Ranji Trophy 2023 Quarterfinals: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಯುವ ವೇಗಿ ಮುರಳೀಧರ ವೆಂಕಟೇಶ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕವು ಉತ್ತರಾಖಂಡ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಉತ್ತರಾಖಂಡ್ಗೆ 5ನೇ ಓವರ್ನಲ್ಲೇ ವಿಧ್ವತ್ ಕಾವೇರಪ್ಪ ಶಾಕ್ ನೀಡಿದರು. ನಾಯಕ ಜೀವನ್ಜೋತ್ ಸಿಂಗ್ರನ್ನು ಕೇವಲ 1 ರನ್ಗೆ ಔಟ್ ಮಾಡಿ ಕಾವೇರಪ್ಪ ಮೊದಲು ಯಶಸ್ಸು ತಂದುಕೊಟ್ಟರು.
ಆ ಬಳಿಕ ವೆಂಕಿಯ ಬೆಂಕಿ ಬೌಲಿಂಗ್ ಪರಾಕ್ರಮಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಯಿತು. ಕರಾರುವಾಕ್ ದಾಳಿ ಮೂಲಕ ಉತ್ತರಾಖಂಡ್ ಬ್ಯಾಟ್ಸ್ಮನ್ಗಳನ್ನು ಕಾಡಿದ ವೆಂಕಟೇಶ್ ಅವನೀಶ್ (17) ಹಾಗೂ ದಿಕ್ಷಾಂಶು (9) ವಿಕೆಟ್ ಪಡೆದರು. ಇದರ ಬೆನ್ನಲ್ಲೇ ವಿಜಯ್ ಕುಮಾರ್ ವೈಶಾಖ್ ಸ್ವಪ್ನಿಲ್ ಸಿಂಗ್ (0) ಗೆ ಪೆವಿಲಿಯನ್ ಹಾದಿ ತೋರಿಸಿದರು.
ಕೇವಲ 47 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ಉತ್ತರಾಖಂಡ್ ತಂಡಕ್ಕೆ ಈ ಹಂತದಲ್ಲಿ ಕುನಾಲ್ ಚಂಡೇಲಾ ಆಸರೆಯಾದರು. 103 ಎಸೆತಗಳನ್ನು ಎದುರಿಸಿದ ಕುನಾಲ್ 31 ರನ್ಗಳಿಸಿ ಕ್ರೀಸ್ ಕಚ್ಚಿ ನಿಂತರು. ಆದರೆ ಮತ್ತೊಂದೆಡೆ ಆದಿತ್ಯ ತಾರೆ (14) ಯನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ವಿಧ್ವತ್ ವಿಕೆಟ್ಗಳ ಸಂಖ್ಯೆಯನ್ನು ಐದಕ್ಕೇರಿಸಿದರು.
Also Read: ICC Rankings 2023: ಐಸಿಸಿ ರ್ಯಾಂಕಿಂಗ್ನಲ್ಲಿ ಟೀಮ್ ಇಂಡಿಯಾದ ಮೂವರು ನಂಬರ್ 1
ಇದೇ ವೇಳೆ ಮತ್ತೆ ದಾಳಿಗಿಳಿದ ವೆಂಕಟೇಶ್ ಅಖಿಲ್ ರಾವತ್ (14) ಹಾಗೂ ಅಭಯ್ ನೇಗಿ (1) ವಿಕೆಟ್ ಪಡೆದರು. ಅಷ್ಟೇ ಅಲ್ಲದೆ 103 ಎಸೆತಗಳನ್ನು ಎದುರಿಸಿದ ಕುನಾಲ್ರನ್ನು ಔಟ್ ಮಾಡುವ ಮೂಲಕ ಚೊಚ್ಚಲ ರಣಜಿ ಪಂದ್ಯದಲ್ಲಿ ಐದು ವಿಕೆಟ್ಗಳ ಸಾಧನೆ ಮಾಡಿದರು. ಇನ್ನು ಕೊನೆಯ ಎರಡು ವಿಕೆಟ್ಗಳನ್ನು ಕಬಳಿಸುವ ಮೂಲಕ ಕೃಷ್ಣಪ್ಪ ಗೌತಮ್ ಉತ್ತರಾಖಂಡ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 116 ರನ್ಗಳಿಗೆ ಆಲೌಟ್ ಮಾಡಿದರು.
ಕರ್ನಾಟಕ ಪರ 22ರ ಹರೆಯದ ಯುವ ವೇಗಿ ಮುರಳೀಧರ ವೆಂಕಟೇಶ್ 14 ಓವರ್ಗಳಲ್ಲಿ ಕೇವಲ 36 ರನ್ ನೀಡಿ 5 ವಿಕೆಟ್ ಪಡೆದರೆ, ವಿಧ್ವತ್ ಕಾವೇರಪ್ಪ ಹಾಗೂ ಕೃಷ್ಣಪ್ಪ ಗೌತಮ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ಸದ್ಯ ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡವು ಮೊದಲ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 123 ರನ್ ಕಲೆಹಾಕಿದೆ. ಆರಂಭಿಕರಾದ ಮಯಾಂಕ್ ಅಗರ್ವಾಲ್ (65) ಹಾಗೂ ರವಿಕುಮಾರ್ ಸಮರ್ಥ್ (54) 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ನಿಕಿನ್ ಜೋಸ್ , ಮನೀಶ್ ಪಾಂಡೆ , ಮುರಳೀಧರ ವೆಂಕಟೇಶ್ , ಶರತ್ ಬಿಆರ್ ( ವಿಕೆಟ್ ಕೀಪರ್ ) , ಕೃಷ್ಣಪ್ಪ ಗೌತಮ್ , ಶ್ರೇಯಸ್ ಗೋಪಾಲ್ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ.
ಉತ್ತರಾಖಂಡ್ ಪ್ಲೇಯಿಂಗ್ ಇಲೆವೆನ್: ಆದಿತ್ಯ ತಾರೆ (ವಿಕೆಟ್ ಕೀಪರ್) , ಜೀವನ್ಜೋತ್ ಸಿಂಗ್ (ನಾಯಕ) , ಕುನಾಲ್ ಚಂಡೇಲಾ , ಅಖಿಲ್ ರಾವತ್ , ಅವನೀಶ್ ಸುಧಾ , ಅಭಯ್ ನೇಗಿ , ಸ್ವಪ್ನಿಲ್ ಸಿಂಗ್ , ದಿಕ್ಷಾಂಶು ನೇಗಿ , ಮಯಾಂಕ್ ಮಿಶ್ರಾ , ದೀಪಕ್ ಧಪೋಲಾ , ನಿಖಿಲ್ ಕೊಹ್ಲಿ.