ಐಪಿಎಲ್ನಲ್ಲಿ ಸಿಕ್ಕಿಲ್ಲ ಚಾನ್ಸ್: ಇದೀಗ ಸ್ಪೋಟಕ ಶತಕ ಸಿಡಿಸಿ ಮಿಂಚಿದ ಯುವ ಬ್ಯಾಟ್ಸ್ಮನ್..!
Rahmanullah Gurbaz: ಗುರ್ಬಾಜ್ ಅವರ ಈ ಭರ್ಜರಿ ಬ್ಯಾಟಿಂಗ್ನಲ್ಲಿ 10 ಸಿಕ್ಸರ್ ಹಾಗೂ 7 ಬೌಂಡರಿಗಳು ಮೂಡಿಬಂದಿತ್ತು. ಅಂದರೆ ಕೇವಲ ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ 88 ರನ್ ಗಳಿಸಿದ್ದರು.

ಐಪಿಎಲ್ 2022 ರಲ್ಲಿ ಇಡೀ ಸೀಸನ್ ಬೆಂಚ್ ಕಾದ ಆಟಗಾರರಲ್ಲಿ ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ (Rahmanullah Gurbaz) ಕೂಡ ಒಬ್ಬರು. ಗುಜರಾತ್ ಟೈಟಾನ್ಸ್ ತಂಡದಿಂದ ಜೇಸನ್ ರಾಯ್ ಹೊರಗುಳಿದ ಕಾರಣ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಗುರ್ಬಾಜ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈ ಯುವ ಆಟಗಾರನಿಗೆ ಒಂದೇ ಒಂದು ಅವಕಾಶ ನೀಡಿರಲಿಲ್ಲ. ಆದರೀಗ ಸ್ಪೋಟಕ ಶತಕದೊಂದಿಗೆ ತಾನೆಂತಹ ಬ್ಯಾಟ್ಸ್ಮನ್ ಎಂಬುದನ್ನು ರಹಮಾನುಲ್ಲಾ ಗುರ್ಬಾಜ್ ನಿರೂಪಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಶಪಗಿಜಾ ಕ್ರಿಕೆಟ್ ಲೀಗ್‌ನಲ್ಲಿ ನಡೆದ ಹಿಂದೂಕುಶ್ ಸ್ಟಾರ್ಸ್ ಹಾಗೂ ಕಾಬೂಲ್ ಈಗಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಈಗಲ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡ ಗುರ್ಬಾಜ್ ಟಾಸ್ ಸೋತಿದ್ದರು. ಅತ್ತ ಮೊದಲು ಬ್ಯಾಟ್ ಮಾಡಿದ ಹಿಂದೂಕುಶ್ ಸ್ಟಾರ್ಸ್ 20 ಓವರ್ಗಳಲ್ಲಿ 182 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕಾಬೂಲ್ ಈಗಲ್ಸ್ ಪರ ನಾಯಕ ಗುರ್ಬಾಜ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಗುರ್ಬಾಜ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆ 5 ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಬಾರಿಸಿದ್ದರು. ಅರ್ಧಶತಕದ ಬಳಿಕ ತಮ್ಮ ಸ್ಪೋಟಕ ಬ್ಯಾಟಿಂಗ್ ಅನ್ನು ಮುಂದುವರೆಸಿದರು. ಇದರ ಫಲವಾಗಿ ಕೇವಲ 40 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಮೂಡಿಬಂತು. ಅಲ್ಲದೆ ಕೇವಲ 48 ಎಸೆತಗಳಲ್ಲಿ ಅಜೇಯ 121 ರನ್ ಬಾರಿಸುವ ಮೂಲಕ 13.5 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು.
ಗುರ್ಬಾಜ್ ಅವರ ಈ ಭರ್ಜರಿ ಬ್ಯಾಟಿಂಗ್ನಲ್ಲಿ 10 ಸಿಕ್ಸರ್ ಹಾಗೂ 7 ಬೌಂಡರಿಗಳು ಮೂಡಿಬಂದಿತ್ತು. ಅಂದರೆ ಕೇವಲ ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ 88 ರನ್ ಗಳಿಸಿದ್ದರು. ಇದರೊಂದಿಗೆ ಅಫ್ಘಾನಿಸ್ತಾನದಲ್ಲಿ ಟಿ20 ಲೀಗ್‌ನಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿದ ದಾಖಲೆಯನ್ನು ಗುರ್ಬಾಜ್ ತಮ್ಮದಾಗಿಸಿಕೊಂಡರು. ಈ ಹಿಂದೆ 2019 ರಲ್ಲಿ ಕಾಬೂಲ್ ಈಗಲ್ಸ್ ಪರ ಕರೀಮ್ ಜನ್ನತ್ತ್ 120 ರನ್ ಗಳಿಸಿದ್ದು ದಾಖಲೆಯಾಗಿತ್ತು. ಇದೀಗ ಕೇವಲ 48 ಎಸೆತಗಳಲ್ಲಿ 121 ರನ್ ಬಾರಿಸುವ ಮೂಲಕ ರಹಮಾನುಲ್ಲಾ ಗುರ್ಬಾಜ್ ಹೊಸ ದಾಖಲೆ ನಿರ್ಮಿಸಿದ್ದಾರೆ.




