Rishabh Pant: ಸತತ ಎರಡು ಸೋಲು: ಪಂದ್ಯ ಮುಗಿದ ಬಳಿಕ ರಿಷಭ್ ಪಂತ್ ಆಡಿದ ಮಾತುಗಳೇನು?
LSG vs DC, IPL 2022: ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ಸತತ ಎರಡು ಪಂದ್ಯವನ್ನು ಸೋತು ಸಂಕಷ್ಟಕ್ಕೆ ಸಿಲುಕಿದೆ. ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿರುವ ಡೆಲ್ಲಿಯ ನಿವ್ವಳ ರನ್ ರೇಟ್ -0.116 ಆಗಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಡೆಲ್ಲಿ ನಾಯಕ ರಿಷಭ್ ಪಂತ್ ಏನು ಹೇಳಿದರು ಎಂಬುದನ್ನು ಕೇಳಿ.
ಐಪಿಎಲ್ 2022 ರಲ್ಲಿ (IPL 2022) ಆರಂಭದ ಪಂದ್ಯ ಗೆದ್ದು ಬಲಿಷ್ಠ ತಂಡದಂತೆ ಗೋಚರಿಸಿದ್ದ ರಿಷಭ್ ಪಂತ್ (Risbah Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಇದೀಗ ಸತತ ಎರಡು ಪಂದ್ಯವನ್ನು ಸೋತು ಸಂಕಷ್ಟಕ್ಕೆ ಸಿಲುಕಿದೆ. ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿರುವ ಡೆಲ್ಲಿಯ ನಿವ್ವಳ ರನ್ ರೇಟ್ -0.116 ಆಗಿದೆ. ಅದರಲ್ಲೂ ಗುರುವಾರದ ಪಂದ್ಯದಲ್ಲಿ ಲಖನೌ ಸೂಪರ್ ಜೇಂಟ್ಸ್ ವಿರುದ್ಧ ಡೆಲ್ಲಿ ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ವೈಫಲ್ಯ ಕಂಡಿತು. ಸರ್ವಾಂಗೀಣ ನಿರ್ವಹಣೆ ತೋರಿದ ಕೆಎಲ್ ರಾಹುಲ್ ಪಡೆ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ (80 ರನ್, 52 ಎಸೆತ, 9 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಬೌಲರ್‌ಗಳಾದ ರವಿ ಬಿಷ್ಣೋಯ್ (22ಕ್ಕೆ 2 ವಿಕೆಟ್) ಮಾರಕ ದಾಳಿ ನೆರವಿನಿಂದ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಡೆಲ್ಲಿ ನಾಯಕ ರಿಷಭ್ ಪಂತ್ ಏನು ಹೇಳಿದರು ಎಂಬುದನ್ನು ಕೇಳಿ. “ಮೈದಾನದಲ್ಲಿ ಡ್ಯೂ ಇದ್ದ ಕಾರಣ ಸೋಲಿಗೆ ಯಾರನ್ನೂ ದೂರಲು ಸಾಧ್ಯವಿಲ್ಲ. ನಮ್ಮ ಬ್ಯಾಟಿಂಗ್ನಲ್ಲಿ 10 ರಿಂದ 15 ರಷ್ಟು ರನ್ಗಳು ಕಡಿಮೆ ಬಂದವು. ಕೊನೆಯಲ್ಲಿ ಆವೇಶ್ ಖಾನ್ ಮತ್ತು ಜೇಸನ್ ಹೋಲ್ಡರ್ ನಾವು ರನ್ ಗಳಿಸದಂತೆ ಉತ್ತಮ ಕಡಿವಾಣ ಹಾಕಿದರು. ಕ್ರೆಡಿಟ್ ಅವರಿಗೆ ಸಲ್ಲಬೇಕು. ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಏನೇ ಆದರೂ ನಾವು ಪಂದ್ಯದ ಕೊನೆಯ ಹಂತದ ವರೆಗೂ ಶೇ. 100 ರಷ್ಟು ಪರಿಶ್ರಮ ಹಾಕಬೇಕು ಎಂದು ಮಾತನಾಡಕೊಂಡೆವು. ಪವರ್ ಪ್ಲೇನಲ್ಲಿ ಆಟ ಸಾಮಾನ್ಯವಾಗಿತ್ತು. ಯಾವುದೇ ವಿಕೆಟ್ ಕೀಳಲಿಲ್ಲ. ನಮ್ಮ ಸ್ಪಿನ್ನರ್ಗಳು ಮಧ್ಯಮ ಓವರ್ನಲ್ಲಿ ಉತ್ತಮ ನಿರ್ವಹಣೆ ತೋರಿದರು. ಅಂತಿಮವಾಗಿ ನಾವು 10-15 ರನ್ ಕಡಿಮೆ ಹೊಡೆದೆವು ಎಂಬುದು,” ಪಂತ್ ಮಾತಾಗಿತ್ತು.
ಇನ್ನು ಲಖನೌ ತಂಡದ ನಾಯಕ ಕೆಎಲ್ ರಾಹುಲ್ ಮಾತನಾಡಿ, “ನಾವು ಬೌಲಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆವು. ಪವರ್ ಪ್ಲೇಯಲ್ಲಿ ನಾವು ಇನ್ನಷ್ಟು ಕಲಿಯಬೇಕಾಗಿರುವುದಿದೆ. ಆದರೆ, ಕೆಲ ಸಮಯದಲ್ಲಿ ಪವರ್ ಪ್ಲೇ ಹೀಗೇ ಸಾಗುತ್ತದೆ. ಬೌಲರ್ಗಳು ಪವರ್ ಪ್ಲೇನಲ್ಲಿ ಮತ್ತು ನಂತರ ಹೇಗೆ ಬೌಲಿಂಗ್ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದೆವು. ಇದು ನಮಗೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು. ಪಿಚ್ ಹೇಗೆ ವರ್ತಿಸುತ್ತದೆ ಎಂದು ಮೊದಲೇ ಹೇಳಲು ಸಾಧ್ಯವಿಲ್ಲ. ಟೂರ್ನಿ ಆರಂಭಕ್ಕೂ ಮುನ್ನ ಪಿಚ್ ಹೊಸದಾಗಿ ಇರುತ್ತದೆ. ಆದರೆ, ಪಂದ್ಯಗಳು ನಡೆಯುತ್ತ ಹೋದಂತೆ ಗ್ರಿಪ್ ಹೇಗಿರುತ್ತದೆ ಎಂದು ಹೇಳುವುದು ಕಷ್ಟ. ಆಯುಷ್ ಬದೋನಿ ನಮಗೆ ತುಂಬಾ ಸಹಾಯ ಮಾಡುತ್ತಿದ್ದಾರೆ. ಒತ್ತಡದ ನಡುವೆಯೂ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅವರಿಗೆ ಇದೊಂದು ಅತ್ಯುತ್ತಮ ಕಲಿಕೆ. ಅವರು ಇನ್ನಷ್ಟು ಕಷ್ಟ ಪಟ್ಟು ಕೆಲಸ ಮಾಡಬೇಕು. ಈ ಗೆಲುವಿಗೆ ತಂಡದ ಪ್ರತಿಯೊಬ್ಬ ಆಟಗಾರ ಕಾರಣ. ಎಲ್ಲರೂ ಅಮೋಘ ಪ್ರದರ್ಶನ ನೀಡಿದ್ದಾರೆ,” ಎಂದು ರಾಹುಲ್ ಹೇಳಿದ್ದಾರೆ.
ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಲಖನೌ ತಂಡದ ರವಿ ಬಿಷ್ಟೋಯ್ ಮಾತನಾಡಿ, “ಚೇಸಿಂಗ್ ಅನ್ನು ನಾವು ಮಾಡುತ್ತೇವೆ ಎಂಬ ನಂಬಿಕೆಯಿತ್ತು. ಯಾಕೆಂದರೆ ನಮ್ಮ ಬ್ಯಾಟಿಂಗ್ ವಿಭಾಗ ಕೊನೇ ಹಂತದ ವರೆಗೂ ಇದೆ. ಆದರೆ, ಅಂತಿಮ ಹಂತದಲ್ಲಿ ಪಂದ್ಯ ರೋಚಕತೆ ಸೃಷ್ಟಿಸಿತು. ಅದಾಗ್ಯೂ ನಮ್ಮ ಕಡೆ ಹೋಲ್ಡರ್ ಮತ್ತು ಗೌತಮ್ ಇದ್ದರು. ವಿಕೆಟ್ ಪಡೆದು ತಂಡಕ್ಕೆ ಸಹಾಯ ಮಾಡಿದಾಗ ಖುಷಿಯಾಗುತ್ತದೆ,” ಎಂದು ಹೇಳಿದರು.
PBKS vs GT: ಐಪಿಎಲ್ನಲ್ಲಿಂದು ಮಯಾಂಕ್ vs ಹಾರ್ದಿಕ್: ಗೆಲುವಿನ ಓಟ ಮುಂದುವರೆಸುತ್ತಾ ಗುಜರಾತ್?