Rahul Dravid: ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗೋದು ಬಹುತೇಕ ಖಚಿತ

| Updated By: ಝಾಹಿರ್ ಯೂಸುಫ್

Updated on: Oct 26, 2021 | 5:52 PM

Team India Coach: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಾಹುಲ್ ದ್ರಾವಿಡ್ ಅವರ ಮನವೊಲಿಸಲು ಯಶಸ್ವಿಯಾಗಿದ್ದು, ಅದರಂತೆ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

Rahul Dravid: ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗೋದು ಬಹುತೇಕ ಖಚಿತ
Rahul Dravid
Follow us on

ಟೀಮ್ ಇಂಡಿಯಾ (Team India) ಕೋಚ್ ಹುದ್ದೆಗೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ (Rahul Dravid) ಅರ್ಜಿ ಸಲ್ಲಿಸಲಿದ್ದಾರೆ. ಇದರೊಂದಿಗೆ ಭಾರತ ತಂಡದ ಮುಂದಿನ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ (Ravi Shastri) ಅವರ ಕಾರ್ಯಾವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ಹೊಸ ಕೋಚ್ ಹುದ್ದೆಗಾಗಿ ಇತ್ತೀಚೆಗಷ್ಟೇ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಇದರ ಬೆನ್ನಲ್ಲೇ ದ್ರಾವಿಡ್ ಅವರು ಮುಂದಿನ ಕೋಚ್ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಇದಾಗ್ಯೂ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ದ್ರಾವಿಡ್ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿರಲಿಲ್ಲ.

ಆದರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದ ಅಕ್ಟೋಬರ್ 26 ರಂದು ಮುಖ್ಯ ಕೋಚ್ ಹುದ್ದೆಗೆ ದ್ರಾವಿಡ್ ಅರ್ಜಿ ಸಲ್ಲಿಸಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇದಲ್ಲದೆ, ಬಿಸಿಸಿಐ ಮುಖ್ಯ ಕೋಚ್, ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್ ಮತ್ತು ಎನ್‌ಸಿಎ ಮುಖ್ಯಸ್ಥ ಸೇರಿದಂತೆ ಹಲವಾರು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಅದರಂತೆ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ರಾತ್ರಾ ಅವರು ಟೀಮ್ ಇಂಡಿಯಾ ಪರ 6 ಟೆಸ್ಟ್ ಮತ್ತು 12 ಏಕದಿನ ಪಂದಗಳನ್ನಾಡಿದ್ದಾರೆ. ಇನ್ನು ದ್ರಾವಿಡ್ ಅವರಿಂದ ತೆರವಾಗುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ವಿವಿಎಸ್ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.

ಅಂಡರ್ 19 ಟೀಮ್ ಇಂಡಿಯಾ ಹಾಗೂ ಭಾರತ ಎ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ರಾಹುಲ್ ದ್ರಾವಿಡ್ ಕಳೆದ ಬಾರಿ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದ ಹಂಗಾಮಿ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಕೂಡ ರವಿ ಶಾಸ್ತ್ರಿ ಬಳಿಕ ಭಾರತ ತಂಡದ ಕೋಚ್ ಆಗಿ ದ್ರಾವಿಡ್ ಅವರನ್ನು ನೇಮಿಸಲು ಆಸಕ್ತಿವಹಿಸಿದ್ದರು. ಇದಾಗ್ಯೂ ಬಿಸಿಸಿಐ ನೀಡಿದ ಬಿಗ್ ಆಫರ್​ ಅನ್ನು ನಯವಾಗಿ ತಿರಸ್ಕರಿಸಿದ್ದ ದ್ರಾವಿಡ್, ಎನ್​ಸಿಎ ಮುಖ್ಯಸ್ಥರಾಗಿ ಮುಂದುವರೆಯುವುದಾಗಿ ತಿಳಿಸಿದ್ದರು.

ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಾಹುಲ್ ದ್ರಾವಿಡ್ ಅವರ ಮನವೊಲಿಸಲು ಯಶಸ್ವಿಯಾಗಿದ್ದು, ಅದರಂತೆ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ ಭಾರತ ತಂಡ ತರಬೇತುದಾರನ ಹುದ್ದೆಗೆ ಬಿಸಿಸಿಐಗೆ ದ್ರಾವಿಡ್​ಗೆ 10 ಕೋಟಿ ರೂ. ಸಂಭಾವನೆ ನೀಡಲಿದೆ.

ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?

ಇದನ್ನೂ ಓದಿ:  Virat Kohli: ಸೋತರೂ ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(Rahul Dravid applies for Team India head coach post)

Published On - 5:49 pm, Tue, 26 October 21