
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಕೇವಲ ಒಂದು ಎಸೆತ ಬಾಕಿ ಇರುವಂತೆ ಸೋಲೊಪ್ಪಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 175 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 19.5 ಓವರ್ಗಳಲ್ಲಿ 178 ರನ್ಗಳಿಸಿ ರೋಚಕ ಜಯ ಸಾಧಿಸಿದೆ. ಈ ಮೂಲಕ ಆರ್ಸಿಬಿ ಪಡೆ ತವರಿನಲ್ಲಿ 6 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ತಂಡದ ಬ್ಯಾಟಿಂಗ್ ವೈಫಲ್ಯವೇ ಈ ಸೋಲಿಗೆ ಪ್ರಮುಖ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಖಂಡಿತವಾಗಿಯೂ ಇದು ಗೆಲ್ಲುವಂತಹ ಪಂದ್ಯವಾಗಿತ್ತು. ಆದರೆ ನಾವು ಬ್ಯಾಟಿಂಗ್‌ನಲ್ಲಿ 15-20 ರನ್ ಕಡಿಮೆ ಗಳಿಸಿದೆವು ಎಂದು ನನಗನ್ನಿಸುತ್ತದೆ. ಆರಂಭದಲ್ಲಿ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ 12-13ನೇ ಓವರ್ ನಂತರ ದಿಢೀರ್ ವಿಕೆಟ್ ಕಳೆದುಕೊಂಡಿದ್ದು ನಮಗೆ ಹಿನ್ನಡೆಯಾಯಿತು.
ಮುಂದಿನ ಪಂದ್ಯಕ್ಕೂ ಮುನ್ನ ಈ ತಪ್ಪುಗಳನ್ನು ನಾವು ಸರಿಪಡಿಸಿಕೊಳ್ಳಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಬೇಗನೆ ವಿಕೆಟ್ ಕಳೆದುಕೊಳ್ಳುತ್ತಿರುವುದು ಆರ್ಸಿಬಿ ಪಾಲಿಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ ನಮ್ಮ ಮಿಡಲ್ ಆರ್ಡರ್ ಬ್ಯಾಟರ್ಗಳು ಶೀಘ್ರವೇ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ನಾವು ಉತ್ತಮ ಆರಂಭ ಪಡೆದರೂ, ಮಧ್ಯೆದಲ್ಲಿ ಒಂದೆಡರಡು ವಿಕೆಟ್ಗಳನ್ನು ಬೇಗನೆ ಕಳೆದುಕೊಂಡರೂ ಅದು ತಂಡಕ್ಕೆ ಹಿನ್ನಡೆಯನ್ನು ಉಂಟು ಮಾಡುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೂಡ ಆಗಿದ್ದು ಅದೇ. ಸಾಲ್ಟ್, ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ನಾವು ಮಧ್ಯಮ ಕ್ರಮಾಂಕದಲ್ಲಿ ಎಡವಿದೆವು. ಹೀಗಾಗಿ ಈ ಸೋಲಿಗೆ ಬ್ಯಾಟರ್ಗಳು ಕಾರಣ ಎಂದು ರಜತ್ ಪಾಟಿದಾರ್ ಅಭಿಪ್ರಾಯಪಟ್ಟಿದ್ದಾರೆ.
ಈ ಸೋಲಿನ ಹೊರತಾಗಿಯೂ ನಾವು ಪಂದ್ಯವನ್ನು ಕೊನೆಯ ಓವರ್ ತನಕ ಕೊಂಡೊಯ್ದಿರುವುದು ಸಕಾರಾತ್ಮಕ ಅಂಶ. ಬೌಲರ್ಗಳು ತಮ್ಮ ಕಾರ್ಯತೆಯ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಇದು ದೀರ್ಘಾವಧಿಯ ಟೂರ್ನಿ. ಹೀಗಾಗಿ ನಾವು ಎಲ್ಲಿ ತಪ್ಪುಗಳನ್ನು ಮಾಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶವಿದೆ. ಆ ತಪ್ಪುಗಳನ್ನು ಸರಿಪಡಿಸಿ ಮುಂದಿನ ಪಂದ್ಯಗಳಲ್ಲಿ ಕಂಬ್ಯಾಕ್ ಮಾಡುತ್ತೇವೆ ಎಂಬ ವಿಶ್ವಾಸವಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಇದನ್ನೂ ಓದಿ: IPL 2026: ಹೀಗೊಂದು ‘ಅವಮಾನಕರ’ ದಾಖಲೆ ಬರೆದ RCB
ಈ ಸೋಲಿನ ಹೊರತಾಗಿಯೂ ಆರ್ಸಿಬಿ ತನ್ನ ಮುಂದಿನ ಪಂದ್ಯಗಳಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ. ಅದರಂತೆ ಏಪ್ರಿಲ್ 24 ರಂದು ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಗೆಲುವಿನ ಲಯಕ್ಕೆ ಮರಳಲಿದೆಯಾ ಕಾದು ನೋಡಬೇಕಿದೆ.