Suryakumar Yadav: 8 ದಿನಗಳಲ್ಲಿ ಎರಡನೇ ಬಾರಿ; ಮತ್ತೊಮ್ಮೆ ಶತಕ ಮಿಸ್ ಮಾಡಿಕೊಂಡ ಸೂರ್ಯ..!

| Updated By: ಪೃಥ್ವಿಶಂಕರ

Updated on: Dec 28, 2022 | 3:20 PM

Ranji Trophy 2022: ತಮ್ಮ ಇನ್ನಿಂಗ್ಸ್​ನಲ್ಲಿ 107 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 14 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಂತೆ 95 ರನ್ ಕಲೆ ಹಾಕಿದರು.

Suryakumar Yadav: 8 ದಿನಗಳಲ್ಲಿ ಎರಡನೇ ಬಾರಿ; ಮತ್ತೊಮ್ಮೆ ಶತಕ ಮಿಸ್ ಮಾಡಿಕೊಂಡ ಸೂರ್ಯ..!
ಸೂರ್ಯಕುಮಾರ್ ಯಾದವ್ (ಪ್ರಾತಿನಿಧಿಕ ಚಿತ್ರ)
Follow us on

ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾದ (India vs Srilanka) ಉಪನಾಯಕನಾಗಿ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಸದ್ಯ ಭಾರತದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ (Ranji Trophy) ಆಡುತ್ತಿದ್ದಾರೆ. ವಾಸ್ತವವಾಗಿ ಬಾಂಗ್ಲಾ ಸರಣಿಯಿಂದ ಸೂರ್ಯಕುಮಾರ್​ಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಸೂರ್ಯಕುಮಾರ್ ಯಾದವ್ ದೇಶೀ ಟೂರ್ನಿಯತ್ತ ಮುಖ ಮಾಡಿದ್ದರು. ರಣಜಿಯಲ್ಲೂ ತನ್ನ ಅದ್ಭುತ ಫಾರ್ಮ್​ ಮುಂದುವರೆಸಿರುವ ಸೂರ್ಯ ಮುಂಬೈ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅಧರ್ಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಎಡವುತ್ತಿದ್ದಾರೆ. ಈ ಹಿಂದೆ ಹೈದರಾಬಾದ್ ವಿರುದ್ಧ ಶತಕ ಮಿಸ್ ಮಾಡಿಕೊಂಡಿದ್ದ ಸೂರ್ಯ ಇದೀಗ ಸೌರಾಷ್ಟ್ರ ವಿರುದ್ಧವೂ ಶತಕದಂಚಿನಲ್ಲಿ ಎಡವಿ 95 ರನ್​ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ.

ತಮ್ಮ 15ನೇ ಪ್ರಥಮ ದರ್ಜೆ ಶತಕಕ್ಕಾಗಿ ಸೂರ್ಯಕುಮಾರ್ ಯಾದವ್​, 8 ದಿನಗಳಲ್ಲಿ ಎರಡನೇ ಬಾರಿಗೆ ಶತಕ ವಂಚಿತರಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಈ ಹಿಂದೆ ಡಿಸೆಂಬರ್ 20 ರಂದು ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ವಂಚಿತರಾಗಿದ್ದರು. ಆ ಪಂದ್ಯದಲ್ಲಿ 90 ರನ್‌ಗಳಿಗೆ ಔಟಾಗಿದ್ದ ಸೂರ್ಯ ಈಗ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 95 ರನ್‌ಗಳಿಗೆ ಔಟಾಗಿದ್ದಾರೆ. ಈ ಮೂಲಕ ಕಳೆದ 8 ದಿನಗಳಲ್ಲಿ ಎರಡು ಶತಕಗಳನ್ನು ಮಿಸ್ ಮಾಡಿಕೊಂಡಿದ್ದಾರೆ.

ಕಿಂಗ್​ ಕೊಹ್ಲಿಯ ದೊಡ್ಡ ದಾಖಲೆ ಮುರಿದ ಸೂರ್ಯಕುಮಾರ್..! ಟಿ20 ಸರಣಿಯ ಪ್ರಮುಖ 5 ದಾಖಲೆಗಳಿವು

107 ಎಸೆತಗಳಲ್ಲಿ 95 ರನ್, 14 ಬೌಂಡರಿ, 1 ಸಿಕ್ಸರ್

ಸೌರಾಷ್ಟ್ರ ವಿರುದ್ಧ ಸೂರ್ಯಕುಮಾರ್ ಯಾದವ್ ಶತಕವಂಚಿತರಾದರೂ ಮುಂಬೈ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ವಾಸ್ತವವಾಗಿ ಮುಂಬೈ ತಂಡ ಕೇವಲ 6 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬ್ಯಾಟಿಂಗ್​ಗೆ ಇಳಿದ ಸೂರ್ಯ, ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಅಂತಿಮವಾಗಿ ಸೂರ್ಯ ಔಟಾಗುವ ವೇಳೆಗೆ ತಂಡದ ಸ್ಕೋರ್ ಬೋರ್ಡ್​ನಲ್ಲಿ 159 ರನ್​ಗಳಿದ್ದರೆ, 4 ವಿಕೆಟ್‌ಗಳು ಪತನಗೊಂಡಿದ್ದವು.

ತಮ್ಮ ಇನ್ನಿಂಗ್ಸ್​ನಲ್ಲಿ 107 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 14 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಂತೆ 95 ರನ್ ಕಲೆ ಹಾಕಿದರು. ಇದರೊಂದಿಗೆ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ 28ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5500ಕ್ಕೂ ಹೆಚ್ಚು ರನ್

ಸೌರಾಷ್ಟ್ರ ವಿರುದ್ಧ ಆಡಿದ ಅದ್ಭುತ ಇನ್ನಿಂಗ್ಸ್​ನೊಂದಿಗೆ ಸೂರ್ಯಕುಮಾರ್ ಯಾದವ್ ಈಗ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5500 ಕ್ಕೂ ಹೆಚ್ಚು ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದುವರೆಗೆ ಆಡಿರುವ 79 ಪ್ರಥಮ ದರ್ಜೆ ಪಂದ್ಯಗಳಲ್ಲಿ 131 ಇನ್ನಿಂಗ್ಸ್‌ಗಳಲ್ಲಿ 14 ಶತಕಗಳೊಂದಿಗೆ ಈ ಮೈಲಿಗಲ್ಲು ಸಾಧಿಸಿದ್ದಾರೆ. ಪ್ರಸಕ್ತ ರಣಜಿ ಟ್ರೋಫಿಯಲ್ಲಿ ಆಡಿದ ಎರಡು ಇನ್ನಿಂಗ್ಸ್‌ಗಳನ್ನು ಶತಕಗಳಾಗಿ ಪರಿವರ್ತಿಸಿದ್ದರೆ, ಅವರ ಹೆಸರಿನಲ್ಲಿ 16ನೇ ಪ್ರಥಮ ದರ್ಜೆಯ ಶತಕ ದಾಖಲಾಗುತ್ತಿತ್ತು.

ಅಲ್ಲದೆ, ಸೂರ್ಯಕುಮಾರ್ ಬ್ಯಾಕ್ ಟು ಬ್ಯಾಕ್ ಶತಕಗಳಿಂದ ವಂಚಿತರಾಗಿರಬಹುದು. ಆದರೆ ಮೊದಲು ಹೈದರಾಬಾದ್ ವಿರುದ್ಧ ಮತ್ತು ಈಗ ಸೌರಾಷ್ಟ್ರ ವಿರುದ್ಧ ತಮ್ಮ ಇನ್ನಿಂಗ್ಸ್ ಆಡುವ ಮೂಲಕ, ಅವರು ತಮ್ಮ ಫಾರ್ಮ್ ಎಷ್ಟು ಅದ್ಭುತವಾಗಿದೆ ಎಂಬುದನ್ನು ತೋರಿಸಿದ್ದಾರೆ. ಈ ಮೂಲಕ ಶ್ರೀಲಂಕಾ ವಿರುದ್ಧ ತವರು ಸರಣಿಯಲ್ಲೂ ಮಿಂಚುವ ಸೂಚನೆಯನ್ನು ಸೂರ್ಯಕುಮಾರ್ ಯಾದವ್ ನೀಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Wed, 28 December 22