ನಾನು ಔಟೇ ಅಲ್ಲ… ಅಂಪೈರ್​ ಜೊತೆ ಅಶ್ವಿನ್ ವಾಗ್ವಾದ

TNPL 2025: ತಮಿಳುನಾಡು ಪ್ರೀಮಿಯರ್ ಲೀಗ್​ಗೆ ಜೂನ್ 5 ರಿಂದ ಚಾಲನೆ ದೊರೆತಿದೆ. ಈ ಲೀಗ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯುತ್ತಿದ್ದು, ಇದರಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಅನೇಕ ಆಟಗಾರರು ಕೂಡ ಇರುವುದು ವಿಶೇಷ. ಅದರಲ್ಲೂ ಭಾರತ ತಂಡದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕರಾಗಿ ಕಣಕ್ಕಿಳಿಯುತ್ತಿದ್ದಾರೆ.

ನಾನು ಔಟೇ ಅಲ್ಲ... ಅಂಪೈರ್​ ಜೊತೆ ಅಶ್ವಿನ್ ವಾಗ್ವಾದ
Ashwin

Updated on: Jun 09, 2025 | 3:09 PM

ಕೊಯಂಬತ್ತೂರಿನಲ್ಲಿ ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್ ಲೀಗ್​ನ (TNPL) 5ನೇ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪೊಂದು ವಿವಾದಕ್ಕೀಡಾಗಿದೆ. ಎಸ್​ಎನ್​ಆರ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ತಿರುಪ್ಪೂರು ತಮಿಳನ್ಸ್ ಮತ್ತು ದಿಂಡಿಗಲ್ ಡ್ರಾಗನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ತಿರುಪ್ಪೂರು ತಮಿಳನ್ಸ್ ತಂಡದ ನಾಯಕ ಸಾಯಿ ಕಿಶೋರ್ ಬೌಲಿಂಗ್ ಆಯ್ದುಕೊಂಡಿದ್ದರು.

ದಿಂಡಿಗಲ್ ಡ್ರಾಗನ್ಸ್ ಪರ ಇನಿಂಗ್ಸ್ ಆರಂಭಿಸಿದ ರವಿಚಂದ್ರನ್ ಅಶ್ವಿನ್ ಹಾಗೂ ಶಿವಂ ಸಿಂಗ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ 5ನೇ ಓವರ್​ನ 5ನೇ ಎಸೆತದಲ್ಲಿ ಅಶ್ವಿನ್ ಅವರನ್ನು ಎಲ್​ಬಿಡಬ್ಲ್ಯೂ ಮಾಡುವಲ್ಲಿ ಸಾಯಿ ಕಿಶೋರ್ ಯಶಸ್ವಿಯಾದರು. ಇತ್ತ ಸಾಯಿ ಕಿಶೋರ್ ಎಲ್​ಬಿ ವಿಕೆಟ್​ಗೆ ಮನವಿ ಮಾಡುತ್ತಿದ್ದಂತೆ ಫೀಲ್ಡ್ ಅಂಪೈರ್ ಔಟ್ ನೀಡಿದರು.

ಆದರೆ ಅಂಪೈರ್ ತೀರ್ಪಿನಿಂದ ಅಶ್ವಿನ್ ಸಂತುಷ್ಟರಾಗಿರಲಿಲ್ಲ. ಅಲ್ಲದೆ ನಾನು ನಾಟೌಟ್ ಎಂಬ ವಾದವನ್ನು ಮುಂದಿಟ್ಟು ಫೀಲ್ಡ್ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಇತ್ತ ಅಶ್ವಿನ್ ತಮ್ಮ ವಾದವನ್ನು ಮುಂದಿಟ್ಟರೂ, ಅತ್ತ ಅಂಪೈರ್ ಅವರೊಂದಿಗೆ ಚರ್ಚಿಸಲು ಮುಂದಾಗಲಿಲ್ಲ.

ಇದರಿಂದ ಮತ್ತಷ್ಟು ಕುಪಿತಗೊಂಡ ಅಶ್ವಿನ್ ಬ್ಯಾಟ್​ನಿಂದ ಪ್ಯಾಡ್​ಗೆ ಬಡಿಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಾ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದರು. ಇದೀಗ ಅಶ್ವಿನ್ ಅವರ ಆಕ್ರೋಶಭರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರವಿಚಂದ್ರನ್ ಅಶ್ವಿನ್ ವಿಡಿಯೋ:

ಗೆದ್ದಿದ್ದು ಯಾರು?

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಿಂಡಿಗಲ್ ಡ್ರಾಗನ್ಸ್ ತಂಡವು 16.2 ಓವರ್​ಗಳಲ್ಲಿ 93 ರನ್​ಗಳಿಸಿ ಆಲೌಟ್ ಆಯಿತು. ತಿರುಪ್ಪೂರು ತಮಿಳನ್ಸ್ ತಂಡದ ಪರ ಎಸಕ್ಕಿಮುತ್ತು 4 ಓವರ್​ಗಳಲ್ಲಿ 26 ರನ್ ನೀಡಿ 4 ವಿಕೆಟ್ ಪಡೆದರೆ, ಮತಿವನ್ನನ್ 3 ವಿಕೆಟ್ ಕಬಳಿಸಿ ಮಿಂಚಿದರು.

ಇದನ್ನೂ ಓದಿ: ಐಪಿಎಲ್​ನ 3 ತಂಡಗಳು ಬ್ಯಾನ್, 2 ಟೀಮ್​​ಗಳು ಕ್ಯಾನ್ಸಲ್

ಇನ್ನು 94 ರನ್​ಗಳ ಗುರಿ ಬೆನ್ನತ್ತಿದ ತಿರುಪ್ಪೂರು ತಮಿಳನ್ಸ್ ಪರ ತುಷಾರ್ ರಹೇಜಾ 39 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 65 ರನ್ ಬಾರಿಸಿದರೆ, ಎಸ್ ರಾಧಾಕೃಷ್ಣನ್ ಅಜೇಯ 14 ರನ್ ಕಲೆಹಾಕಿದರು. ಈ ಮೂಲಕ ತಿರುಪ್ಪೂರು ತಮಿಳನ್ಸ್ ತಂಡವು 11.5 ಓವರ್​ಗಳಲ್ಲಿ 94 ರನ್ ಬಾರಿಸಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.