Ranji Trophy: 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸಿಡಿಲಬ್ಬರದ ಚೊಚ್ಚಲ ಶತಕ ಸಿಡಿಸಿದ ಶಿವಂ ಮಾವಿ
Shivam Mavi's Maiden Ranji Century: 2025-26 ರ ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶ-ನಾಗಾಲ್ಯಾಂಡ್ ಪಂದ್ಯದಲ್ಲಿ ಬೌಲರ್ ಶಿವಂ ಮಾವಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿ ಶತಕ ಸಿಡಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾವಿಯ ಮೊದಲ ಶತಕ ಇದಾಗಿದೆ. ಅವರ ಈ ಸ್ಮರಣೀಯ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿವೆ. ಇದು ಉತ್ತರ ಪ್ರದೇಶ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ನೆರವಾಯಿತು.

2025-26 ರ ರಣಜಿ ಟ್ರೋಫಿಯ (Ranji Trophy 2025-26) ನಾಲ್ಕನೇ ಸುತ್ತಿನ ಪಂದ್ಯಗಳು ನವೆಂಬರ್ 8 ರಂದು ಪ್ರಾರಂಭವಾಗಿದ್ದು, ಮೊದಲ ಎರಡು ದಿನಗಳಲ್ಲಿ ಈಗಾಗಲೇ ಕೆಲವು ಆಟಗಾರರಿಂದ ಅಚ್ಚರಿಯ ಪ್ರದರ್ಶನ ಹೊರಬಿದ್ದಿದೆ. ಇದೀಗ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ-ನಾಗಾಲ್ಯಾಂಡ್ ನಡುವಿನ ಪಂದ್ಯವು ಇದೇ ರೀತಿಯ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತರ ಪ್ರದೇಶ ಪರ 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಬೌಲರ್ ಶಿವಂ ಮಾವಿ (Shivam Mavi) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.ಕಳೆದ ಏಳು ವರ್ಷಗಳಿಂದ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ ಶಿವಂ ಮಾವಿಗೆ ಇದು ಚೊಚ್ಚಲ ಪ್ರಥಮ ದರ್ಜೆ ಶತಕವಾಗಿದೆ.
8ನೇ ಕ್ರಮಾಂಕದಲ್ಲಿ ಸ್ಮರಣೀಯ ಇನ್ನಿಂಗ್ಸ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಉತ್ತರ ಪ್ರದೇಶ 6 ವಿಕೆಟ್‌ಗೆ 535 ರನ್ ಕಲೆಹಾಕಿ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ತಂಡದ ಪರ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವೇಗದ ಬೌಲರ್ ಶಿವಂ ಮಾವಿ ಅದ್ಭುತ ಇನ್ನಿಂಗ್ಸ್ ಆಡಿದರು. ಹೊಡಿಬಡಿ ಆಟದ ಮೂಲಕ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸಿದರು.
ಈ ಇನ್ನಿಂಗ್ಸ್‌ನಲ್ಲಿ ಶಿವಂ ಮಾವಿ ಒಟ್ಟು 87 ಎಸೆತಗಳನ್ನು ಎದುರಿಸಿ 116.09 ಸ್ಟ್ರೈಕ್ ರೇಟ್‌ನಲ್ಲಿ 101 ರನ್ ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ, ಶಿವಂ ಮಾವಿ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಮೊದಲ ಶತಕ ಬಾರಿಸಿದ ದಾಖಲೆಯನ್ನು ಬರೆದರು. ಈ ಪಂದ್ಯಕ್ಕೂ ಮೊದಲು, ಶಿವಂ ಮಾವಿ 21 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, ಆದರೆ ಅವರು ಒಮ್ಮೆಯೂ 50 ರನ್‌ಗಳ ಗಡಿಯನ್ನು ತಲುಪಿರಲಿಲ್ಲ. ಆದರೆ ಈ ಬಾರಿ, ಅವರು 50 ರನ್‌ಗಳ ಗಡಿಯನ್ನು ದಾಟಿ ಶತಕ ಪೂರೈಸಿದರು.
Ranji Trophy: ರಣಜಿ ಅಂಗಳದಲ್ಲಿ 156 ರನ್ ಚಚ್ಚಿದ ಯಶಸ್ವಿ ಜೈಸ್ವಾಲ್
ತಂಡದ ಪರ 3 ಶತಕ
ಉತ್ತರ ಪ್ರದೇಶ ಪರ ಶಿವಂ ಮಾವಿ ಹೊರತಾಗಿ ಮಾಧವ್ ಕೌಶಿಕ್ ಮತ್ತು ಆರ್ಯನ್ ಜುಯಾಲ್ ಗೂಡ ಶತಕ ಬಾರಿಸಿದರು. ಆರ್ಯನ್ ಜುಯಾಲ್ 205 ಎಸೆತಗಳಲ್ಲಿ 18 ಬೌಂಡರಿ ಸೇರಿದಂತೆ 140 ರನ್ ಬಾರಿಸಿದರೆ, ಮಾಧವ್ ಕೌಶಿಕ್ 374 ಎಸೆತಗಳನ್ನು ಎದುರಿಸಿ 185 ರನ್ ಗಳಿಸಿ ಅಜೇಯರಾಗಿ ಉಳಿದರು. ಕೌಶಿಕ್ ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿಗಳು ಸೇರಿದ್ದವು. ಆರಂಭಿಕ ಆಟಗಾರ ಅಭಿಷೇಕ್ ಗೋಸ್ವಾಮಿ ಕೂಡ 55 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
