IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ 13ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡ ಭರ್ಜರಿ ಜಯ ಸಾಧಿಸಿದೆ. ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಪಡೆಯ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿದ್ದರು.
172 ರನ್ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಪ್ರಭ್ಸಿಮ್ರಾನ್ ಸಿಂಗ್ 69 ರನ್ ಬಾರಿಸಿದರೆ, ನಾಯಕ ಶ್ರೇಯಸ್ ಅಯ್ಯರ್ ಅಜೇಯ 52 ರನ್ ಸಿಡಿಸಿದರು. ಈ ಮೂಲಕ ಕೇವಲ 16.2 ಓವರ್ಗಳಲ್ಲಿ 177 ರನ್ ಬಾರಿಸಿ ಪಂಜಾಬ್ ಕಿಂಗ್ಸ್ ತಂಡವು 8 ವಿಕೆಟ್ಗಳ ಜಯ ಸಾಧಿಸಿದೆ.
ಈ ಗೆಲುವಿನ ಬೆನ್ನಲ್ಲೇ ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಅವರನ್ನು ಟ್ರೋಲ್ ಮಾಡಿರುವುದು ವಿಶೇಷ. ಸೋಷಿಯಲ್ ಮೀಡಿಯಾದಲ್ಲಿ, ನಮ್ಮ ಟೆನ್ಷನ್ ಐಪಿಎಲ್ ಹರಾಜಿನಲ್ಲಿಯೇ ಕೊನೆಗೊಂಡಿತ್ತು ಎನ್ನುವ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪಂಜಾಬ್ ಕಿಂಗ್ಸ್ ಅಡ್ಮಿನ್ ಪಂತ್ ಅವರ ಕಾಲೆಳೆದಿದ್ದಾರೆ.
ಇಂತಹದೊಂದು ಪೋಸ್ಟ್ ಹಂಚಿಕೊಳ್ಳಲು ಮುಖ್ಯ ಕಾರಣ ಈ ಹಿಂದೆ ರಿಷಭ್ ಪಂತ್ ನೀಡಿರುವ ಹೇಳಿಕೆ. ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಖರೀದಿಸಿದ್ದರು.
ಇದನ್ನೂ ಓದಿ: IPL 2025: ಬ್ಯಾನ್ ಬ್ಯಾನ್ ಬ್ಯಾನ್… ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ
27 ಕೋಟಿ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದ ಪಂತ್ ಸಂದರ್ಶನವೊಂದರಲ್ಲಿ, ಐಪಿಎಲ್ ಹರಾಜಿನಲ್ಲಿ ನನಗೆ ಒಂದೇ ಒಂದು ಟೆನ್ಷನ್ ಇತ್ತು. ಅದು ಪಂಜಾಬ್ ಎಂದು ನಗಾಡಿದ್ದರು. ಅಂದರೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ನನ್ನನ್ನು ಖರೀದಿಸುತ್ತಾರೆ ಎಂಬ ಭಯ ನನ್ನಲ್ಲಿತ್ತು ರಿಷಭ್ ಪಂತ್ ಹೇಳಿದ್ದರು.
𝐓𝐞𝐧𝐬𝐢𝐨𝐧 toh auction mein hi khatam ho gayi thi! 😉 pic.twitter.com/TnWcg5MxdM
— Punjab Kings (@PunjabKingsIPL) April 1, 2025
ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಅವರ ತವರಿನಲ್ಲೇ ಮಣಿಸಿ ಪಂಜಾಬ್ ಕಿಂಗ್ಸ್ ಮೇಲುಗೈ ಸಾಧಿಸಿದೆ. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಅವರ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ನಮ್ಮ ಟೆನ್ಷನ್ ಐಪಿಎಲ್ ಹರಾಜಿನಲ್ಲಿಯೇ ಕೊನೆಗೊಂಡಿತ್ತು ಎಂದು ಪಂಜಾಬ್ ಕಿಂಗ್ಸ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾದ ಬಳಿಕ ರಿಷಭ್ ಪಂತ್ ನೀಡಿದ್ದ ಹೇಳಿಕೆಗೆ ಪಂಜಾಬ್ ಕಿಂಗ್ಸ್ ಟ್ರೋಲ್ ಮೂಲಕ ಉತ್ತರ ನೀಡಿದ್ದಾರೆ.