ಕಳೆದ ಶುಕ್ರವಾರ ಕಾರು ಅಪಘಾತಕ್ಕೀಡಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಟೀಂ ಇಂಡಿಯಾ (Team India) ಕ್ರಿಕೆಟಿಗ ರಿಷಬ್ ಪಂತ್ (Rishabh Pant) ಅವರ ಜೀವ ಉಳಿಸಲು ನೆರವಾದ ಹರ್ಯಾಣ ರೋಡ್‌ವೇಸ್‌ನ ಚಾಲಕ ಸುನೀಲ್ ಕುಮಾರ್ ಮತ್ತು ಕಂಡಕ್ಟರ್ ಪರಂಜೀತ್ ಅವರನ್ನು ಇದೇ ಜನವರಿ 26 ರಂದು ಅಂದರೆ ಗಣರಾಜ್ಯೋತ್ಸವದಂದು ನಮ್ಮ ಸರ್ಕಾರ ಸನ್ಮಾನಿಸಲಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಹೇಳಿದ್ದಾರೆ. ವಾಸ್ತವವಾಗಿ ತಾಯಿ ಹಾಗೂ ಕುಟುಂದೊಂದಿಗೆ ಹೊಸ ವರ್ಷವನ್ನು ಆಚರಿಸುವ ಸಲುವಾಗಿ ಮಧ್ಯರಾತ್ರಿ 2 ಗಂಟೆಯಲ್ಲಿ ದೆಹಲಿಯಿಂದ ಉತ್ತರಾಖಂಡ್ಗೆ ಹೊರಟಿದ್ದ ಪಂತ್ ಭೀಕರ ಕಾರು ಅಪಘಾತಕ್ಕೀಡಾಗಿದ್ದರು. ಕಾರು ಅಪಘಾತದ ದೃಶ್ಯಾವಳಿಯನ್ನು ಗಮನಿಸಿದರೆ, ಪಂತ್ ಬದುಕುಳಿದಿದ್ದೆ ಪವಾಡದಂತಿದೆ. ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಬಳಿಕ ಎದುರಿನ ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ಘನಘೋರ ಅಪಘಾತದ ನಡುವೆಯೂ ಜೀವ ಉಳಿಸಿಕೊಳ್ಳುವ ಸಲುವಾಗಿ ಕಾರಿನಿಂದ ಹೊರಬಂದಿದೆ ಪಂತ್ ಅವರನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಈ ಡ್ರೈವರ್ ಹಾಗೂ ಕಂಡಕ್ಟರ್ ನೆರವಾಗಿದ್ದರು.
ಪಂತ್ ಜೀವ ಉಳಿಸುವಲ್ಲಿ ನೆರವಾಗಿದ್ದ ಹರ್ಯಾಣ ರೋಡ್‌ವೇಸ್‌ನ ಚಾಲಕ ಸುನೀಲ್ ಕುಮಾರ್ ಮತ್ತು ಕಂಡಕ್ಟರ್ ಪರಂಜೀತ್ ಅವರನ್ನು ಈಗಾಗಲೇ ಹರಿಯಾಣ ರಾಜ್ಯ ಸಾರಿಗೆ ಸಂಸ್ಥೆ ಸನ್ಮಾನಿಸಿದ್ದು, ಇದೀಗ ಉತ್ತರಾಖಂಡ ಸರ್ಕಾರ ಇಬ್ಬರನ್ನೂ ಸನ್ಮಾನಿಸಲು ನಿರ್ಧರಿಸಿದೆ. ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ವಿಷಯವನ್ನು ಪ್ರಕಟಿಸಿದ್ದಾರೆ.
The driver and conductor of Haryana Roadways saved the life of cricketer #RishabhPant. We have decided to honor them on January 26: Uttarakhand CM Pushkar Singh Dhami in Dehradun pic.twitter.com/v2Qzz0TEdU
— ANI UP/Uttarakhand (@ANINewsUP) January 1, 2023
ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಪಂತ್ ಔಟ್! ರಿಷಬ್ ಸ್ಥಾನಕ್ಕೆ ಮೂವರು ಆಟಗಾರರ ನಡುವೆ ಪೈಪೋಟಿ
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ಸರ್ಕಾರ ಜನವರಿ 26, ಗಣರಾಜ್ಯೋತ್ಸವದಂದು ಈ ಇಬ್ಬರನ್ನೂ ಗೌರವಿಸಲಿದೆ ಎಂದು ಭಾನುವಾರ ಘೋಷಿಸಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಜೊತೆಗೆ ಮಾತನಾಡಿದ ಧಾಮಿ, “ಹರ್ಯಾಣ ರೋಡ್‌ವೇಸ್‌ನ ಚಾಲಕ ಮತ್ತು ಕಂಡಕ್ಟರ್ ಕ್ರಿಕೆಟಿಗ ರಿಷಬ್ ಪಂತ್ ಅವರ ಜೀವವನ್ನು ಉಳಿಸಿದ್ದಾರೆ. ಹೀಗಾಗಿ ಜನವರಿ 26 ರಂದು ಅವರನ್ನು ಸನ್ಮಾನಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಇದಕ್ಕೂ ಮೊದಲು, ಹರಿಯಾಣ ರೋಡ್‌ವೇಸ್‌ನ ಪಾಣಿಪತ್ ಡಿಪೋದ ಜನರಲ್ ಮ್ಯಾನೇಜರ್ ಕುಲದೀಪ್ ಜಾಂಗ್ರಾ ಅವರು ಕಚೇರಿಗೆ ಹಿಂದಿರುಗಿದ ಇಬ್ಬರಿಗೂ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಿದ್ದರು. ಬಳಿಕ ಮಾತನಾಡಿದ್ದ ಕುಲದೀಪ್ ಜಾಂಗ್ರಾ, ‘ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದನ್ನು ನೋಡಿದ ನಮ್ಮ ಸಂಸ್ಥೆಯ ಚಾಲಕ ಸುಶೀಲ್ ಕುಮಾರ್ ಬಸ್ಸ್ ನಿಲ್ಲಿಸಿ, ಕಂಡಕ್ಟರ್ ಜೊತೆ ಸೇರಿ ಅಪಘಾತಕ್ಕೊಳಗಾಗಿದ್ದ ರಿಷಬ್ ಪಂತ್ಗೆ ನೆರವಾಗಿದ್ದಾರೆ. ಈ ಮೂಲಕ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಮಾನವೀಯತೆಗೆ ಮಾದರಿಯಾಗಿದ್ದಾರೆ’ ಎಂದಿದ್ದರು.
ಈ ಅಪಘಾತದಲ್ಲಿ ಪಂತ್ ಅವರ ತಲೆ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಹೀಗಾಗಿ ಪಂತ್ ಚಿಕಿತ್ಸೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗಿದೆ. ಪಂತ್ ಬಗ್ಗೆ ಬಿಸಿಸಿಐಗೆ ಇರುವ ದೊಡ್ಡ ಕಳವಳವೆಂದರೆ ಲಿಗಮೆಂಟ್ ಟಿಯರ್. ಈ ಗಾಯ ಗುಣವಾಗಲು ಮೂರು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ಫೆಬ್ರವರಿ-ಮಾರ್ಚ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ಆಡುವುದು ಕಷ್ಟ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿಯೂ ಪಂತ್ ಆಡುವುದು ಅನುಮಾನವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Sun, 1 January 23