ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ (Syed Mushtaq Ali Trophy) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 9 ರನ್ಗಳಿಂದ ಮಣಿಸಿದ ಪಂಜಾಬ್ ತಂಡ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ. ಪಂಜಾಬ್ ಪರ ಅಬ್ಬರಿಸಿದ ಶುಭಮನ್ ಗಿಲ್ (Shubman Gill) ಕೇವಲ 55 ಎಸೆತಗಳಲ್ಲಿ 11 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 126 ರನ್ ಚಚ್ಚಿದರು. ಗಿಲ್ ಅಬ್ಬರದ ಶತಕದ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 225 ರನ್‌ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಟಾಪ್ ಆರ್ಡರ್ ವೈಫಲ್ಯದಿಂದಾಗಿ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 216 ರನ್ ಗಳಿಸಲಷ್ಟೇ ಶಕ್ತವಾಗಿ 9 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕದ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕ ಆಯ್ಕೆಯನ್ನು ಆರಂಭದಲ್ಲಿ ಬೆಂಬಲಿಸಿದ ಕರ್ನಾಟಕ ಬೌಲರ್ಗಳು ಪಂಜಾಬ್ ತಂಡ 10 ರನ್ಗಳಿಸುವಷ್ಟರಲ್ಲೇ 2 ವಿಕೆಟ್ ಉರುಳಿಸಿದರು. ಆದರೆ ಆ ಬಳಿಕ ಜೊತೆಯಾದ ಗಿಲ್ ಹಾಗೂ ಅನ್ಮೋಲ್ಪ್ರೀತ್ ಸಿಂಗ್ 3ನೇ ವಿಕೆಟ್ಗೆ ತಂಡದ ಮೊತ್ತವನ್ನು 161 ರನ್ಗಳಿಗೆ ಕೊಂಡೊಯ್ದರು. ಈ ವೇಳೆ ಗಿಲ್ ಅಬ್ಬರದ ಶತಕ ಸಿಡಿಸಿ ಮಿಂಚಿದರೆ, ಅನ್ಮೋಲ್ಪ್ರೀತ್ ಸಿಂಗ್ 59 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇನ್ನುಳಿದಂತೆ ಕೊನೆಯಲ್ಲಿ ಸನ್ವೀರ್ ಸಿಂಗ್ 13 ಎಸೆತಗಳಲ್ಲಿ 27 ರನ್ ಬಾರಿಸಿ ತಂಡವನ್ನು 225 ರನ್ಗಳಿಗೆ ಕೊಂಡೊಯ್ದರು.
ಗಿಲ್ ಬಿರುಸಿನ ಶತಕ
ಈ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ಗಿಲ್, 88 ನಿಮಿಷಗಳ ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 55 ಎಸೆತಗಳನ್ನು ಎದುರಿಸಿ ಬರೋಬ್ಬರಿ 126 ರನ್ ಗಳಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 11 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಒಳಗೊಂಡಂತೆ 229.09 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಗಿಲ್, ಕೇವಲ ಬೌಂಡರಿಗಳಿಂದಲೇ 98 ರನ್ ಕಲೆಹಾಕಿದರು.
ಇದನ್ನೂ ಓದಿ: ಒಂದು ಟಿ20 ಪಂದ್ಯದಲ್ಲಿ ಬರೋಬ್ಬರಿ 36 ಸಿಕ್ಸರ್, 501 ರನ್..! ವಿಶ್ವದಾಖಲೆ ಪುಡಿಪುಡಿ
25 ಎಸೆತಗಳಲ್ಲಿ 76 ರನ್
ಆರಂಭದಲ್ಲಿ ನಿದಾನಗತಿಯ ಬ್ಯಾಟಿಂಗ್ಗೆ ಮುಂದಾದ ಶುಭಮನ್ ಗಿಲ್ 30 ಎಸೆತಗಳಲ್ಲಿ ಮೊದಲ 50 ರನ್‌ಗಳ ಸ್ಕ್ರಿಪ್ಟ್ ಬರೆದರು. ಆದರೆ ಅವರು ಮುಂದಿನ 76 ರನ್‌ಗಳನ್ನು ಕೇವಲ 25 ಎಸೆತಗಳಲ್ಲಿ ಗಳಿಸಿದರು.
ಕರ್ನಾಟಕದ ಕಳಪೆ ಆರಂಭ
225 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಕರ್ನಾಟಕ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ರೋಹನ್ ಪಾಟೀಲ್ ಒಂದಂಕ್ಕಿಗೆ ಸುಸ್ತಾದರು. 2 ರನ್ ಗಳಿಸಿದ್ದ ರೋಹನ್ 2ನೇ ಓವರ್ನಲ್ಲೇ ತಮ್ಮ ವಿಕೆಟ್ ಒಪ್ಪಿಸಿದರೆ, ಅದೇ ಓವರ್ನಲ್ಲಿ ನಾಯಕ ಮಯಾಂಕ್ ಕೂಡ 8 ರನ್ಗಳಿಗೆ ಔಟಾದರು. 3ನೇ ಕ್ರಮಾಂಕದಲ್ಲಿ ಬಂದ ಲುವ್ನಿತ್ ಸಿಸೋಡಿಯಾ ಕೂಡ 6 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ಆರಂಭಿಕ 3 ವಿಕೆಟ್ಗಳು ಕೇವಲ 18 ರನ್ಗಳಿಗೆ ಉರುಳಿದರಿಂದ ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕಕ್ಕೆ ಮಧ್ಯಮ ಕ್ರಮಾಂಕ ಆಸರೆಯಾಯಿತು. ಚೇತನ್ ಹಾಗೂ ಮನೀಶ್ ಪಾಂಡೆ ತಂಡದ ಮೊತ್ತವನ್ನು 80 ರ ಗಡಿದಾಟಿಸಿದರು. ಈ ಹಂತದಲ್ಲಿ 45 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಮನೀಶ್ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಚೇತನ್ ಕೂಡ 33 ರನ್ಗಳಿಗೆ ಔಟಾದರು.
ಮನೋಹರ್ ಅರ್ಧಶತಕ
ಕರ್ನಾಟಕ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಅಭಿನವ್ ಮನೋಹರ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 62 ರನ್ ಚಚ್ಚಿದರು. ಮನೋಹರ್ಗೆ ಸಾಥ್ ನೀಡಿದ ಮನೋಜ್ ಕೂಡ 9 ಎಸೆತಗಳಲ್ಲಿ 25 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 14 ಎಸೆತಗಳಲ್ಲಿ 30 ರನ್ ಬಾರಿಸಿದ ಗೌತಮ್ ಹಾಗೂ ಅರ್ಧಶತಕ ಸಿಡಿಸಿದ ಮನೋಹರ್ ಅಜೇಯರಾಗಿ ಉಳಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Tue, 1 November 22