Asia Cup 2023: ಬಾಂಗ್ಲಾದೇಶ್ ವಿರುದ್ಧ ಜಯ ಸಾಧಿಸಿದ ಶ್ರೀಲಂಕಾ
Asia Cup 2023: ಈ ಹಂತದಲ್ಲಿ ಜೊತೆಯಾದ ಸದೀರ ಸಮರವಿಕ್ರಮ ಹಾಗೂ ಚರಿತ್ ಅಸಲಂಕಾ 78 ರನ್ಗಳ ಜೊತೆಯಾಟವಾಡಿದರು. ಈ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇದಾದ ಬಳಿಕ 77 ಎಸೆತಗಳಲ್ಲಿ 6 ಫೋರ್ಗಳೊಂದಿಗೆ 54 ರನ್ ಬಾರಿಸಿ ಸದೀರ ಸ್ಟಂಪ್ ಔಟ್ ಆಗಿ ನಿರ್ಗಮಿಸಿದರು.
ಏಷ್ಯಾಕಪ್ನ 2ನೇ ಪಂದ್ಯದಲ್ಲಿ ಶ್ರೀಲಂಕಾ (Sri Lanka) ತಂಡವು ಜಯ ಸಾಧಿಸಿದೆ. ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ (Bangladesh) ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆದರೆ ನಿರೀಕ್ಷಿತ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ಆರಂಭಿಕ ಆಟಗಾರ ತಂಝಿದ್ ಹಸನ್ (0) ಶೂನ್ಯಕ್ಕೆ ಔಟಾದರೆ, ಮೊಹಮ್ಮದ್ ನಯಿಮ್ 16 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ನಜ್ಮುಲ್ ಶಾಂಟೊ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಮತ್ತೊಂದೆಡೆ ನಾಯಕ ಶಕೀಬ್ ಅಲ್ ಹಸನ್ ಕೇವಲ 5 ರನ್ಗಳಿಸಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಇನ್ನು ತೌಹಿದ್ ಹೃದೊಯ್ 20 ರನ್ಗಳಿಸಿದರೆ, ಮುಶ್ಫಿಕುರ್ ರಹೀಮ್ 13 ರನ್ಗಳಿಸಲಷ್ಟೇ ಶಕ್ತರಾದರು.
ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತ ನಜ್ಮುಲ್ ಶಾಂಟೊ ಅರ್ಧಶತಕ ಪೂರೈಸಿದರು. ಈ ಮೂಲಕ ತಂಡದ ಮೊತ್ತವನ್ನು 100 ರ ಗಡಿದಾಟಿಸಿದರು. ಮತ್ತೊಂದು ತುದಿಯಿಂದ ಶಾಂಟೊಗೆ ಉತ್ತಮ ಸಾಥ್ ಸಿಕ್ಕಿರಲಿಲ್ಲ. 122 ಎಸೆತಗಳನ್ನು ಎದುರಿಸಿದ ಶಾಂಟೊ 7 ಫೋರ್ಗಳೊಂದಿಗೆ 89 ರನ್ ಬಾರಿಸಿ ಮಹೀಶ್ ತೀಕ್ಷಣ ಎಸೆತದಲ್ಲಿ ಬೌಲ್ಡ್ ಆದರು. ಇದರ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಲಂಕಾ ಬೌಲರ್ಗಳು ಬಾಂಗ್ಲಾದೇಶ್ ತಂಡವನ್ನು 42.4 ಓವರ್ಗಳಲ್ಲಿ 164 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.
165 ರನ್ಗಳ ಸುಲಭ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯುವ ವೇಗಿ ತಸ್ಕಿನ್ ಅಹ್ಮದ್ ಯಶಸ್ವಿಯಾಗಿದ್ದರು. ಮೂರನೇ ಓವರ್ನ ಮೊದಲ ಎಸೆತದಲ್ಲಿ ದಿಮುತ್ ಕರುಣರತ್ನೆ (1) ವಿಕೆಟ್ ಪಡೆದು ಮೊದಲ ಯಶಸ್ಸು ತಂದುಕೊಟ್ಟರು.
ಇದರ ಬೆನ್ನಲ್ಲೇ ಎಡಗೈ ವೇಗಿ ಶೊರಿಫುಲ್ ಇಸ್ಲಾಂ ಪಾತುಮ್ ನಿಸ್ಸಂಕಾ (14) ವಿಕೆಟ್ ಕಬಳಿಸಿದರು. ಆ ಬಳಿಕ ಬಂದ ಕುಸಾಲ್ ಮೆಂಡಿಸ್ (5) ಶಕೀಬ್ ಅಲ್ ಹಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಈ ಹಂತದಲ್ಲಿ ಜೊತೆಯಾದ ಸದೀರ ಸಮರವಿಕ್ರಮ ಹಾಗೂ ಚರಿತ್ ಅಸಲಂಕಾ 78 ರನ್ಗಳ ಜೊತೆಯಾಟವಾಡಿದರು. ಈ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇದಾದ ಬಳಿಕ 77 ಎಸೆತಗಳಲ್ಲಿ 6 ಫೋರ್ಗಳೊಂದಿಗೆ 54 ರನ್ ಬಾರಿಸಿ ಸದೀರ ಸ್ಟಂಪ್ ಔಟ್ ಆಗಿ ನಿರ್ಗಮಿಸಿದರು.
ಇದರ ಬೆನ್ನಲ್ಲೇ ಧನಂಜಯ ಡಿಸಿಲ್ವಾ (2) ಶಕೀಬ್ ಅಲ್ ಹಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ್ದ ಅಸಲಂಕಾ 85 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅಂತಿಮವಾಗಿ 92 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 62 ರನ್ ಬಾರಿಸುವ ಮೂಲಕ ಚರಿತ್ ಅಸಲಂಕಾ 39 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಶ್ರೀಲಂಕಾ ತಂಡವು 5 ವಿಕೆಟ್ಗಳ ಜಯ ಸಾಧಿಸಿ ಶುಭಾರಂಭ ಮಾಡಿದೆ.
ಬಾಂಗ್ಲಾದೇಶ್ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯ್, ಶಕೀಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರಹಮಾನ್.
ಇದನ್ನೂ ಓದಿ: Virat Kohli: 55 ಇನಿಂಗ್ಸ್, 102 ರನ್: ಕಿಂಗ್ ಕೊಹ್ಲಿ ಮುಂದಿದೆ ವಿಶ್ವ ದಾಖಲೆ
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಾಣ.