Ranji Trophy 2024: ಗೋವಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ ಮಯಾಂಕ್- ಪಡಿಕ್ಕಲ್..!
Ranji Trophy 2024: ಶ್ರೀಕಂಠದತ್ತ ನರಸಿಂಹರಾಜ ರಾಜ ಒಡೆಯರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಗೋವಾ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡ 4 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿದೆ
ಶ್ರೀಕಂಠದತ್ತ ನರಸಿಂಹರಾಜ ರಾಜ ಒಡೆಯರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಗೋವಾ (Goa vs Karnataka) ನಡುವಿನ ರಣಜಿ ಟ್ರೋಫಿ (Ranji Trophy 2024) ಪಂದ್ಯದಲ್ಲಿ ಎರಡನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡ 4 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿದೆ. ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಹಾಗೂ ದೇವದತ್ ಪಡಿಕ್ಕಲ್ (Devdutt Padikkal) ಅಮೋಘ ಶತಕ ಸಿಡಿಸುವ ಮೂಲಕ ತಂಡವನ್ನು ಭದ್ರ ಸ್ಥಿತಿಯಲ್ಲಿರಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಗೋವಾ ಕಲೆಹಾಕಿರುವ 321 ರನ್ಗಳ ಗುರಿ ಬೆನ್ನಟ್ಟಿರುವ ಕರ್ನಾಟಕ ಇನ್ನು 70 ರನ್ಗಳಿಂದ ಹಿಂದೆ ಇದ್ದು, ತಂಡದ ಪರ ನಿಖಿನ್ ಜೋಶ್ ಹಾಗೂ ಎಸ್ ಶರತ್ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
321 ರನ್ಗಳಿಗೆ ಗೋವಾ ಆಲೌಟ್
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗೋವಾ ತಂಡ 321 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ತಂಡದ ಪರ ಸ್ನೇಹಲ್ ಕೌಠಂಕರ್ 83 ರನ್ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ 52 ರನ್ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಹೆರಾಂಬ್ ಪರಬ್ ಕೂಡ 53 ರನ್ಗಳ ಇನ್ನಿಂಗ್ಸ್ ಆಡಿದರು. ಕರ್ನಾಟಕ ಪರ ವೈಶಾಕ್ ವಿಜಯ್ ಕುಮಾರ್, ಎಂ ವೆಂಕಟೇಶ್, ರೋಹಿತ್ ಕುಮಾರ್ ತಲಾ 3 ವಿಕೆಟ್ ಪಡೆದರು.
251ರನ್ ಕಲೆಹಾಕಿದ ಕರ್ನಾಟಕ
ಗೋವಾ ತಂಡವನ್ನು 321 ರನ್ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ದೇಗಾ ನಿಶ್ಚಲ್ 16 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ನಾಯಕ ಮಯಾಂಕ್ ಹಾಗೂ ಪಡಿಕ್ಕಲ್ ದ್ವಿಶತಕದ ಜೊತೆಯಾಟವನ್ನಾಡಿದಲ್ಲದೆ ಇಬ್ಬರೂ ಕೂಡ ಶತಕ ಸಿಡಿಸಿ ಮಿಂಚಿದರು. ನಂತರ ಕೇವಲ 6 ರನ್ಗಳ ಅಂತರದಲ್ಲಿ ಈ ಇಬ್ಬರ ವಿಕೆಟ್ ಕೂಡ ಪತನವಾಯಿತು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ರೋಹಿತ್ ಕುಮಾರ್ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ದಿನದಾಟದಂತ್ಯಕ್ಕೆ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 251ರನ್ ಕಲೆಹಾಕಿದೆ.
ಮಯಾಂಕ್- ಪಡಿಕ್ಕಲ್ ಶತಕ
ಈ ಸೀಸನ್ ಎರಡನೇ ಶತಕ ಸಿಡಿಸಿದ ಮಯಾಂಕ್ ಗೋವಾ ವಿರುದ್ಧದ ಈ ರಣಜಿ ಟ್ರೋಫಿ ಪಂದ್ಯದಲ್ಲಿ 180 ಎಸೆತಗಳನ್ನು ಎದುರಿಸಿ 10 ಬೌಂಡರಿಗಳ ನೆರವಿನಿಂದ 114 ರನ್ಗಳ ಇನ್ನಿಂಗ್ಸ್ ಅಡಿದರು. ಇವರೊಂದಿಗೆ ದ್ವಿಶತಕದ ಜೊತೆಯಾಟವನ್ನಾಡಿದ ದೇವದತ್ ಪಡಿಕ್ಕಲ್ 142 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:34 pm, Sat, 20 January 24