ಭಾರತ ಕ್ರಿಕೆಟ್ ತಂಡ ಈ ವರ್ಷದ ಮೊದಲ ಟೆಸ್ಟ್ ಸರಣಿಯನ್ನು ಮುಂದಿನ ತಿಂಗಳು ಆಸ್ಟ್ರೇಲಿಯಾ (India vs Australia) ವಿರುದ್ಧ ಆಡಬೇಕಿದೆ. ಆದರೆ ಆರಂಭಿಕರಾಗಿ ಕೆಎಲ್ ರಾಹುಲ್ (KL Rahul) ಮತ್ತು ಶುಭ್‌ಮನ್ ಗಿಲ್ ಹೇಳಿಕೊಳ್ಳುವ ಪ್ರದರ್ಶನ ನೀಡದೆ ಇರುವುದರಿಂದ ಟೀಂ ಇಂಡಿಯಾದಲ್ಲಿ (Team India) ಆರಂಭಿಕ ಆಟಗಾರರ ಸ್ಥಾನಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಆ ಸ್ಥಾನಕ್ಕೆ ಇತರ ಕೆಲವು ಸ್ಪರ್ಧಿಗಳು ಕಣ್ಣಿಟ್ಟಿದ್ದಾರೆ. ಅಂತಹ ಆಟಗಾರರಲ್ಲಿ ಕನ್ನಡಿಕ ಮಯಾಂಕ್ ಅಗರ್ವಾಲ್ (Mayank Agarwal) ಕೂಡ ಸೇರಿದ್ದಾರೆ. ಪ್ರಸ್ತುತ ರಣಜಿ ಟ್ರೋಫಿಯನ್ನು ಆಡುತ್ತಿರುವ ಮಯಾಂಕ್ ಹೊಸ ವರ್ಷವನ್ನು ಶತಕದಿಂದ ಆರಂಭಿಸಿದ್ದು, ಇದೀಗ ಟೀಂ ಇಂಡಿಯಾಗೆ ಮರಳಲು ಟಿಕೆಟ್ ಸಿಗುವ ನಿರೀಕ್ಷೆಯಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರರಾಗಿದ್ದ ಮಯಾಂಕ್ ಕಳೆದ ಒಂದು ವರ್ಷದಿಂದ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಈಗ ಅವರು ಮತ್ತೆ ತಂಡಕ್ಕೆ ಎಂಟ್ರಿಕೊಡಬೇಕಾದರೆ ದೇಶೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಆದರೆ ರಣಜಿ ಟ್ರೋಫಿಯ ಆರಂಭಿಕ ಪಂದ್ಯಗಳಲ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದ ಕರ್ನಾಟಕದ ಈ ಅನುಭವಿ ಬ್ಯಾಟ್ಸ್‌ಮನ್, ಅಂತಿಮವಾಗಿ 2023 ರ ಮೊದಲ ಇನ್ನಿಂಗ್ಸ್‌ನಲ್ಲಿ ಈ ಕೊರತೆಯನ್ನು ನೀಗಿಸಿಕೊಂಡಿದ್ದಾರೆ.
Ranji Trophy 2022: 14 ಬೌಂಡರಿ, 11 ಸಿಕ್ಸರ್; ರಣಜಿಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಮನೀಶ್ ಪಾಂಡೆ..!
ಬೆಂಗಳೂರಿನಲ್ಲಿ ನಡೆಯುತ್ತಿರುವ ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಛತ್ತೀಸ್‌ಗಢ ವಿರುದ್ಧ ಕರ್ನಾಟಕದ ನಾಯಕ ಮಯಾಂಕ್ ಅದ್ಭುತ ಶತಕ ಬಾರಿಸಿದರು. ಬುಧವಾರ, ಜನವರಿ 4, ಪಂದ್ಯದ ಎರಡನೇ ದಿನ, ಮಯಾಂಕ್ ಕರ್ನಾಟಕದ ಮೊದಲ ಇನ್ನಿಂಗ್ಸ್‌ನಲ್ಲಿ 191 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ಸಹಾಯದಿಂದ ಅಜೇಯ 102 ರನ್ ಗಳಿಸಿದರು. ಈ ನಾಯಕನ ಶತಕದ ನೆರವಿನಿಂದ ಕರ್ನಾಟಕ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ನಲ್ಲಿ ಒಂದು ವಿಕೆಟ್‌ಗೆ 202 ರನ್ ಗಳಿಸಿದೆ. ಅಗರ್ವಾಲ್ ಸಹ ಆರಂಭಿಕ ರವಿಕುಮಾರ್ ಸಮರ್ಥ್ (81 ರನ್) ಅವರೊಂದಿಗೆ ಮೊದಲ ವಿಕೆಟ್‌ಗೆ 163 ರನ್ ಜೊತೆಯಾಟ ನಡೆಸಿದರು.
ಕಳೆದ ವರ್ಷ ಶ್ರೀಲಂಕಾ ಟೆಸ್ಟ್ ಸರಣಿಯವರೆಗೂ ಭಾರತ ತಂಡಕ್ಕೆ ಓಪನಿಂಗ್ ಮಾಡುತ್ತಿದ್ದ ಮಯಾಂಕ್, ಇತ್ತೀಚಿನ ಬಾಂಗ್ಲಾದೇಶ ಪ್ರವಾಸದಲ್ಲಿ ಟೆಸ್ಟ್ ಸರಣಿಯ ಭಾಗವಾಗಿರಲಿಲ್ಲ. ಅವರ ಸ್ಥಾನದಲ್ಲಿ, ಟೀಂ ಇಂಡಿಯಾ ಬಂಗಾಳದ ಯುವ ಆರಂಭಿಕ ಅಭಿಮನ್ಯು ಈಶ್ವರನ್ ಅವರನ್ನು ಬ್ಯಾಕಪ್ ಓಪನರ್ ಆಗಿ ನೋಡುತ್ತಿದೆ. ಆದರೆ ನಾಯಕ ರೋಹಿತ್ ಹೊರತುಪಡಿಸಿ, ರಾಹುಲ್ ಮತ್ತು ಗಿಲ್ ಆರಂಭಿಕ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರಿಯಾಗಿ ಒಂದು ವರ್ಷದ ಹಿಂದೆ ಕೊನೆಯ ಟೆಸ್ಟ್ ಆಡಿದ ಮಯಾಂಕ್ಗೆ ಮತ್ತೆ ತಂಡಕ್ಕೆ ಎಂಟ್ರಿಕೊಡುವುದು ಸುಲಭದ ದಾರಿಯಾಗಿಲ್ಲ. ಆದರೆ ಅವರು ರನ್ ಗಳಿಸುವುದನ್ನು ಮುಂದುವರಿಸಿದರೆ ಮತ್ತೆ ತಂಡಕ್ಕೆ ಎಂಟ್ರಿಕೊಡುವ ಅವಕಾಶ ದಟ್ಟವಾಗಿದೆ.
ಪಂದ್ಯದ ಕುರಿತು ಮಾತನಾಡುವುದಾದರೆ, ಇದಕ್ಕೂ ಮೊದಲು ಛತ್ತೀಸ್‌ಗಢ ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗಳಿಗೆ ಆಲೌಟ್ ಆಗಿತ್ತು. ಬುಧವಾರ ಐದು ವಿಕೆಟ್ ಕಳೆದುಕೊಂಡು 267 ರನ್‌ಗಳಿಂದ ಇನ್ನಿಂಗ್ಸ್ ಮುಂದುವರೆಸಿದ ಛತ್ತೀಸ್‌ಗಢ ಕೇವಲ 44 ರನ್‌ಗಳ ಅಂತರದಲ್ಲಿ ಉಳಿದ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಆಶುತೋಷ್ ಸಿಂಗ್ (135) ನಿನ್ನೆಯ ಸ್ಕೋರ್‌ಗೆ 17 ರನ್ ಸೇರಿಸಲಷ್ಟೇ ಶಕ್ತರಾದರು. ಕರ್ನಾಟಕದ ಪರ ಬಲಗೈ ವೇಗಿ ವಿ ಕಾವೇರಪ್ಪ 67 ರನ್ ನೀಡಿ 5 ವಿಕೆಟ್ ಪಡೆದರೆ, ವಾಸುಕಿ ಕೌಶಿಕ್ ನಾಲ್ಕು ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ