Rashid Khan: ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಸಿಡಿಸಿದ ರಶೀದ್ ಖಾನ್; ವಿಡಿಯೊ ನೋಡಿ
MS Dhoni: ಭಾರತ ತಂಡದ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿಯಂತೆ ಮತ್ತೊಮ್ಮೆ ಹೆಲಿಕಾಪ್ಟರ್ ಸಿಡಿಸಿದ ರಶೀದ್ ಖಾನ್ ಅಭಿಮಾನಿಗಳ ಮನಗೆದ್ದಿದ್ದಾರೆ. ಅವರಿ ಸಿಕ್ಸರ್ ಸಿಡಿಸಿರುವ ವಿಡಿಯೊ ವೈರಲ್ ಆಗಿದೆ.
ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್ ಐಪಿಎಲ್ನಲ್ಲಿ ಬಹುದೊಡ್ಡ ಹೆಸರು. ತಮ್ಮ ಸ್ಪಿನ್ ಜಾದೂ ಮೂಲಕ ವಿಶ್ವದ ಖ್ಯಾತ ಬ್ಯಾಟ್ಸ್ಮನ್ಗಳನ್ನು ತಮ್ಮ ಮುಂದೆ ಮಂಡಿಯೂರುವಂತೆ ಮಾಡುತ್ತಾರೆ. ಹಲವು ಟಿ20 ಲೀಗ್ಗಳಲ್ಲಿ ಆಡುವ ಅವರು ಇದೀಗ ಇಂಗ್ಲೀಷ್ ಟಿ20 ಬ್ಲಾಸ್ಟ್ನಲ್ಲಿ ಆಡುತ್ತಿದ್ದಾರೆ. ಅಲ್ಲಿ ಅವರ ಆಟದ ವೈಖರಿ ಈಗ ಎಲ್ಲರ ಹುಬ್ಬೇರಿಸಿದೆ; ಆದರೆ ಅದು ಬೌಲಿಂಗ್ ಮೂಲಕ ಅಲ್ಲ, ಬ್ಯಾಟಿಂಗ್ ಮೂಲಕ. ಹೌದು. ರಶೀದ್ ಖಾನ್ ಪಂದ್ಯವೊಂದರಲ್ಲಿ ಭಾರತ ತಂಡದ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿಯವರ ಸಿಗ್ನೇಚರ್ ಶಾಟ್ ಆದ ಹೆಲಿಕಾಪ್ಟರ್ ಶಾಟ್ ಮೂಲಕ ಬಾಲನ್ನು ಬೌಂಡರಿ ಗೆರೆ ದಾಟಿಸಿದ ವಿಡಿಯೊ ವೈರಲ್ ಆಗಿದೆ.
ಟಿ20 ಬ್ಲಾಸ್ಟ್ನಲ್ಲಿ ಸಸೆಕ್ಸ್ ತಂಡದ ಪರ ಅಡುವ ರಶೀದ್ ಖಾನ್ ಕೇವಲ 9 ಎಸೆತಗಳಲ್ಲಿ 27 ರನ್ ಸಿಡಿಸಿ ತಮ್ಮ ತಂಡವನ್ನು ಸೆಮಿಫೈನಲ್ಗೇರಲು ನೆರವಾಗಿದ್ದಾರೆ. ಯಾರ್ಕ್ಶೈರ್ ವಿರುದ್ಧದ ಪಂದ್ಯದಲ್ಲಿ ಗೆಲುವಿಗಾಗಿ 178 ರನ್ಗಳ ಬೃಹತ್ ಗುರಿ ಇದ್ದಾಗ, ನೆರವಾದ ರಶೀದ್ ತಮ್ಮ ಅಮೂಲ್ಯ ಬ್ಯಾಟಿಂಗ್ ಕೊಡುಗೆಯಿಂದ ಗಮನ ಸೆಳೆದಿದ್ದಾರೆ. ಅವರ ಭರ್ಜರಿ ಆಟದಿಂದಾಗಿ ಸಸೆಕ್ಸ್ ಗೆಲುವು ದಾಖಲಿಸಿದ್ದು, ನಾಲ್ಕರ ಘಟ್ಟ ಪ್ರವೇಶಿಸಿದೆ. ರಶೀದ್ರ ಈ ಹೊಡಿಬಡಿ ಇನ್ನಿಂಗ್ಸ್ನಲ್ಲಿ ಸಿಡಿಸಿದ ಹೆಲಿಕಾಪ್ಟರ್ ಶಾಟ್ ಇದೀಗ ಕ್ರೀಡಾ ಪ್ರೇಮಿಗಳ ಮನಗೆದ್ದಿದ್ದು, ಧೋನಿಯನ್ನು ನೆನಪಿಸಿಕೊಂಡಿದ್ದಾರೆ.
ರಶೀದ್ ಹೆಲಿಕಾಪ್ಟರ್ ಶಾಟ್ ಮೂಲಕ ಸಿಡಿಸಿದ ಸಿಕ್ಸ್ ಇಲ್ಲಿದೆ:
View this post on Instagram
ಸಸೆಕ್ಸ್ ತಂಡಕ್ಕೆ ಕೊನೆಯ 19 ಎಸೆತಗಳಲ್ಲಿ 41 ರನ್ಗಳ ಅವಶ್ಯಕತೆ ಇತ್ತು. ಹದಿನಾರನೇ ಓವರ್ನ ಕೊನೆಯ ಎಸೆತವನ್ನು ಸಿಕ್ಸರ್ಗಟ್ಟಿದ ರಶೀದ್, 18 ಎಸೆತಗಳಿಗೆ 35 ರನ್ ಬೇಕಾಗುವಂತೆ ಮಾಡಿದರು. ಹದಿನೇಳನೇ ಓವರ್ನಲ್ಲಿ ರಶೀದ್ ಹಾಗೂ ಡೇವಿಡ್ ವೀಸ್ ಜೋಡಿ ಒಂದು ಸಿಕ್ಸರ್ ಸಹಿತ 13 ರನ್ ದೋಚಿದರು. ಹದಿನೆಂಟನೇ ಓವರ್ನಲ್ಲಿ ಹ್ಯಾಟ್ರಿಕ್ ಬೌಂಡರಿ ಸಹಿತ ಹದಿನಾರು ರನ್ ಸಿಡಿಸಿದ ರಶೀದ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಪರಿಣಾಮವಾಗಿ ಸಸೆಕ್ಸ್ ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ಗೆಲುವು ದಾಖಲಿಸಿತು. ಬೌಲಿಂಗ್ನಲ್ಲೂ ಮಿಂಚಿದ್ದ ರಶೀದ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ರಶೀದ್ ಖಾನ್ ಹೆಲಿಕಾಪ್ಟರ್ ಶಾಟ್ ಮೂಲಕ ಸುದ್ದಿ ಮಾಡಿದ್ದು ಇದೇ ಮೊದಲೇನಲ್ಲ. ಇದೇ ಟೂರ್ನಮೆಂಟ್ನ ಲೀಗ್ ಪಂದ್ಯವೊಂದರಲ್ಲಿ ಹ್ಯಾಂಪ್ಶೈರ್ ವಿರುದ್ಧ ಹೆಲಿಕಾಪ್ಟರ್ ಶಾಟ್ ಬಾರಿಸಿ ರಶೀದ್ ಸುದ್ದಿಯಾಗಿದ್ದರು. ಜೊತೆಗೆ ಆಸ್ಟ್ರೇಲಿಯಾದ ಬಿಬಿಎಲ್ ಸೇರಿದಂತೆ ಅನೇಕ ಟಿ20 ಲೀಗ್ಗಳಲ್ಲಿ ರಶೀದ್ ತಮ್ಮ ಬ್ಯಾಟಿಂಗ್ ಹಾಗೂ ಈ ಮಾದರಿಯ ಶಾಟ್ಗಳಿಂದ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:
Rashid Khan: ನಮ್ಮನ್ನು ಸಾಯಲು ಬಿಡಬೇಡಿ: ಕ್ರಿಕೆಟಿಗ ರಶೀದ್ ಖಾನ್ ಅಳಲು
(Rashid Khan once again hits a six with Helicopter shot like MS Dhoni in England T20 Blast)