RCB vs MI: ಆರ್‌ಸಿಬಿ ತಂಡದಿಂದ ಸ್ಟಾರ್ ಆಟಗಾರ ಔಟ್: ಇಂದಿನ ಪಂದ್ಯಕ್ಕೆ ಪ್ಲೇಯಿಂಗ್ XI ಹೇಗಿದೆ?
RCB Predicted Playing 11 vs MI: ಆರ್‌ಸಿಬಿ ತಂಡಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೋಶ್ ಹ್ಯಾಜಲ್ವುಡ್ ಕಾಲಿಟ್ಟಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್ ಹೇಗೆ ಕಟ್ಟಬೇಕು ಎಂಬುದು ಫಾಪ್ ಡುಪ್ಲೆಸಿಸ್ಗೆ ತಲೆನೋವಾಗಿ ಪರಿಣಮಿಸಿದೆ.
ಐಪಿಎಲ್ 2022 ರಲ್ಲಿಂದು (IPL 2022) ಎರಡು ಹೈವೋಲ್ಟೇಜ್ ಕದನ ನಡೆಯಲಿದೆ. ಈ ಪೈಕಿ ಸಂಜೆ 7:30ಕ್ಕೆ ಆರಂಭವಾಗಲಿರುವ ಫಾಪ್ ಡುಪ್ಲೆಸಿಸ್ ನಾಯಕನಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (RCB vs MI) ನಡುವಣ ಕಾದಾಟ ಸಾಕಷ್ಟು ಕುತೂಹಲ ಕೆರಳಿಸಿದೆ. ಹ್ಯಾಟ್ರಿಕ್ ಸೋಲುಂಡು ಇದುವರೆಗೆ ಒಂದೂ ಗೆಲುವನ್ನ ಕಾಣದ ಮುಂಬೈಗೆ ಇದೊಂದು ರೀತಿಯ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು. ಇತ್ತ ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೆ ಜಿಗಿಯ ಬೇಕಾದರೆ ಆರ್‌ಸಿಬಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಹೀಗಾಗಿ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಕಾಡೆಮಿಯಲ್ಲಿ ಹೈವೋಲ್ಟೇಜ್ ಪಂದ್ಯವಾಗುವುದು ಖಚಿತ. ಇದರ ನಡುವೆ ಆರ್‌ಸಿಬಿ ತಂಡಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಹಾಗೂ ಜೋಶ್ ಹ್ಯಾಜಲ್ವುಡ್ ಕಾಲಿಟ್ಟಾಗಿದ್ದು, ಈ ಪೈಕಿ ಮ್ಯಾಕ್ಸಿ ಇಂದು ಕಣಕ್ಕಿಳಿಯುವುದು ಖಚಿತವಾಗಿದೆ. ಹೀಗಾಗಿ ಇನ್ನೊಬ್ಬ ಆಟಗಾರ ಇವರಿಗೆ ಜಾಗಮಾಡಿ ಕೊಡಬೇಕಿದೆ. ಅದು ಯಾರು ಎಂಬುದೇ ಫಾಪ್ ಡುಪ್ಲೆಸಿಸ್ಗೆ ತಲೆನೋವಾಗಿ ಪರಿಣಮಿಸಿದೆ.
ಹೌದು, ಮುಂಬೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್ ಕಟ್ಟುವ ಬಗ್ಗೆ ನಾಯಕನಿಗೆ ತಲೆನೋವು ಶುರುವಾಗಿದೆ. ಸ್ಪಿನ್ನರ್ಗಳು ತಂಡದಲ್ಲಿ ದೊಡ್ಡ ಮಟ್ಟದ ಜಾದು ನಡೆಸುತ್ತಿಲ್ಲ. ಕಳೆದ ಬಾರಿಯ ಐಪಿಎಲ್ ಹೀರೋ ಹರ್ಷಲ್ ಪಟೇಲ್ ಸ್ಲೋ ಬಾಲ್ ಕೂಡ ಈ ಬಾರಿ ಅಷ್ಟೊಂದು ಸದ್ದು ಮಾಡುತ್ತಿಲ್ಲ. ಇದರ ನಡುವೆ ತಂಡಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಎಂಟ್ರಿಯಾಗಿದ್ದು ಇವರಿಗೊಂದು ಸ್ಥಾನ ಖಾತ್ರಿಯಾಗಬೇಕಿದೆ. ಹೀಗೆ ಅನೇಕ ತಲೆನೋವು ನಾಯಕನಿಗೆ ಎದುರಾಗಿದೆ. ಸದ್ಯ ಇಂದಿನ ಪಂದ್ಯಕ್ಕೆ ಆರ್ಸಿಬಿಯ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಬಗ್ಗೆ ಗಮನಿಸೋಣ.
ಆರ್‌ಸಿಬಿ ಪರ ಆರಂಭಿಕರಾಗಿ ನಾಯಕ ಫಾಫ್ ಡುಪ್ಲೆಸಿಸ್ ಜೊತೆ ಅನುಜ್ ರಾವತ್ ಭರವಸೆ ಮೂಡಿಸಿಲ್ಲವಾದರೂ ಇವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇದೆ. ಇವರಿಬ್ಬರು ತಂಡಕ್ಕೆ ಇನ್ನಷ್ಟು ಭದ್ರ ಬುನಾದಿ ಹಾಕಬೇಕಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಮೊದಲ 3 ಪಂದ್ಯಗಳಲ್ಲೂ ಲಯ ಕಂಡುಕೊಂಡಿಲ್ಲ. ಕೊಹ್ಲಿ ತಮ್ಮ ಎಂದಿನ ಲಯಕ್ಕೆ ಮರಳಿದರೆ ಮುಂಬೈ ತಂಡದ ಮೇಲಿನ ಒತ್ತಡ ಹೆಚ್ಚುವುದರಲ್ಲಿ ಸಂದೇಹವಿಲ್ಲ. ಈ ಮೂವರು ಬ್ಯಾಟ್ಸ್ಮನ್ಗಳು ಉತ್ತಮ ಆರಂಭ ನೀಡಿದರೆ ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿ ರನ್ ಮಳೆ ಹರಿಯುವುದು ಖಚಿತ.
ಆರ್‌ಸಿಬಿ ಆಡಿದ ಕಳೆದೆರಡೂ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಫಿನಿಷರ್ ಆಗಿ ತಂಡವನ್ನು ಗೆಲುವಿನ ಗೆರೆ ಮುಟ್ಟಿಸಿದ್ದರು. ಇವರು ಸಮಯಕ್ಕೆ ತಕ್ಕಂತೆ ಬ್ಯಾಟ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ನಾಲ್ಕನೇ ಕ್ರಮಾಂಕದಿಂದ ಹಿಡಿದು ಏಳನೇ ಕ್ರಮಾಂಕದ ವರೆಗೆ ಇವರು ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ. ಕಾರ್ತಿಕ್ ಜೊತೆಗೆ ಶಹ್ಬಾಜ್ ಅಹ್ಮದ್ ಸಾಕಷ್ಟು ಶಕ್ತಿ ತುಂಬುತ್ತಿದ್ದಾರೆ. ಇವರ ಜೊತೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಲಭ್ಯತೆಯಿಂದ ಮತ್ತಷ್ಟು ಬಲ ಬಂದಂತಾಗಿದೆ. ಮ್ಯಾಕ್ಸ್‌ವೆಲ್ ಆಗಮನದಿಂದ ಮತ್ತೊಬ್ಬ ಸ್ಟಾರ್ ಬ್ಯಾಟರ್ ಶೆರ್ಫಾನ್ ರುದರ್ಫೋರ್ಡ್ ಹೊರಗುಳಿಯುವುದು ಬಹುತೇಕ ಖಚಿತ.
ಬೌಲಿಂಗ್ ವಿಭಾಗ ನೋಡುವುದಾದರೆ ಡೇವಿಡ್ ವಿಲ್ಲೆ, ಹರ್ಷಲ್ ಪಟೇಲ್, ವನಿಂದು ಹಸಂಗ, ಆಕಾಶ್ ದೀಪ್ ಹಾಗೂ ಮೊಹಮ್ಮದ್ ಸಿರಾಜ್ ಒಳಗೊಂಡಿದ್ದಾರೆ. ಜೋಶ್ ಹ್ಯಾಜಲ್ವುಡ್ ತಂಡ ಕೂಡಿಕೊಂಡಿದ್ದರೂ ಈ ಪಂದ್ಯದಲ್ಲಿ ಆಡ್ತಾರಾ ಎಂಬುದು ನೋಡಬೇಕಿದೆ. ಹ್ಯಾಜಲ್ವುಡ್ ಆಡಿದರೆ ಡೇವಿಡ್ ವಿಲ್ಲೆ ಹೊರಗಿಳಿಯಬೇಕಾಗುತ್ತದೆ. ಹೀಗಾಗಿ ಆರ್ಸಿಬಿಯ ಪ್ಲೇಯಿಂಗ್ XI ಇಂದಿನ ಪಂದ್ಯಕ್ಕೆ ಹೇಗಿರಬಹುದು ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI: ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್(ವಿ.ಕೀ), ಶಹ್ಬಾಜ್ ಅಹ್ಮದ್, ಡೇವಿಡ್ ವಿಲ್ಲೀ/ಜೋಶ್ ಹ್ಯಾಜಲ್ವುಡ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
RCB vs MI: ಐಪಿಎಲ್ನಲ್ಲಿಂದು ಎರಡು ಪಂದ್ಯ: ಬೆಂಗಳೂರು-ಮಂಬೈ ಕಾದಾಟಕ್ಕೆ ಕಾತುರ
Rahul Tewatia: 2 ಬಾಲ್, 12 ರನ್, 2 ಸಿಕ್ಸ್: ರಾಹುಲ್ ತೆವಾಟಿಯ ಸಿಡಿಸಿದ ಆ ರೋಚಕ ಸಿಕ್ಸ್ ವಿಡಿಯೋ ನೋಡಿ