ಕೊಹ್ಲಿಗಿಂತ ರೋಹಿತ್ ಅತ್ಯುತ್ತಮ ನಾಯಕ: ಇಬ್ಬರ ನಡುವಿನ ವ್ಯತ್ಯಾಸ ತಿಳಿಸಿದ ರಿಕಿ ಪಾಂಟಿಂಗ್
ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಯಾವುದೇ ಪ್ರಮುಖ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿಯೇ ವಿರಾಟ್ ಕೊಹ್ಲಿಗಿಂತ ನಾಯಕತ್ವದಲ್ಲಿ ರೋಹಿತ್ ಶರ್ಮಾ ಬೆಸ್ಟ್.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು 2023 ರ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಮೊದಲ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಇನ್ನುಳಿದ ಪಂದ್ಯಗಳಲ್ಲೂ ಭಾರತ ತಂಡ ಗೆಲ್ಲುವ ವಿಶ್ವಾಸದಲ್ಲಿದೆ. ಈ ವಿಶ್ವಾಸವನ್ನು ಇಮ್ಮಡಿಗೊಳಿಸುವಂತಹ ಹೇಳಿಕೆ ನೀಡಿದ್ದಾರೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್.
ಈ ಬಗ್ಗೆ ಮಾತನಾಡಿರುವ ರಿಕಿ ಪಾಂಟಿಂಗ್, ನಾಯಕತ್ವದ ವಿಷಯದಲ್ಲಿ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಮುಂದಿದ್ದಾರೆ. ಏಕೆಂದರೆ ಅವರ ನಾಯಕತ್ವದಲ್ಲಿ ಭಾರತ ತಂಡವು ಎರಡು ಬಾರಿ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿದೆ. ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು.
ಇದಲ್ಲದೆ ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಯಾವುದೇ ಪ್ರಮುಖ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿಯೇ ವಿರಾಟ್ ಕೊಹ್ಲಿಗಿಂತ ನಾಯಕತ್ವದಲ್ಲಿ ರೋಹಿತ್ ಶರ್ಮಾ ಬೆಸ್ಟ್ ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾ ತುಂಬಾ ಆತ್ಮವಿಶ್ವಾಸ ಹೊಂದಿದ್ದಾರೆ. ಹೆಚ್ಚು ಚಿಂತಿಸಬೇಕಾಗಿಲ್ಲ. ಅವರು ಆಡುವ ರೀತಿಯಲ್ಲಿ ನೀವು ಈ ವಿಷಯಗಳನ್ನು ನೋಡಬಹುದು. ಮೈದಾನದ ಒಳಗೆ ಮತ್ತು ಹೊರಗೆ ಅವರು ಹೀಗೆಯೇ ಇರುತ್ತಾರೆ. ರೋಹಿತ್ ಶರ್ಮಾ ಮೇಲೆ ಯಾವುದೇ ಒತ್ತಡವಿಲ್ಲ, ಒತ್ತಡವು ಅವರಿಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಒತ್ತಡವಿದ್ದರೂ ಅವರು ಅದನ್ನು ಚೆನ್ನಾಗಿ ನಿಭಾಯಿಸುತ್ತಾರೆ.
ಆದರೆ ಇದೇ ವಿಷಯದಲ್ಲಿ ವಿರಾಟ್ ಕೊಹ್ಲಿ ತುಂಬಾ ಭಾವುಕರಾಗುತ್ತಾರೆ. ಕೊಹ್ಲಿ ತಮ್ಮ ವ್ಯಕ್ತಿತ್ವದಿಂದಾಗಿ, ಕೆಲವು ತೊಂದರೆಗಳನ್ನು ಎದುರಿಸುತ್ತಾರೆ. ಆದರೆ ರೋಹಿತ್ ಶರ್ಮಾ ವಿಷಯದಲ್ಲಿ ಇಂತಹ ಸಮಸ್ಯೆಗಳು ಎದುರಾಗುತ್ತಿಲ್ಲ ಎಂದು ರಿಕಿ ಪಾಂಟಿಂಗ್ ಹೇಳಿದರು.
ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದ್ದು, ಹೀಗಾಗಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ ಎಂದು ರಿಕಿ ಪಾಂಟಿಂಗ್ ತಿಳಿಸಿದರು.
ಇದನ್ನೂ ಓದಿ: ಹಳೆಯ ದಾಖಲೆಗಳು ಉಡೀಸ್: ಹೊಸ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ