- Kannada News Sports Cricket news Dhruv Jurel's New Role: Pure Batsman in India Test Squad vs South Africa
IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದಾರೆ ಧ್ರುವ್ ಜುರೆಲ್; ಆದರೆ..?
Dhruv Jurel: ರಿಷಭ್ ಪಂತ್ ಗಾಯದ ನಂತರ ಅದ್ಭುತ ಪ್ರದರ್ಶನ ತೋರುತ್ತಿರುವ ಧ್ರುವ್ ಜುರೆಲ್, ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಶತಕ ಬಾರಿಸಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ, ಪಂತ್ ವಾಪಸಾತಿಯೊಂದಿಗೆ ಜುರೆಲ್ ಕೇವಲ ಬ್ಯಾಟ್ಸ್‌ಮನ್ ಆಗಿ ಆಡುವ ಸಾಧ್ಯತೆ ಇದೆ. ಕೋಲ್ಕತ್ತಾದಲ್ಲಿ ನಡೆಯುವ ಮೊದಲ ಟೆಸ್ಟ್‌ನಲ್ಲಿ ಸಾಯಿ ಸುದರ್ಶನ್ ಅಥವಾ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಜುರೆಲ್‌ಗೆ ಅವಕಾಶ ಸಿಗಬಹುದು. ಅವರ ಫಾರ್ಮ್ ತಂಡಕ್ಕೆ ಬಲ ನೀಡಲಿದೆ.
Updated on: Nov 09, 2025 | 10:57 PM

ರಿಷಭ್ ಪಂತ್ ಇಂಜುರಿಯಿಂದಾಗಿ ಭಾರತ ಟೆಸ್ಟ್ ತಂಡದಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಕಾಣಿಸಿಕೊಳ್ಳುತ್ತಿರುವ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಇತ್ತೀಚಿನ ದಿನಗಳಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಜುರೆಲ್ ಶತಕ ಬಾರಿಸಿದ್ದಾರೆ.

ಅವರ ಈ ಅದ್ಭುತ ಪ್ರದರ್ಶನವನ್ನು ಗಮನಿಸಿದರೆ, ನವೆಂಬರ್ 14 ರಿಂದ ಕೋಲ್ಕತ್ತಾದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅವರು ಆಡುವುದು ಬಹುತೇಕ ಖಚಿತವೆಂದು ಪರಿಗಣಿಸಲಾಗಿದೆ. ಈ ಮೊದಲು ಪಂತ್ ಆಗಮನದಿಂದ, ಜುರೆಲ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಇದರಿಂದ ಅವರಿಗೆ ಮುಂದಿನ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗುತಿತ್ತು.

ಆದರೀಗ ಬಿಸಿಸಿಐ ಮೂಲವೊಂದನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಧ್ರುವ್ ಜುರೆಲ್ ಕೇವಲ ಬ್ಯಾಟ್ಸ್‌ಮನ್ ಆಗಿ ಆಡುವ ಸಾಧ್ಯತೆಯಿದೆ. ಅಂದರೆ ವಿಕೆಟ್ ಕೀಪರ್ ಪಾತ್ರವನ್ನು ರಿಷಭ್ ಪಂತ್ ನಿರ್ವಹಿಸಲಿದ್ದು ಜುರೆಲ್ ಬ್ಯಾಟ್ಸ್‌ಮನ್ ಆಗಿ ಆಡಲಿದ್ದಾರೆ. ಜುರೆಲ್‌ಗೆ ಸ್ಥಾನ ನೀಡುವ ಸಲುವಾಗಿ ಸಾಯಿ ಸುದರ್ಶನ್ ಬದಲಿಗೆ ಅವರನ್ನು ಮೂರನೇ ಸ್ಥಾನದಲ್ಲಿ ಕಳುಹಿಸಬಹುದು ಅಥವಾ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಕೆಳ ಕ್ರಮಾಂಕದಲ್ಲಿ ಆಡಿಸಬಹುದು.

ಭಾರತೀಯ ಪರಿಸ್ಥಿತಿಗಳಲ್ಲಿ ತಂಡಕ್ಕೆ ರೆಡ್ಡಿ ಅವರ ಬೌಲಿಂಗ್ ಹೆಚ್ಚು ಅಗತ್ಯವಿಲ್ಲ. ಯಾಕೆಂದರೆ ಇಲ್ಲಿನ ಪಿಚ್ಗಳು ಸ್ಪಿನ್ನರ್ಗಳಿಗೆ ಹೆಚ್ಚು ಅನುಕೂಲಕರವಾಗಿರುತ್ತವೆ. ಇದಕ್ಕೆ ಪೂರಕವಾಗಿ ಅಹಮದಾಬಾದ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿಯೂ ರೆಡ್ಡಿಗೆ ಕೇವಲ ನಾಲ್ಕು ಓವರ್‌ಗಳನ್ನು ಬೌಲಿಂಗ್ ಮಾಡಿದ್ದರು.

ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಎರಡನೇ ಅನಧಿಕೃತ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಜುರೆಲ್ ಶತಕಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಅವರು ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡಿದರು. ಮತ್ತೊಂದೆಡೆ, ಪಂತ್ ದಕ್ಷಿಣ ಆಫ್ರಿಕಾ ಎ ವಿರುದ್ಧ ವಿಕೆಟ್ ಕೀಪರ್ ಆಗಿ ಆಡಿದ್ದಲ್ಲದೆ ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದರು. ಇದೀಗ ಜುರೆಲ್ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಇದೇ ಪಾತ್ರವನ್ನು ನಿರ್ವಹಿಸಲಿದ್ದಾರೆ.

ದೇಶೀಯ ಋತುವಿನ ಆರಂಭದಿಂದಲೂ, ಜುರೆಲ್ 140, 1, 56, 125, 44, 6, 132, 127 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ, ಅವರು ತಮ್ಮ ಕೊನೆಯ ಎಂಟು ಪ್ರಥಮ ದರ್ಜೆ ಪಂದ್ಯಗಳಲ್ಲಿ ಮೂರು ಶತಕಗಳು ಮತ್ತು ಒಂದು ಅರ್ಧಶತಕವನ್ನು ಬಾರಿಸಿದ್ದಾರೆ. ಕೋಲ್ಕತ್ತಾ ಟೆಸ್ಟ್‌ನಲ್ಲಿ ಜುರೆಲ್‌ಗೆ ಅವಕಾಶ ಸಿಕ್ಕರೆ, ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಅಥವಾ ವೇಗದ ಬೌಲಿಂಗ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ತಂಡದಿಂದ ಕೈಬಿಡಬಹುದು.

24 ವರ್ಷದ ಧ್ರುವ್ ಜುರೆಲ್ ಇದುವರೆಗೆ ಭಾರತ ಪರ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಂದು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 430 ರನ್ ಬಾರಿಸಿದ್ದಾರೆ. ಜುರೆಲ್ 2024 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಕೋಲ್ಕತ್ತಾ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ.
