ಬರೋಬ್ಬರಿ 31 ಶತಕ: ಒಂದೇ ಒಂದು ಚಾನ್ಸ್ ಸಿಗದೇ ವಿದಾಯ ಹೇಳಿದ ಶೆಲ್ಡನ್ ಜಾಕ್ಸನ್
Sheldon Jackson Retirement: ಸೌರಾಷ್ಟ್ರ ತಂಡದ ಆಟಗಾರ ಶೆಲ್ಡನ್ ಜಾಕ್ಸನ್ ದೇಶೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಕಳೆದ 15 ವರ್ಷಗಳ ಕಾಲ ದೇಶೀಯ ಅಂಗಳದಲ್ಲಿ ವಿಕೆಟ್ ಕೀಪರ್ ಆಗಿ ಮಿಂಚಿದ್ದ ಶೆಲ್ಡನ್ ಒಮ್ಮೆಯೂ ಭಾರತ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಇದೀಗ ಶೆಲ್ಡನ್ ತಮ್ಮ 38ನೇ ವಯಸ್ಸಿನಲ್ಲಿ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.

ದೇಶೀಯ ಅಂಗಳದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಶೆಲ್ಡನ್ ಜಾಕ್ಸನ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. 15 ವರ್ಷಗಳಿಂದ ಭಾರತೀಯ ಅಂಗಳದಲ್ಲಿ ಮಿಂಚಿದ್ದ ಶೆಲ್ಡನ್ ಒಮ್ಮೆಯೂ ಟೀಮ್ ಇಂಡಿಯಾಗೆ ಆಯ್ಕೆಯಾಗಿರಲಿಲ್ಲ ಎಂಬುದು ವಿಶೇಷ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಒಟ್ಟು 106 ಪಂದ್ಯಗಳನ್ನಾಡಿರುವ ಶೆಲ್ಡನ್ ಜಾಕ್ಸನ್ 45.80 ರ ಸರಾಸರಿಯಲ್ಲಿ ಒಟ್ಟು 7283 ರನ್ ಕಲೆಹಾಕಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 21 ಶತಕಗಳು ಮೂಡಿಬಂದಿದ್ದವು. ಅಲ್ಲದೆ 39 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
ಇನ್ನು ಲಿಸ್ಟ್ ಎ ಕ್ರಿಕೆಟ್ನಲ್ಲಿ 86 ಪಂದ್ಯಗಳನ್ನಾಡಿರುವ ಶೆಲ್ಡನ್, 9 ಭರ್ಜರಿ ಶತಕ ಹಾಗೂ 14 ಅರ್ಧಶತಕಗೊಂದಿಗೆ ಒಟ್ಟು 2792 ರನ್ ಪೇರಿಸಿದ್ದಾರೆ. ಹಾಗೆಯೇ 84 ಟಿ20 ಪಂದ್ಯಗಳನ್ನಾಡಿರುವ ಅವರು 1812 ರನ್ ಕಲೆಹಾಕಿದ್ದಾರೆ. ಈ ವೇಳೆ ಶೆಲ್ಡನ್ ಬ್ಯಾಟ್ನಿಂದ 1 ಶತಕ ಹಾಗೂ 11 ಅರ್ಧಶತಕಗಳು ಮೂಡಿಬಂದಿವೆ.
ಹೀಗೆ ದೇಶೀಯ ಅಂಗಳದಲ್ಲಿ 31 ಶತಕ, 64 ಅರ್ಧಶತಕಗಳೊಂದಿಗೆ ಒಟ್ಟು 11887 ರನ್ ಕಲೆಹಾಕಿದ್ದ ಶೆಲ್ಡನ್ ಜಾಕ್ಸನ್ ಅವರಿಗೆ ಒಮ್ಮೆಯೂ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿರಲಿಲ್ಲ.
ಅದರಲ್ಲೂ ಪ್ರಮುಖ ವಿಕೆಟ್ ಕೀಪರ್ಗಳ ಅನುಪಸ್ಥಿತಿಯಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಶೆಲ್ಡನ್ ಅವಕಾಶವನ್ನು ಎದುರು ನೋಡುತ್ತಿದ್ದರು. ಆದರೆ ಉತ್ತಮ ಪ್ರದರ್ಶನದ ಹೊರತಾಗಿಯೂ ಸೌರಾಷ್ಟ್ರ ತಂಡದ ಆಟಗಾರರನ ಆಯ್ಕೆಗೆ ಆಯ್ಕೆ ಸಮಿತಿ ಆಸಕ್ತಿ ತೋರಿರಲಿಲ್ಲ ಎಂಬುದೇ ಸತ್ಯ.

ವಿರಾಟ್ ಕೊಹ್ಲಿ ಜೊತೆ ಶೆಲ್ಡನ್ ಜಾಕ್ಸನ್
ಐಪಿಎಲ್ನಲ್ಲೂ ಕಾಣಿಸಿಕೊಂಡಿದ್ದ ಶೆಲ್ಡನ್:
ಶೆಲ್ಡನ್ ಜಾಕ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಎರಡು ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ. 2013 ರಲ್ಲಿ ಆರ್ಸಿಬಿ ತಂಡಕ್ಕೆ ವಿಕೆಟ್ ಕೀಪರ್ ಆಗಿ ಶೆಲ್ಡನ್ ಆಯ್ಕೆಯಾಗಿದ್ದರು. ಇದಾಗ್ಯೂ ಅವರಿಗೆ ಕಣಕ್ಕಿಳಿಯಲು ಅವಕಾಶ ಸಿಕ್ಕಿರಲಿಲ್ಲ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಆಸ್ಟ್ರೇಲಿಯಾ ತಂಡದ 5 ಸ್ಟಾರ್ ಆಟಗಾರರು ಔಟ್
ಆ ಬಳಿಕ 2015 ರಲ್ಲಿ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾದರು. 2015, 2016, 2017, 2021 ಮತ್ತು 2022 ರಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದ ಶೆಲ್ಡನ್ ಜಾಕ್ಸನ್ ಒಟ್ಟು 9 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 8 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು 61 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
