Yuzvendra Chahal: ಕುಡಿದು ಚಹಲ್ರನ್ನು 15ನೇ ಮಹಡಿಯಲ್ಲಿ ನೇತು ಹಾಕಿದ್ದು ಯಾರೆಂದು ಬೆಳಕಿಗೆ ಬರಬೇಕು ಎಂದ ಸೆಹ್ವಾಗ್
Virender Sehwag: ಚಹಲ್ ಇದುವರೆಗೆ ಯಾರೊಂದಿಗೂ ಹೇಳದ ಅಚ್ಚರಿಯ ಘಟನೆಯೊಂದನ್ನು ಮೆಲುಕು ಹಾಕಿದ್ದರು. ಇದೀಗ ಈ ವಿಚಾರ ತಿಳಿದ ಟೀಮ್ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ನಿಮಗೆ ಈರೀತಿ ಮಾಡಿದ ಆಟಗಾರನ ಹೆಸರು ಬಹಿರಂಗ ಪಡಿಸಬೇಕು ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಯುಜ್ವೇಂದ್ರ ಚಹಲ್ (Yuzvendra Chahal) ತಮ್ಮ ಅಭಿಯಾನವನ್ನು ಮುಂಬೈ ಇಂಡಿಯನ್ಸ್ ತಂಡದ ಮೂಲಕ ಆರಂಭಿಸಿದರು. 2013ರ ಒಂದು ಸೀಸನ್ನಲ್ಲಿ ಮಾತ್ರ ಅವರು ಮುಂಬೈ ಪರ ಕಣಕ್ಕಿಳಿದರು. ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಸೇರಿ ಕಳೆದ ವರ್ಷದ ವರೆಗೆ ಆಡಿದ್ದಾರೆ. ಈ ಬಾರಿ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಇವರನ್ನು ಖರೀದಿ ಮಾಡಿತು. ಚಹಲ್ ಹೆಚ್ಚಿನ ಫ್ರಾಂಚೈಸಿಯಲ್ಲಿ ಆಡದಿದ್ದರೂ ಬೇರೆ ತಂಡದ ಆಟಗಾರರ ಜೊತೆ ಉತ್ತಮ ನಂಟು ಹೊಂದಿದ್ದಾರೆ. ಇತ್ತೀಚೆಗಷ್ಟೆ ಚಹಾಲ್ 2013 ರಲ್ಲಿ ಐಪಿಎಲ್ ಟೂರ್ನಿಯ ನಡುವೆ ತಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದರು. ರಾಜಸ್ಥಾನ್ ರಾಯಲ್ಸ್ ತಂಡದ ಸಂದರ್ಶನವೊಂದರಲ್ಲಿ ಚಹಲ್ ಶಾಕಿಂಗ್ ವಿಚಾರವೊಂದನ್ನು ಬಹಿರಂಗ ಪಡಿಸಿದ್ದರು. ಆರ್ಆರ್ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಚಹಲ್ ಇದುವರೆಗೆ ಯಾರೊಂದಿಗೂ ಹೇಳದ ಅಚ್ಚರಿಯ ಘಟನೆಯೊಂದನ್ನು ಮೆಲುಕು ಹಾಕಿದ್ದರು. ಇದೀಗ ಈ ವಿಚಾರ ತಿಳಿದ ಟೀಮ್ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ (Virender Sehwag) ನಿಮಗೆ ಈರೀತಿ ಮಾಡಿದ ಆಟಗಾರನ ಹೆಸರು ಬಹಿರಂಗ ಪಡಿಸಬೇಕು ಎಂದಿದ್ದಾರೆ.
ಚಹಲ್ ಹೇಳಿದ್ದೇನು?:
ಆರ್ಆರ್ ತಂಡದ ಸಹ ಆಟಗಾರರಾದ ಆರ್. ಅಶ್ವಿನ್ ಮತ್ತು ಕರುಣ್ ನಾಯರ್ ಜೊತೆಗಿನ ಸಂಭಾಷಣೆಯಲ್ಲಿ ಚಹಲ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. “ಇದು 2013ರಲ್ಲಿ ನಡೆದಂತಹ ಘಟನೆ. ನಾನಾಗ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ಬಳಿಕ ಎಲ್ಲ ಆಟಗಾರರ ಗೆಟ್ ಟುಗೆದರ್ ಇತ್ತು. ಅದರಲ್ಲಿ ಓರ್ವ ಪ್ಲೇಯರ್ ಅತಿಯಾಗಿ ಮದ್ಯ ಸೇವಿಸಿದ್ದ. ಆದರೆ ಅವನ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ತುಂಬಾ ಕುಡಿದಿದ್ದ ಆ ಆಟಗಾರ ಕೆಲ ಹೊತ್ತು ನನ್ನನ್ನೇ ನೋಡಿಕೊಂಡಿದ್ದ. ನಂತರ ಇಲ್ಲಿಗೆ ಬಾ ಎಂದು ನನ್ನನ್ನು ಕರೆದ. ನಾನು ಆತನ ಸಮೀಪಕ್ಕೆ ತೆರಳಿದೆ. ಈ ವೇಳೆ ಆತ ನನ್ನನ್ನು ಬಾಲ್ಕನಿಯಲ್ಲಿ ನೇತಾಡಿಸಿದ.”
“ಆ ಪ್ಲೇಯರ್ ನನ್ನ ಎರಡೂ ಕೈಗಳನ್ನು ಆತನ ಕತ್ತಿನಿಂದ ಲಾಕ್ ಮಾಡಿದ್ದ. ಅದು ಹದಿನೈದನೇ ಫ್ಲೋರ್ ಆಗಿತ್ತು. ಇದನ್ನು ಗಮನಿಸಿದ ಇತರೆ ಆಟಗಾರರು ತಕ್ಷಣವೇ ಅಲ್ಲಿಗೆ ಓಡೋಡಿ ಬಂದು ನನ್ನನ್ನು ರಕ್ಷಿಸಿದರು. ಸ್ವಲ್ಪ ಹೆಚ್ಚುಕಮ್ಮಿ ಆಗಿದ್ದರೂ ದುರಂತವೇ ನಡೆಯುತ್ತಿತ್ತು. ಆಗ ನಾನು ಮೂರ್ಛೆ ಹೋದೆ, ಅವರು ನನಗೆ ನೀರು ಕೊಟ್ಟರು. ನಾವು ಎಲ್ಲಿಗಾದರೂ ಹೋದಾಗ ಎಷ್ಟು ಜವಬ್ದಾರಿಯಿಂದ ಇರಬೇಕೆಂದು ಈ ಘಟನೆಯಿಂದ ನನಗೆ ಅರಿವಾಯಿತು,” ಎಂಬ ಶಾಕಿಂಗ್ ಘಟನೆಯನ್ನು ಚಹಲ್ ವಿವರಿಸಿದ್ದಾರೆ.
ಇದು ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆ ಆಟಗಾರ ಯಾರು ಎಂದು ಅನೇಕರು ಕೇಳುತ್ತಿದ್ದಾರೆ. ಇದೀಗ ವಿರೇಂದ್ರ ಸೆಹ್ವಾಗ್ ಕೂಡ ಚಹಲ್ ಬಳಿ ಆ ಆಟಗಾರನ ಹೆಸರು ಹೇಳುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್, “ಕುಡಿದ ಅಮಲಿನಲ್ಲಿ ಚಹಲ್ಗೆ ಈ ರೀತಿ ಮಾಡಿದ ಆಟಗಾರನ ಹೆಸರನ್ನು ಬಹಿರಂಗಪಡಿಸುವುದು ಮುಖ್ಯವಾಗಿದೆ. ಈ ಘಟನೆ ನಿಜವಾಗಿದ್ದರೆ, ಇದನ್ನು ತಮಾಷೆಯೆಂದು ಪರಿಗಣಿಸಲಾಗುವುದಿಲ್ಲ. ಅಲ್ಲಿ ಏನಾಯಿತು ಮತ್ತು ಇದರ ಗಂಭೀರತೆಯನ್ನು ಪರಿಗಣಿಸಿ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿದುಕೊಳ್ಳುವುದು ಮುಖ್ಯವಾಗಿದೆ,” ಎಂದು ಹೇಳಿದ್ದಾರೆ.
Hardik Pandya: ರನೌಟ್ ಆದ ಸಿಟ್ಟಿನಲ್ಲಿ ಮಿಲ್ಲರ್ಗೆ ಬಾಯಿಗೆ ಬಂದಂತೆ ಬೈದ ಹಾರ್ದಿಕ್ ಪಾಂಡ್ಯ: ವಿಡಿಯೋ
RCB vs MI: ಆರ್ಸಿಬಿ ತಂಡದಿಂದ ಸ್ಟಾರ್ ಆಟಗಾರ ಔಟ್: ಇಂದಿನ ಪಂದ್ಯಕ್ಕೆ ಪ್ಲೇಯಿಂಗ್ XI ಹೇಗಿದೆ?