Yuzvendra Chahal: ಆ ಆಟಗಾರ ಕುಡಿದು ನನ್ನನ್ನು 15ನೇ ಮಹಡಿಯಲ್ಲಿ ನೇತು ಹಾಕಿದ: ಚಹಲ್ ಶಾಕಿಂಗ್ ಹೇಳಿಕೆ
IPL 2022, Yuzvendra Chahal: ಓರ್ವ ಪ್ಲೇಯರ್ ಅತಿಯಾಗಿ ಮದ್ಯ ಸೇವಿಸಿದ್ದ. ಆದರೆ ಅವನ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ಆ ಪ್ಲೇಯರ್ ನನ್ನ ಎರಡೂ ಕೈಗಳನ್ನು ಆತನ ಕತ್ತಿನಿಂದ ಲಾಕ್ ಮಾಡಿದ್ದ. ಅದು ಹದಿನೈದನೇ ಫ್ಲೋರ್ ಆಗಿತ್ತು - ಶಾಕಿಂಗ್ ಹೇಳಿಕೆ ನೀಡಿದ ಯುಜ್ವೇಂದ್ರ ಚಹಲ್.
ಯುಜ್ವೇಂದ್ರ ಚಹಾಲ್ (Yuzvendra Chahal) ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals ) ತಂಡದ ಪರ ಆಡುತ್ತಿದ್ದು, ಪ್ರಮುಖ ಸ್ಪಿನ್ನರ್ ಆಗಿ ಮಿಂಚುತ್ತಿದ್ದಾರೆ. ಇದಕ್ಕೂ ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದರು. 2014ರ ಐಪಿಎಲ್ ನಂತರ 2021 ಐಪಿಎಲ್ ವರೆಗೆ ಚಹಲ್ ಆರ್‌ಸಿಬಿ ತಂಡದ ಪ್ರಮುಖ ಅಸ್ತ್ರವಾಗಿದ್ದರು. ಆದರೆ, ಐಪಿಎಲ್ 2022ರ (IPL 2022) ವೇಳೆಗೆ ಅಚ್ಚರಿ ಎಂಬಂತೆ ಆರ್‌ಸಿಬಿ ಇವರನ್ನು ದಿಢೀರ್ ಆಗಿ ಕೈಬಿಟ್ಟಿತು. ಪರಿಣಾಮ ರಾಜಸ್ಥಾನ್ ರಾಯಲ್ಸ್ ಇವರನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಇದೀಗ ಆರ್ಆರ್ ತಂಡದ ಸಂದರ್ಶನವೊಂದರಲ್ಲಿ ಚಹಲ್ ಶಾಕಿಂಗ್ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾರೆ. ಆರ್ಆರ್ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಚಹಲ್ ಇದುವರೆಗೆ ಯಾರೊಂದಿಗೂ ಹೇಳದ ಅಚ್ಚರಿಯ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ. ಹಾಗಾದ್ರೆ ಚಹಲ್ ಆ ವಿಡಿಯೋದನ್ನು ಏನು ಹೇಳಿದ್ದಾರೆ?, ಇಲ್ಲಿದೆ ನೋಡಿ.
“ಇದು 2013ರಲ್ಲಿ ನಡೆದಂತಹ ಘಟನೆ. ನಾನಾಗ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ಬಳಿಕ ಎಲ್ಲ ಆಟಗಾರರ ಗೆಟ್ ಟುಗೆದರ್ ಇತ್ತು. ಅದರಲ್ಲಿ ಓರ್ವ ಪ್ಲೇಯರ್ ಅತಿಯಾಗಿ ಮದ್ಯ ಸೇವಿಸಿದ್ದ. ಆದರೆ ಅವನ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ತುಂಬಾ ಕುಡಿದಿದ್ದ ಆ ಆಟಗಾರ ಕೆಲ ಹೊತ್ತು ನನ್ನನ್ನೇ ನೋಡಿಕೊಂಡಿದ್ದ. ನಂತರ ಇಲ್ಲಿಗೆ ಬಾ ಎಂದು ನನ್ನನ್ನು ಕರೆದ. ನಾನು ಆತನ ಸಮೀಪಕ್ಕೆ ತೆರಳಿದೆ. ಈ ವೇಳೆ ಆತ ನನ್ನನ್ನು ಬಾಲ್ಕನಿಯಲ್ಲಿ ನೇತಾಡಿಸಿದ,” ಎಂಬ ಶಾಕಿಂಗ್ ಘಟನೆಯನ್ನು ವಿವರಿಸಿದ್ದಾರೆ.
ಆರ್ಆರ್ ತಂಡದ ಸಹ ಆಟಗಾರರಾದ ಆರ್. ಅಶ್ವಿನ್ ಮತ್ತು ಕರುಣ್ ನಾಯರ್ ಜೊತೆಗಿನ ಸಂಭಾಷಣೆಯಲ್ಲಿ ಚಹಲ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. “ಆ ಪ್ಲೇಯರ್ ನನ್ನ ಎರಡೂ ಕೈಗಳನ್ನು ಆತನ ಕತ್ತಿನಿಂದ ಲಾಕ್ ಮಾಡಿದ್ದ. ಅದು ಹದಿನೈದನೇ ಫ್ಲೋರ್ ಆಗಿತ್ತು. ಇದನ್ನು ಗಮನಿಸಿದ ಇತರೆ ಆಟಗಾರರು ತಕ್ಷಣವೇ ಅಲ್ಲಿಗೆ ಓಡೋಡಿ ಬಂದು ನನ್ನನ್ನು ರಕ್ಷಿಸಿದರು. ಸ್ವಲ್ಪ ಹೆಚ್ಚುಕಮ್ಮಿ ಆಗಿದ್ದರೂ ದುರಂತವೇ ನಡೆಯುತ್ತಿತ್ತು. ಆಗ ನಾನು ಮೂರ್ಛೆ ಹೋದೆ, ಅವರು ನನಗೆ ನೀರು ಕೊಟ್ಟರು. ನಾವು ಎಲ್ಲಿಗಾದರೂ ಹೋದಾಗ ಎಷ್ಟು ಜವಬ್ದಾರಿಯಿಂದ ಇರಬೇಕೆಂದು ಈ ಘಟನೆಯಿಂದ ನನಗೆ ಅರಿವಾಯಿತು,” ಎಂದು ಚಹಲ್ ಹೇಳಿಕೊಂಡಿದ್ದಾರೆ.
Royals’ comeback stories ke saath, aapke agle 7 minutes hum #SambhaalLenge ?#RoyalsFamily | #HallaBol | @goeltmt pic.twitter.com/RjsLuMcZhV
— Rajasthan Royals (@rajasthanroyals) April 7, 2022
ರಾಜಸ್ಥಾನ್ ರಾಯಲ್ಸ್ ತಂಡ ಸೇರಿದ ಬಳಿಕ ಚಹಲ್ ಕೆಲ ಅಚ್ಚರಿಯ ಹೇಳಿಕೆಯನ್ನು ನೀಡುತ್ತಲೇ ಇದ್ದಾರೆ. ಇತ್ತೀಚೆಗಷ್ಟೆ ಆರ್‌ಸಿಬಿ ತನ್ನನ್ನು ಹರಾಜಿಗೂ ಮುನ್ನ ಕೈಬಿಟ್ಟ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದರು. “ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ತಂಡ ನನ್ನ ಬಳಿಕ ರಿಟೇನ್ ಆಗುವಿರಾ ಎಂದೂ ಕೇಳಲಿಲ್ಲ. ಕೇಳಿದ್ದರೆ ನಾನು ಕಣ್ಣುಮುಚ್ಚಿ ಇರಲು ಒಪ್ಪುತ್ತಿದ್ದೆ. ಹಣಕ್ಕಿಂತ ನನಗೆ ತಂಡದ ಜತೆಗಿನ ಬಾಂಧವ್ಯವೇ ಮುಖ್ಯವಾಗಿತ್ತು. ಆದರೆ ನನ್ನನ್ನು ರಿಟೇನ್ ಮಾಡಿಕೊಳ್ಳದೆ, ಹರಾಜಿನಲ್ಲಿ ಮರಳಿ ಖರೀದಿಸುವೆವು ಎಂದು ತಿಳಿಸಿದ್ದರು. ಹಣವೇ ಮುಖ್ಯವಾಯಿತೇ ಎಂದು ಆರ್‌ಸಿಬಿ ಫ್ಯಾನ್ಸ್ ಈಗಲೂ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಆರ್‌ಸಿಬಿ ತಂಡದಿಂದ ನನ್ನ ಜೀವನ ಸಾಕಷ್ಟು ಬದಲಾಗಿದೆ ಎಂದು ಚಹಲ್ ಹೇಳಿದ್ದಾರೆ.
Rishabh Pant: ಸತತ ಎರಡು ಸೋಲು: ಪಂದ್ಯ ಮುಗಿದ ಬಳಿಕ ರಿಷಭ್ ಪಂತ್ ಆಡಿದ ಮಾತುಗಳೇನು?
Published On - 11:53 am, Fri, 8 April 22