ಕರ್ನಾಟಕ ತಂಡಕ್ಕೆ ರಾಹುಲ್ ದ್ರಾವಿಡ್ ಪುತ್ರ ನಾಯಕ
Rahul Dravid Son Anvay Dravid: ರಾಹುಲ್ ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಈಗಾಗಲೇ ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕ ಅಂಡರ್-19 ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ನಾಯಕನಾಗಿ ಎಂಬುದು ವಿಶೇಷ.

ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕ ಅಂಡರ್-19 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಭಾನುವಾರವಷ್ಟೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಅತ್ಯುತ್ತಮ ಕಿರಿಯ ಬ್ಯಾಟರ್ ಪ್ರಶಸ್ತಿ ಪಡೆದಿದ್ದ ಅನ್ವಯ್ಗೆ ಇದೀಗ ನಾಯಕತ್ವ ಒಲಿದಿದೆ.
ಅಕ್ಟೋಬರ್ 9 ರಿಂದ 17 ರವರೆಗೆ ಡೆಹ್ರಾಡೂನ್‌ನಲ್ಲಿ ನಡೆಯಲಿರುವ ವಿನೂ ಮಂಕಡ್ ಟೂರ್ನಿಗಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದ ನಾಯಕರಾಗಿ ಅನ್ವಯ್ ದ್ರಾವಿಡ್ ಕಾಣಿಸಿಕೊಳ್ಳಲಿದ್ದಾರೆ.
ವಿಶೇಷ ಎಂದರೆ ಅನ್ವಯ್ ದ್ರಾವಿಡ್ ವಿಕೆಟ್ ಕೀಪರ್ ಬ್ಯಾಟರ್. ಹೀಗಾಗಿ ಈ ಟೂರ್ನಿಯಲ್ಲಿ ಅವರು ಕೀಪಿಂಗ್ ಜವಾಬ್ದಾರಿಯೊಂದಿಗೆ ನಾಯಕನಾಗಿಯೂ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಶಾಂತ ಸ್ವಭಾವದಿಂದ ಗಮನ ಸೆಳೆದಿರುವ ಅನ್ವಯ್ ವಿನೂ ಮಂಕಡ್ ಟೂರ್ನಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರೆ, ಕೆಲ ವರ್ಷಗಳ ಕಾಲ ಅವರನ್ನೇ ನಾಯಕನ್ನಾಗಿ ಮುಂದುವರೆಸುವ ಸಾಧ್ಯತೆಯಿದೆ. ಅದರಲ್ಲೂ ಅಂಡರ್-19 ತಂಡದಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಅವರು ರಣಜಿ ತಂಡಕ್ಕೆ ಆಯ್ಕೆಯಾಗಬಹುದು.
ಹೀಗಾಗಿ ಮುಂಬರುವ ಅಂಡರ್-19 ಟೂರ್ನಿಗಳು ಅನ್ವಯ್ ದ್ರಾವಿಡ್ ಅವರ ಕೆರಿಯರ್ನಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎನ್ನಬಹುದು.
ಅನ್ವಯ್ ದ್ರಾವಿಡ್ಗೆ ಕೆಎಸ್ಸಿಎ ಪ್ರಶಸ್ತಿ:
ಈ ಬಾರಿಯ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕ ಅಂಡರ್-16 ತಂಡದ ಪರ ಕಣಕ್ಕಿಳಿದಿದ್ದ ಅನ್ವಯ್ ಎಂಟು ಇನಿಂಗ್ಸ್ಗಳಿಂದ ಒಟ್ಟು 459 ರನ್ ಕಲೆಹಾಕಿದ್ದರು. ಈ ವೇಳೆ ಅವರ ಬ್ಯಾಟ್ನಿಂದ ಎರಡು ಭರ್ಜರಿ ಶತಕಗಳು ಮೂಡಿ ಬಂದಿವೆ. ಇದರ ನಡುವೆ 48 ಸಿಕ್ಸ್ ಹಾಗೂ ಫೋರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ 91.80 ಸರಾಸರಿಯಲ್ಲಿ ರನ್ಗಳಿಸಿ ಈ ಬಾರಿಯ ವಿಜಯ ಮರ್ಚೆಂಟ್ ಟೂರ್ನಿಯಲ್ಲಿ ಕರ್ನಾಟಕ ಪರ ಅತ್ಯಧಿಕ ರನ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಈ ಭರ್ಜರಿ ಪ್ರದರ್ಶನ ಫಲವಾಗಿ ಕರ್ನಾಟಕದ ಅತ್ಯುತ್ತಮ ಕಿರಿಯ ಬ್ಯಾಟರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅಂದಹಾಗೆ ಅನ್ವಯ್ ದ್ರಾವಿಡ್ ಈ ಪ್ರಶಸ್ತಿ ಪಡೆದಿರುವುದು ಇದೇ ಮೊದಲೇನಲ್ಲ. 2024 ರಲ್ಲಿ ನಡೆದ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ಒಟ್ಟು 357 ರನ್ಗಳಿಸಿ ಕಳೆದ ವರ್ಷವೇ ಈ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಮತ್ತೊಮ್ಮೆ ಕರ್ನಾಟಕದ ಕಿರಿಯ ಬ್ಯಾಟರ್ ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತದ ವಿರುದ್ಧದ ಸರಣಿಗೆ 2 ತಂಡಗಳನ್ನು ಪ್ರಕಟಿಸಿದ ಆಸ್ಟ್ರೇಲಿಯಾ
ಹೀಗೆ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಅನ್ವಯ್ ದ್ರಾವಿಡ್ ಅವರನ್ನು ಇದೀಗ ಕರ್ನಾಟಕ ಅಂಡರ್-19 ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಅದರಂತೆ ವಿನೂ ಮಂಕಡ್ ಟೂರ್ನಿಗೆ ಕರ್ನಾಟಕ ತಂಡ ಈ ಕೆಳಗಿನಂತಿದೆ…
ಕರ್ನಾಟಕ ಅಂಡರ್-19 ತಂಡ : ಅನ್ವಯ್ ದ್ರಾವಿಡ್ (ನಾಯಕ, ವಿಕೆಟ್ ಕೀಪರ್ ), ನಿತೀಶ್ ಆರ್ಯ, ಆದರ್ಶ್ ಡಿ ಅರಸ್ , ಎಸ್ ಮಣಿಕಾಂತ್ (ಉಪನಾಯಕ), ಪ್ರಣೀತ್ ಶೆಟ್ಟಿ , ವಾಸವ್ ವೆಂಕಟೇಶ್ , ಅಕ್ಷತ್ ಪ್ರಭಾಕರ್, ಸಿ ವೈಭವ್, ಕುಲದೀಪ್ ಸಿಂಗ್ ಪುರೋಹಿತ್, ರತನ್ ಬಿಆರ್ , ವೈಭವ್ ಶರ್ಮಾ, ಕೆಎ ತೇಜಸ್ , ಅಥರ್ವ್ ಮಾಳವಿಯಾ, ಸನ್ನಿ ಕಾಂಚಿ, ರೆಹಾನ್ ಮೊಹಮ್ಮದ್ (ವಿಕೆಟ್ ಕೀಪರ್).
Published On - 9:35 am, Tue, 7 October 25
