇಳಿದರು.
‘ಟೆಸ್ಟ್ ಕ್ರಿಕೆಟ್ ನಲ್ಲಿ ಯಾವುದೂ ಸುಲಭವಲ್ಲ. ನಾವು ಉತ್ತಮವಾಗಿ ಬೌಲ್ ಮಾಡಲೇ ಬೇಕು. ಎರಡನೇ ಇನ್ನಿಂಗ್ಸ್ ನಲ್ಲೂ ನಮ್ಮ ಬೌಲರ್ ಗಳು ಚೆನ್ನಾಗಿ ದಾಳಿ ನಡೆಸಿದ್ದಾರೆ. ಅದೇ ಲೈನ್ ಮತ್ತು ಲೆಂಗ್ತ್ ಅಂತಿಮ ದಿನವೂ ಕಾಯ್ದುಕೊಳ್ಳಬೇಕಾದ ಅವಶ್ಯಕತೆಯಿದೆ. ಹಾಗಾದಲ್ಲಿ ಮಾತ್ರ ನಮಗೆ ಗೆಲ್ಲುವ ಅವಕಾಶವಿದೆ,’ಎಂದು ವಿಕ್ರಮ್ ಹೇಳಿದರು.
52 ರನ್ ಗಳಿಸಿ ಆಡುತ್ತಿರುವ ಅತಿಥೇಯ ತಂಡದ ನಾಯಕ ಡೀನ್ ಎಲ್ಗರ್ ಭಾರತಕ್ಕೆ ಸವಾಲಾಗುವ ನಿರೀಕ್ಷೆಯಿದೆ. ದಕ್ಷಿಣ ಆಫ್ರಿಕಾಗೆ ಗೆಲ್ಲಲು ಇನ್ನೂ 211 ರನ್ ಬೇಕಿದೆ.
ಇದನ್ನೂ ಓದಿ: IND vs SA: ಆಫ್ರಿಕಾಗೆ 305 ರನ್ ಗುರಿ; ಸೆಂಚುರಿಯನ್ ಪಿಚ್ನಲ್ಲಿ ಈ ಗುರಿ ಬೆನ್ನತ್ತುವುದು ಅಸಾಧ್ಯ ಎನ್ನುತ್ತಿದೆ ಇತಿಹಾಸ!