IPL 2022: ಚಹಲ್ರನ್ನು ನೇತು ಹಾಕಿದ್ದ ಆಟಗಾರನ ಬ್ಯಾನ್ ಮಾಡಿ ಎಂದ ರವಿಶಾಸ್ತ್ರಿ
yuzvendra chahal: 2013 ರಲ್ಲಿ ಚಹಲ್ ಮುಂಬೈ ಪರ ಐಪಿಎಲ್‌ನಲ್ಲಿ ಕೇವಲ ಒಂದು ಸೀಸನ್ ಮಾತ್ರ ಆಡಿದ್ದರು. ಆ ಬಳಿಕ 2014 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದರು. ಆ
ಭಾರತ ತಂಡದ ಮಾಜಿಕೋಚ್ ರವಿಶಾಸ್ತ್ರಿ ಅವರು ಐಪಿಎಲ್‌ನಲ್ಲಿ (IPL 2022) ಯುಜುವೇಂದ್ರ ಚಹಲ್ (Yuzvendra Chahal) ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರ ಮೇಲೆ ಆಜೀವ ನಿಷೇಧ ಹೇರಬೇಕು ಎಂದಿದ್ದಾರೆ. ಅಲ್ಲದೆ, ಅಂತಹ ಆಟಗಾರನನ್ನು ಜೀವನದಲ್ಲಿ ಕ್ರಿಕೆಟ್ ಪಿಚ್ ಬಳಿ ಬರಲು ಬಿಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ. ಭಾರತೀಯ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಏಪ್ರಿಲ್ 7 ರಂದು ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದರು., 2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಆಟಗಾರನೊಬ್ಬ ನನ್ನನ್ನು ಸಾವಿಗೆ ಕಾರಣನಾಗುತ್ತಿದ್ದ ಎಂಬ ವಿಚಾರವನ್ನು ತಿಳಿಸಿದ್ದರು. ಕುಡಿದು ಅಮಲಿನಲ್ಲಿದ್ದ ಆಟಗಾರನ ವರ್ತನೆಯಿಂದಾಗಿ ನಾನು ಸಾವನ್ನು ಹತ್ತಿರದಿಂದ ನೋಡಿದ್ದೆ ಎಂದು ಚಹಲ್ ಹೇಳಿದ್ದರು.
ಈ ವಿಚಾರವಾಗಿ ಮಾತನಾಡಿರುವ ರವಿಶಾಸ್ತ್ರಿ ಅವರು, ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ಇದು ಅತ್ಯಂತ ಕಳವಳಕಾರಿ ವಿಷಯ. ಈ ರೀತಿಯ ಘಟನೆಯನ್ನು ನೋಡಿ ನಗುವುದು ಯೋಗ್ಯವಲ್ಲ. ಇಂತಹ ಘಟನೆ ನಡೆದರೆ ಕೂಡಲೇ ಆ ಆಟಗಾರನನ್ನು ನಿಷೇಧಿಸಬೇಕು. ಅಲ್ಲದೆ, ಮತ್ತೊಮ್ಮೆ ಕ್ರಿಕೆಟ್ ಪಿಚ್ ಬಳಿ ಬರಲು ಬಿಡಬಾರದು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟರು.
ಅಂದು ಚಹಲ್ ಪಾಲಿಗೆ ನಡೆದಿದ್ದೇನು? ರಾಜಸ್ಥಾನ್ ರಾಯಲ್ಸ್ ತಂಡದ ಸಹ ಆಟಗಾರರಾದ ಆರ್. ಅಶ್ವಿನ್ ಮತ್ತು ಕರುಣ್ ನಾಯರ್ ಜೊತೆಗಿನ ಸಂಭಾಷಣೆಯಲ್ಲಿ ಚಹಲ್ ಈ ತಮಗಾದ ಕಹಿ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ. “ಇದು 2013ರಲ್ಲಿ ನಡೆದಂತಹ ಘಟನೆ. ನಾನಾಗ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ಬಳಿಕ ಎಲ್ಲ ಆಟಗಾರರ ಗೆಟ್ ಟುಗೆದರ್ ಇತ್ತು. ಅದರಲ್ಲಿ ಓರ್ವ ಪ್ಲೇಯರ್ ಅತಿಯಾಗಿ ಮದ್ಯ ಸೇವಿಸಿದ್ದ. ಆದರೆ ಅವನ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ತುಂಬಾ ಕುಡಿದಿದ್ದ ಆ ಆಟಗಾರ ಕೆಲ ಹೊತ್ತು ನನ್ನನ್ನೇ ನೋಡಿಕೊಂಡಿದ್ದ. ನಂತರ ಇಲ್ಲಿಗೆ ಬಾ ಎಂದು ನನ್ನನ್ನು ಕರೆದ. ನಾನು ಆತನ ಸಮೀಪಕ್ಕೆ ತೆರಳಿದೆ. ಈ ವೇಳೆ ಆತ ನನ್ನನ್ನು ಬಾಲ್ಕನಿಯಲ್ಲಿ ನೇತಾಡಿಸಿದ.”
“ಆ ಪ್ಲೇಯರ್ ನನ್ನ ಎರಡೂ ಕೈಗಳನ್ನು ಆತನ ಕತ್ತಿನಿಂದ ಲಾಕ್ ಮಾಡಿದ್ದ. ಅದು ಹದಿನೈದನೇ ಫ್ಲೋರ್ ಆಗಿತ್ತು. ಇದನ್ನು ಗಮನಿಸಿದ ಇತರೆ ಆಟಗಾರರು ತಕ್ಷಣವೇ ಅಲ್ಲಿಗೆ ಓಡೋಡಿ ಬಂದು ನನ್ನನ್ನು ರಕ್ಷಿಸಿದರು. ಸ್ವಲ್ಪ ಹೆಚ್ಚುಕಮ್ಮಿ ಆಗಿದ್ದರೂ ದುರಂತವೇ ನಡೆಯುತ್ತಿತ್ತು. ಆಗ ನಾನು ಮೂರ್ಛೆ ಹೋದೆ, ಅವರು ನನಗೆ ನೀರು ಕೊಟ್ಟರು. ನಾವು ಎಲ್ಲಿಗಾದರೂ ಹೋದಾಗ ಎಷ್ಟು ಜವಬ್ದಾರಿಯಿಂದ ಇರಬೇಕೆಂದು ಈ ಘಟನೆಯಿಂದ ನನಗೆ ಅರಿವಾಯಿತು,” ಎಂಬ ಶಾಕಿಂಗ್ ಘಟನೆಯನ್ನು ಚಹಲ್ ವಿವರಿಸಿದ್ದಾರೆ.
ಚಹಲ್ ಅವರೊಂದಿಗೆ ದುರ್ವತನೆ ತೋರಿದ ಆಟಗಾರ ಯಾರು ಎಂದು ಇದೀಗ ಅನೇಕ ಮಾಜಿ ಆಟಗಾರರು ಪ್ರಶ್ನಿಸಿದ್ದಾರೆ. ಅಲ್ಲದೆ ಈಗ ಅವರು ಐಪಿಎಲ್ ಆಡುತ್ತಿದ್ದರೆ ಅವರನ್ನು ಬ್ಯಾನ್ ಮಾಡುವುದು ಉತ್ತಮ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ವೀರೇಂದ್ರ ಸೆಹ್ವಾಗ್ ಕೂಡ ಚಹಲ್ ಅವರು ಆ ಆಟಗಾರನ ಹೆಸರನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಯುಜುವೇಂದ್ರ ಚಹಲ್ ಅವರ ಶಾಕಿಂಗ್ ಘಟನೆ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ಮುಂಬೈ ತಂಡದಲ್ಲಿದ್ದ ಚಹಲ್: 2013 ರಲ್ಲಿ ಚಹಲ್ ಮುಂಬೈ ಪರ ಐಪಿಎಲ್‌ನಲ್ಲಿ ಕೇವಲ ಒಂದು ಸೀಸನ್ ಮಾತ್ರ ಆಡಿದ್ದರು. ಆ ಬಳಿಕ 2014 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದರು. ಆರ್‌ಸಿಬಿಗೆ ಸೇರಿದ ನಂತರ ತಂಡದ ಖಾಯಂ ಸದಸ್ಯರಾಗಿದ್ದರು. ಅಲ್ಲದೆ ಟೀಮ್ ಇಂಡಿಯಾಗೂ ಎಂಟ್ರಿ ಕೊಡುವ ಮೂಲಕ ಮಿಂಚಿದ್ದರು. ಇದೀಗ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಐಪಿಎಲ್‌ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?