Ranji Trophy 2024: ಕುತೂಹಲಘಟ್ಟದಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ

| Updated By: ಝಾಹಿರ್ ಯೂಸುಫ್

Updated on: Mar 14, 2024 | 9:41 AM

Ranji Trophy 2024: ರಣಜಿ ಟ್ರೋಫಿಯ ಫೈನಲ್ ಪಂದ್ಯವು ಐದನೇ ದಿನದಾಟದತ್ತ ಸಾಗಿದೆ. ಈ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಮುಂಬೈ ತಂಡವು ವಿದರ್ಭ ತಂಡಕ್ಕೆ ಬೃಹತ್ ಮೊತ್ತದ ಗುರಿ ನೀಡಿದೆ. ಈ ಗುರಿಯನ್ನು ಬೆನ್ನತ್ತಿರುವ ವಿದರ್ಭ ತಂಡಕ್ಕೆ ಗೆಲ್ಲಲು ಕೊನೆಯ ದಿನದಾಟದಲ್ಲಿ 290 ರನ್​ಗಳ ಅವಶ್ಯಕತೆಯಿದೆ.

Ranji Trophy 2024: ಕುತೂಹಲಘಟ್ಟದಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ
Mumbai
Follow us on

ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮುಂಬೈ ಮತ್ತು ವಿದರ್ಭ ನಡುವಣ ರಣಜಿ ಟ್ರೋಫಿ (Ranji Trophy 2024) ಫೈನಲ್ ಪಂದ್ಯವು ಕುತೂಹಲಘಟ್ಟದತ್ತ ಸಾಗಿದೆ. ಈಗಾಗಲೇ 4 ದಿನದಾಟಗಳು ಮುಗಿದಿದ್ದು, ಪಂದ್ಯದ ಮೇಲೆ ಉಭಯ ತಂಡಗಳು ಕೂಡ ಹಿಡಿತ ಸಾಧಿಸಿದೆ. ಹೀಗಾಗಿ ಐದನೇ ದಿನದಾಟದಲ್ಲಿ ಫಲಿತಾಂಶ ಯಾರ ಪರ ವಾಲಲಿದೆ ಎಂಬುದೇ ಈಗ ಕುತೂಹಲ.

ಈ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಮೊದಲ ಇನಿಂಗ್ಸ್​ನಲ್ಲಿ 224 ರನ್​ಗಳಿಸಿ ಆಲೌಟ್ ಆಯಿತು. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ವಿದರ್ಭ ತಂಡವು ಕೇವಲ 105 ರನ್​ಗಳಿಗೆ ಸರ್ವಪತನ ಕಂಡಿತು. ಮುಂಬೈ ಪರ ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್ ಮತ್ತು ಧವಳ್ ಕುಲ್ಕರ್ಣಿ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಮುಂಬೈ ಪರ ಯುವ ದಾಂಡಿಗ ಮುಶೀರ್ ಖಾನ್ (136) ಶತಕ ಬಾರಿಸಿದರೆ, ಶ್ರೇಯಸ್ ಅಯ್ಯರ್ 95 ರನ್​ಗಳ ಕೊಡುಗೆ ನೀಡಿದರು. ಹಾಗೆಯೇ ಶಮ್ಸ್ ಮುಲಾನಿ 50 ರನ್ ಬಾರಿಸಿ ಮಿಂಚಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 418 ರನ್ ಕಲೆಹಾಕಿತು.

ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 538 ರನ್​ಗಳ ಗುರಿ ಪಡೆದಿರುವ ವಿದರ್ಭ ತಂಡಕ್ಕೆ ಈ ಬಾರಿ ಕರುಣ್ ನಾಯರ್ ಆಸರೆಯಾದರು. 74 ರನ್​ಗಳನ್ನು ಬಾರಿಸುವ ಮೂಲಕ ಕರುಣ್ ನಾಲ್ಕನೇ ದಿನದಾಟದ ವೇಳೆ ವಿದರ್ಭ ತಂಡದ ಸ್ಕೋರ್​ ಅನ್ನು 200 ರ ಗಡಿದಾಟಿಸಿ ವಿಕೆಟ್ ಒಪ್ಪಿಸಿದರು.

ಅದರಂತೆ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ ವಿದರ್ಭ ತಂಡವು 5 ವಿಕೆಟ್ ಕಳೆದುಕೊಂಡು 248 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಅಕ್ಷಯ್ ವಾಡ್ಕರ್ (56) ಹಾಗೂ ಹರ್ಷ್ ದುಬೆ (11) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದೀಗ 5ನೇ ದಿನದಾಟದಲ್ಲಿ ವಿದರ್ಭ ತಂಡವು 290 ರನ್​ ಕಲೆಹಾಕಬೇಕಿದೆ. ಅತ್ತ ಮುಂಬೈ ತಂಡ ಗೆಲ್ಲಲು 5 ವಿಕೆಟ್​ಗಳ ಅವಶ್ಯಕತೆಯಿದೆ. ಹೀಗಾಗಿ ಕೊನೆಯ ದಿನದಾಟದಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದೆ ಎಂಬುದೇ ಈಗ ಕುತೂಹಲ.

ಮುಂಬೈ ಪ್ಲೇಯಿಂಗ್ 11: ಪೃಥ್ವಿ ಶಾ , ಭೂಪೇನ್ ಲಾಲ್ವಾನಿ , ಮುಶೀರ್ ಖಾನ್ , ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್ , ಹಾರ್ದಿಕ್ ತಮೋರ್ (ವಿಕೆಟ್ ಕೀಪರ್) , ಶಮ್ಸ್ ಮುಲಾನಿ , ಶಾರ್ದೂಲ್ ಠಾಕೂರ್ , ತನುಷ್ ಕೋಟ್ಯಾನ್ , ತುಷಾರ್ ದೇಶಪಾಂಡೆ , ಧವಲ್ ಕುಲಕರ್ಣಿ.

ಇದನ್ನೂ ಓದಿ: Musheer Khan: ಭರ್ಜರಿ ಶತಕದೊಂದಿಗೆ ಸಚಿನ್ ದಾಖಲೆ ಮುರಿದ ಮುಶೀರ್ ಖಾನ್

ವಿದರ್ಭ ಪ್ಲೇಯಿಂಗ್ 11: ಅಥರ್ವ ತೈಡೆ , ಧ್ರುವ ಶೋರೆ , ಅಮನ್ ಮೊಖಡೆ , ಕರುಣ್ ನಾಯರ್ , ಯಶ್ ರಾಥೋಡ್ , ಅಕ್ಷಯ್ ವಾಡ್ಕರ್ (ನಾಯಕ) , ಆದಿತ್ಯ ಸರ್ವತೆ , ಉಮೇಶ್ ಯಾದವ್ , ಹರ್ಷ ದುಬೆ , ಯಶ್ ಠಾಕೂರ್ , ಆದಿತ್ಯ ಠಾಕ್ರೆ.

 

 

Published On - 9:40 am, Thu, 14 March 24