ಮತ್ತೊಮ್ಮೆ ಸಿಡಿದೆದ್ದ ರಿಂಕು: ಸೂಪರ್ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ಜಯ ತಂದುಕೊಟ್ಟ ರಿಂಕು ಸಿಂಗ್

Rinku Singh 3 Sixes In Super: ಐಪಿಎಲ್ 2023 ರಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದು ಭಾರತ ತಂಡಕ್ಕೂ ಆಯ್ಕೆಯಾದ ರಿಂಕು ಸಿಂಗ್ ಇದೀಗ ಯುಪಿ ಟಿ20 ಲೀಗ್​ನಲ್ಲಿ ಮೀರತ್ ಮೇವರಿಕ್ಸ್ ತಂಡದ ಪರ ಅಬ್ಬರಿಸುತ್ತಿದ್ದಾರೆ. ಕಾಶಿ ರುದ್ರಾಸ್ ವಿರುದ್ಧದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಮೂರು ಬ್ಯಾಕ್-ಟು-ಬ್ಯಾಕ್ ಸಿಕ್ಸರ್‌ಗಳನ್ನು ಹೊಡೆದು ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ.

ಮತ್ತೊಮ್ಮೆ ಸಿಡಿದೆದ್ದ ರಿಂಕು: ಸೂಪರ್ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ಜಯ ತಂದುಕೊಟ್ಟ ರಿಂಕು ಸಿಂಗ್
Rinku Singh Sixes
Edited By:

Updated on: Sep 01, 2023 | 9:21 AM

ಭಾರತ ಕ್ರಿಕೆಟ್ ತಂಡದ ಭವಿಷ್ಯದ ತಾರೆ ಎಂದೇ ಗುರುತಿಸಿಕೊಂಡಿರುವ ರಿಂಕು ಸಿಂಗ್ (Rinku Singh) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಮಿಂಚಿದ ರಿಂಕು ಇಂದು ಸ್ಟಾರ್ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಐಪಿಎಲ್ 2023 ರಲ್ಲಿ ಕೆಕೆಆರ್ ಪರ ಒಂದೆ ಓವರ್​ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದ ಇವರು ಇದೀಗ ಯುಪಿ ಟಿ20 ಲೀಗ್​ನಲ್ಲಿ ತಮ್ಮ ಮೀರತ್ ಮೇವರಿಕ್ಸ್ ತಂಡಕ್ಕೆ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ಗೆಲುವು ತಂದುಕೊಟ್ಟರು. ಅದುಕೂಡ ಸೂಪರ್ ಓವರ್​ನಲ್ಲಿ.

ರಿಂಕು ಸಿಂಗ್ ಕಾಶಿ ರುದ್ರಾಸ್ ವಿರುದ್ಧದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಮೂರು ಬ್ಯಾಕ್-ಟು-ಬ್ಯಾಕ್ ಸಿಕ್ಸರ್‌ಗಳನ್ನು ಹೊಡೆದು ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಸೂಪರ್ ಓವರ್‌ನಲ್ಲಿ ಮೀರತ್ ಮೇವರಿಕ್ಸ್ ತಂಡಕ್ಕೆ ಗೆಲ್ಲಲು 17 ರನ್‌ಗಳ ಅಗತ್ಯವಿದ್ದಾಗ, ಎಲ್ಲರ ಕಣ್ಣು ರಿಂಕು ಮೇಲಿತ್ತು. ಆದರೆ, ಎಡಗೈ ಬ್ಯಾಟ್ಸ್‌ಮನ್ ಸೂಪರ್ ಓವರ್​ನ ಮೊದಲ ಎಸೆತ ಡಾಟ್ ಬಾಲ್ ಆಡಿದರು. ನಂತರ ರಿಂಕು ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು ಗೆಲ್ಲಿಸಿದರು. ವಿಶೇಷ ಎಂದರೆ, ಈ ಬಾರಿಯೂ ರಿಂಕುಗೆ ಬೌಲಿಂಗ್ ಮಾಡಿದ್ದು ಎಡಗೈ ಬೌಲರ್.

ಇದನ್ನೂ ಓದಿ
ಏಷ್ಯಾಕಪ್ ಹೊಸ ಜೆರ್ಸಿಯಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು: ಫೋಟೋ ನೋಡಿ
ನಾಳೆ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ: ಟೀಮ್ ಇಂಡಿಯಾ ತಯಾರಿ ಹೇಗಿದೆ?
ಏಷ್ಯಾಕಪ್ 2023ರಲ್ಲಿ ಇಂದು ಯಾವುದೇ ಪಂದ್ಯವಿಲ್ಲ: ಯಾಕೆ ಗೊತ್ತೇ?, ಇಲ್ಲಿದೆ ನೋಡಿ ಮಾಹಿತಿ
ಭರ್ಜರಿ ಬೌಲಿಂಗ್ ಮೂಲಕ ದಾಖಲೆ ಬರೆದ ಮಥೀಶ ಪತಿರಾಣ

ಇಲ್ಲಿದೆ ನೋಡಿ ರಿಂಕು ಸಿಂಗ್ ಸಿಡಿಸಿದ ಹ್ಯಾಟ್ರಿಕ್ ಸಿಕ್ಸ್ ವಿಡಿಯೋ:

 

ರಿಂಕು ಅವರ ಈ ಸ್ಫೋಟಕ ಆಟ ಅವರ ಐಪಿಎಲ್ 2023 ರ ಪಂದ್ಯವನ್ನು ನೆನಪಿಸಿತು. ರಿಂಕು ಅವರು ಐಪಿಎಲ್​ 2023 ರಲ್ಲಿ ಯಶ್ ದಯಾಳ್ ಬೌಲಿಂಗ್​ನಲ್ಲಿ ಐದು ಬ್ಯಾಕ್-ಟು-ಬ್ಯಾಕ್ ಸಿಕ್ಸರ್‌ಗಳನ್ನು ಹೊಡೆದು ಕೆಕೆಆರ್ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಈ ಆಟ ಕೂಡ ಅದೇ ರೀತಿಯಲ್ಲಿತ್ತು. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೀರತ್ ತಂಡ 4 ವಿಕೆಟ್ ನಷ್ಟಕ್ಕೆ 181 ರನ್ ದಾಖಲಿಸಿತು. ಈ ಸಂದರ್ಭ ರಿಂಕು ಬ್ಯಾಟ್‌ನಿಂದ ದೊಡ್ಡ ಮೊತ್ತ ಬರಲಿಲ್ಲ. 22 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಮಾಧವ್ ಕೌಶಿಕ್ 52 ಎಸೆತಗಳಲ್ಲಿ ಅಜೇಯ 87 ರನ್ ಗಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಪ್ರಜ್ಞಾನಂದ

ಟಾರ್ಗೆಟ್ ಬೆನ್ನಟ್ಟಿದ ಕಾಶಿ ರುದ್ರಾಸ್ ತಂಡ ಕರಣ್ ಶರ್ಮಾ ಅವರ 58 ಮತ್ತು ಶಿವಂ ಬನ್ಸಾಲ್ ಅವರ ಅರ್ಧಶತಕದ ನೆರಿವಿನಿಂದ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್​ಗಳನ್ನೇ ಗಳಿಸಿತು. ಹೀಗಾಗಿ ಕೊನೆಯಲ್ಲಿ, ಇದು ಸೂಪರ್ ಓವರ್‌ಗೆ ಬಂದಿತು. ಸೂಪರ್ ಓಪನರ್​ನಲ್ಲಿ ಕಾಶಿ ರುದ್ರಾಸ್ 16 ರನ್ ಕಲೆಹಾಕಿತು.

17 ರನ್​ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಮೀರತ್ ತಂಡದ ಪರ ರಿಂಕು ಸಿಂಗ್, ಶಿವ ಸಿಂಗ್ ಬೌಲಿಂಗ್​ನ ಮೊದಲ ಎಸೆತ ಡಾಟ್ ಮಾಡಿದರು. ಆದರೆ, ನಂತರದ ಮೂರು ಎಸೆತಗಳಲ್ಲಿ ಸತತ ಸಿಕ್ಸರ್ ಸಿಡಿಸಿ ಜಯ ತಂದುಕೊಟ್ಟರು. ಈ ಮೂಲಕ ಯುಪಿ ಟಿ20 ಲೀಗ್​ನಲ್ಲಿ ಮೀರತ್ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ ಮತ್ತು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಸದ್ಯ ಯಾವುದೇ ದೇಶೀಯ ಕ್ರಿಕೆಟ್ ಇಲ್ಲದ ಕಾರಣ, ಏಷ್ಯನ್ ಗೇಮ್ಸ್‌ಗೂ ಮುನ್ನ ರಿಂಕು ಸಿಂಗ್​ಗೆ ಬ್ಯಾಟಿಂಗ್ ಅಭ್ಯಾಸ ಬೇಕಿದೆ. ಹೀಗಾಗಿ ಯುಪಿ ಟಿ20 ಲೀಗ್​ನಲ್ಲಿ ಕಣಕ್ಕಿಳಿದಿದ್ದಾರೆ. 25ರ ಹರೆಯದ ರಿಂಕು ಅವರು ಏಷ್ಯನ್ ಗೇಮ್ಸ್​ನಲ್ಲಿ ತಂಡದ ಭಾಗವಾಗಿದ್ದಾರೆ.

ರಿಂಕು ಅವರು ಆಗಸ್ಟ್ 18 ರಂದು ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಮೂಲಕ ಭಾರತ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಎರಡನೇ T20I ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಇವರು 21 ಎಸೆತಗಳಲ್ಲಿ 38 ರನ್ ಗಳಿಸಿ ಭಾರತದ ಮೊತ್ತ 180 ರ ಗಡಿ ದಾಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ