Ranji Trophy 2024: ಯಶ್ ಭರ್ಜರಿ ಸೆಂಚುರಿ: ಮಧ್ಯ ಪ್ರದೇಶಕ್ಕೆ 321 ರನ್​ಗಳ ಗುರಿ

| Updated By: ಝಾಹಿರ್ ಯೂಸುಫ್

Updated on: Mar 05, 2024 | 1:57 PM

Ranji Trophy 2024: ರಣಜಿ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು 70 ರನ್​ಗಳಿಂದ ಸೋಲಿಸಿ ಮುಂಬೈ ತಂಡವು ಫೈನಲ್​ಗೆ ಪ್ರವೇಶಿಸಿದೆ. ಇದೀಗ ವಿದರ್ಭ ಮತ್ತು ಮಧ್ಯ ಪ್ರದೇಶ್ ತಂಡಗಳ ನಡುವೆ ಸೆಮಿಫೈನಲ್ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಮುಂಬೈ ತಂಡವನ್ನು ಎದುರಿಸಲಿದೆ.

Ranji Trophy 2024: ಯಶ್ ಭರ್ಜರಿ ಸೆಂಚುರಿ: ಮಧ್ಯ ಪ್ರದೇಶಕ್ಕೆ 321 ರನ್​ಗಳ ಗುರಿ
Yash Rathod
Follow us on

ನಾಗ್​ಪುರದ ವಿದರ್ಭ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ (Ranji Trophy 2024) ಮೊದಲ ಸೆಮಿಫೈನಲ್ ಪಂದ್ಯವು ಮುಕ್ತಾಯದ ಹಂತದತ್ತ ಸಾಗುತ್ತಿದೆ. ಮಧ್ಯ ಪ್ರದೇಶ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಅಥರ್ವ ತೈಡೆ 39 ರನ್ ಬಾರಿಸಿದರೆ, ಕರುಣ್ ನಾಯರ್ (63) ಅರ್ಧಶತಕ ಸಿಡಿಸಿದರು. ಆದರೆ ಮಧ್ಯ ಪ್ರದೇಶ್ ಪರ ಕರಾರುವಾಕ್ ದಾಳಿ ಸಂಘಟಿಸಿದ ಅವೇಶ್ ಖಾನ್ 4 ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ಮೊದಲ ಇನಿಂಗ್ಸ್​ನಲ್ಲಿ ವಿದರ್ಭ ತಂಡವು 170 ರನ್​ಗಳಿಗೆ ಆಲೌಟ್ ಆಯಿತು.

ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಮಧ್ಯ ಪ್ರದೇಶ್ ಪರ ಆರಂಭಿಕ ಆಟಗಾರ ಹಿಮಾಂಶು ಮಂತ್ರಿ (126) ಭರ್ಜರಿ ಶತಕ ಸಿಡಿಸಿದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದರೊಂದಿಗೆ 252 ರನ್​ಗಳಿಗೆ ಮಧ್ಯ ಪ್ರದೇಶ್ ತಂಡದ ಮೊದಲ ಇನಿಂಗ್ಸ್ ಅಂತ್ಯಗೊಂಡಿತು.

ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ವಿದರ್ಭ ಪರ ಯಶ್ ರಾಥೋಡ್ 200 ಎಸೆತಗಳಲ್ಲಿ 18 ಫೋರ್ ಹಾಗೂ 2 ಸಿಕ್ಸ್​ಗಳೊಂದಿಗೆ 141 ರನ್​ ಬಾರಿಸಿದರು. ಮತ್ತೊಂದೆಡೆ ಅಕ್ಷಯ್ ವಾಡ್ಕರ್ 77 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ವಿದರ್ಭ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 402 ರನ್ ಕಲೆಹಾಕಿತು.

ಮೊದಲ ಇನಿಂಗ್ಸ್​ನ 82 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 321 ರನ್​ಗಳ ಗುರಿ ಪಡೆದಿರುವ ಮಧ್ಯ ಪ್ರದೇಶ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. 20 ಓವರ್​ಗಳ ಮುಕ್ತಾಯದ ವೇಳೆ 1 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿದೆ. ಇನ್ನು 226 ರನ್​ಗಳ ಅವಶ್ಯಕತೆಯಿದ್ದು, ಕ್ರೀಸ್​ನಲ್ಲಿ ಯಶ್ ದುಬೆ (39) ಹಾಗೂ ಹರ್ಷ್ ಗೌಳಿ (48) ಬ್ಯಾಟಿಂಗ್ ಮಾಡುತ್ತಿದ್ದಾರೆ.

ವಿದರ್ಭ ಪ್ಲೇಯಿಂಗ್ 11: ಅಥರ್ವ ತೈಡೆ , ಧ್ರುವ ಶೋರೆ , ಯಶ್ ರಾಥೋಡ್ , ಕರುಣ್ ನಾಯರ್ , ಅಕ್ಷಯ್ ವಾಡ್ಕರ್ (ನಾಯಕ) , ಆದಿತ್ಯ ಸರ್ವತೆ , ಯಶ್ ಠಾಕೂರ್ , ಉಮೇಶ್ ಯಾದವ್ , ಆದಿತ್ಯ ಠಾಕರೆ , ಅಕ್ಷಯ್ ವಾಖರೆ , ಅಮನ್ ಮೊಖಾಡೆ.

ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ

ಮಧ್ಯ ಪ್ರದೇಶ್ ಪ್ಲೇಯಿಂಗ್ 11: ಯಶ್ ದುಬೆ , ಹಿಮಾಂಶು ಮಂತ್ರಿ, ಹರ್ಷ್ ಗಾವ್ಲಿ , ಶುಭಂ ಎಸ್ ಶರ್ಮಾ (ನಾಯಕ) , ವೆಂಕಟೇಶ್ ಅಯ್ಯರ್ , ಸರನ್ಶ್ ಜೈನ್ , ಅನುಭವ್ ಅಗರ್ವಾಲ್ , ಕುಮಾರ್ ಕಾರ್ತಿಕೇಯ , ಅವೇಶ್ ಖಾನ್ , ಕುಲ್ವಂತ್ ಖೇಜ್ರೋಲಿಯಾ , ಸಾಗರ್ ಸೋಲಂಕಿ.